ಮಾನಹಾನಿ ಪ್ರಕರಣದಲ್ಲಿ ಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ಗೆ 15 ದಿನ ಜೈಲು: ಜಾಮೀನು

KannadaprabhaNewsNetwork |  
Published : Sep 27, 2024, 01:26 AM ISTUpdated : Sep 27, 2024, 04:47 AM IST
ಸಂಜಯ್‌ | Kannada Prabha

ಸಾರಾಂಶ

ಮಾನಹಾನಿ ಪ್ರಕರಣವೊಂದರಲ್ಲಿ ಶಿವಸೇನೆಯ ಯುಬಿಟಿ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ದೋಷಿಯೆಂದು ಸ್ಥಳೀಯ ನ್ಯಾಯಾಲಯ 15 ದಿನಗಳ ಸಾದಾ ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಶಿಕ್ಷೆ ಜಾರಿಗೆ ತಡೆ ನೀಡಲಾಗಿದೆ.

ಮುಂಬೈ: ಮಾನಹಾನಿ ಪ್ರಕರಣವೊಂದರಲ್ಲಿ ಶಿವಸೇನೆಯ ಯುಬಿಟಿ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ದೋಷಿಯೆಂದು ಪ್ರಕಟಿಸಿರುವ ಸ್ಥಳೀಯ ನ್ಯಾಯಾಲಯ ಅವರಿಗೆ 15 ದಿನಗಳ ಸಾದಾ ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದೆ. 

ಆದರೆ ಅದರ ಬೆನ್ನಲ್ಲೇ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಶಿಕ್ಷೆ ಜಾರಿಗೆ ತಡೆ ನೀಡಿ 30 ದಿನ ಜಾಮೀನು ನೀಡಿದೆ. ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಪತ್ನಿ ಮೇಧಾ ಸೋಮಯ್ಯ ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ರಾವುತ್‌ಗೆ ಶಿಕ್ಷೆಯಾಗಿದೆ. ಮೇಧಾ ಸೋಮಯ್ಯ, ಭಯಂದರ್‌ನಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ , ನಿರ್ವಹಣೆಯಲ್ಲಿ 100 ಕೋಟಿ ರು. ಅಕ್ರಮವೆಸಗಿದ್ದರು ಎಂದು ರಾವುತ್‌ ಆರೋಪಿಸಿದ್ದರು. ಇದರ ವಿರುದ್ಧ ಮೇಧಾ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಜಾಗತಿಕ ನಾವೀನ್ಯ ಸೂಚ್ಯಂಕ; 1 ಸ್ಥಾನ ಮೇಲೇರಿದ ಭಾರತ ಈಗ 39ನೇ ಸ್ಥಾನದಲ್ಲಿ: ವರದಿ

ನವದೆಹಲಿ: ಜಾಗತಿಕ ನಾವೀನ್ಯ ಸೂಚ್ಯಂಕ ವರದಿ ಬಿಡುಗಡೆಯಾಗಿದ್ದು, ಕಳೆದ ವರ್ಷಕ್ಕಿಂತ ಒಂದು ಸ್ಥಾನ ಮೇಲೆ ಏರಿರುವ ಭಾರತ ಈ ವರ್ಷ 39ನೇ ಸ್ಥಾನ ಪಡೆದಿದೆ. ಜಿನೆವಾ ಮೂಲದ ವಲ್ಡ್‌ ಇಂಟೆಲೆಕ್ಚುಯೆಲ್‌ ಪ್ರಾಪರ್ಟಿ ಆರ್ಗನೈಸೇಷನ್‌ ಈ ವರದಿ ಬಿಡುಗಡೆ ಮಾಡಿದೆ. ನಾವೀನ್ಯತೆಯ ಮೂಲಕ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ಇತರರು ಮಾನವ ಜಾಣ್ಮೆಯನ್ನು ಹೆಚ್ಚು ಪರಿಣಾಮಕಾರಿ ಬಳಸಿಕೊಳ್ಳಲು ನೆರವು ನೀಡಿದ ಅಂಶಗಳನ್ನು ಆಧರಿಸಿ ಪಟ್ಟಿ ತಯಾರು ಮಾಡಲಾಗುತ್ತದೆ. ಸ್ವಿಜರ್ಲೆಂಡ್‌, ಸ್ವೀಡನ್‌, ಅಮೆರಿಕದ, ಸಿಂಗಾಪುರ ಮತ್ತು ಬ್ರಿಟನ್‌ ಟಾಪ್‌ 5 ಸ್ಥಾನ ಪಡೆದಿವೆ. ಚೀನಾ, ಟರ್ಕಿ, ಭಾರತ, ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್‌ ದೇಶಗಳು ಕಳೆದ 10 ಅತ್ಯಂತ ವೇಗವಾಗಿ ಪಟ್ಟಿಯಲ್ಲಿ ಏರಿಕೆ ಕಂಡ ದೇಶಗಳು ಎಂದು ವರದಿ ಹೇಳಿದೆ.

ಬ್ಯಾಗ್ ಮರೆತಿದ್ದಕ್ಕೆ 7ರ ಬಾಲಕನಿಗೆ ಥಳಿಸಿ, ಕರೆಂಟ್‌ ಶಾಕ್ ಕೊಟ್ಟ ಶಿಕ್ಷಕ

ಆಗ್ರಾ: 7 ವರ್ಷ ಬಾಲಕನೊಬ್ಬ ಶಾಲೆಗೆ ಬ್ಯಾಗ್‌ ಮರೆತು ಹೋಗಿದ್ದಕ್ಕೆ ಖಾಸಗಿ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಥಳಿಸಿ, ಕರೆಂಟ್‌ ಶಾಕ್‌ ನೀಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಜೇಮ್ಸ್‌ ಎನ್ನುವ ಬಾಲಕ ಖಾಸಗಿ ಶಾಲೆಯೊಂದರಲ್ಲಿ ಯುಕೆಜಿಯಲ್ಲಿ ಓದುತ್ತಿದ್ದು, ಸೆ.25ರಂದು ಶಾಲೆಗೆ ಬ್ಯಾಗ್‌ ಮರೆತು ಹೋಗಿದ್ದ. ಇದಕ್ಕೆ ಕೋಪಗೊಂಡ ಶಿಕ್ಷಕ ಜೇಮ್ಸ್ ಬಟ್ಟೆ, ಶೂ ಬಿಚ್ಚಿ ಕರೆಂಟ್‌ ಶಾಕ್‌ ನೀಡಿ, ಕ್ರೂರವಾಗಿ ವರ್ತಿಸಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಘಟನೆ ದಿನ ಶಾಲೆಯಿಂದ ಮನೆಗೆ ಮರಳಿದ ಬಳಿಕ ಬಾಲಕ ತನ್ನ ತಾಯಿಗೆ ನಡೆದ ವಿಚಾರ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರುಶಿಕ್ಷಕನ ವಿರುದ್ಧ ಆಲಿಗಢ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ: ಭಾರತ ಪರ ಫ್ರಾನ್ಸ್‌ ಬ್ಯಾಟಿಂಗ್‌

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಸ್ಥಾನ ಪಡೆಯಲು ಭಾರತ ಯತ್ನಿಸುತ್ತಿರುವ ನಡುವೆಯೇ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಭಾರತದ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಫ್ರೆಂಚ್‌ ಅಧ್ಯಕ್ಷ, ‘ನಾವು ನಿರ್ಬಂಧಿಸಲಾದ ಭದ್ರತಾ ಮಂಡಳಿಯನ್ನು ಹೊಂದಿದ್ದೇವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಹಾಗಾಗಿ ನಾವು ಹೆಚ್ಚು ಪ್ರಾತಿನಿಧಿಕವಾಗಬೇಕು. ಹೀಗಾಗಿ ಫ್ರಾನ್ಸ್‌ ಭದ್ರತಾ ಮಂಡಳಿಯನ್ನು ವಿಸ್ತರಿಸುವ ನಿಲುವಿನ ಪರವಿದೆ. ಜರ್ಮನಿ, ಜಪಾನ್ ಭಾರತ ಮತ್ತು ಬ್ರೆಜಿಲ್ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಬೇಕು’ ಎಂದಿದ್ದಾರೆ.

ಕಾಂಗ್ರೆಸ್ ಜೊತೆ ಪವಾರ್‌ ಎನ್‌ಸಿಪಿ ಪಕ್ಷ ವಿಲೀನ?: ಸುಪ್ರಿಯಾ ಪರೋಕ್ಷ ಸುಳಿವು

ನವದೆಹಲಿ: ಕಾಂಗ್ರೆಸ್‌ನೊಂದಿಗೆ ಎನ್‌ಸಿಪಿ (ಶರದ್‌ ಪವಾಣ್‌ ಬಣ) ವಿಲೀನವಾಗಬಹುದು ಎನ್ನುವ ವದಂತಿಗಳ ನಡುವೆಯೇ, ‘ನಾವು ಸೈದ್ಧಾಂತಿಕವಾಗಿ ಕಾಂಗ್ರೆಸ್‌ಗೆ ಹತ್ತಿರವಾಗಿದ್ದೇವೆ’ ಎಂದು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ. 

ಈ ಮೂಲಕ ಭವಿಷ್ಯದಲ್ಲಿ ವಿಲೀನದ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಇಂಥ ವದಂತಿ ಬಗ್ಗೆ ಪ್ರಶ್ನಿಸಿದಾಗ, ‘ಏನಾಗುತ್ತದೆ ಎಂಬುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಆದರೆ ನಮ್ಮ ಸಿದ್ಧಾಂತವು ಕಾಂಗ್ರೆಸ್‌ನೊಂದಿಗೆ ಹೊಂದಿಕೆಯಾಗುತ್ತದೆ. ಸೈದ್ಧಾಂತಿಕವಾಗಿ ಕಾಂಗ್ರೆಸ್‌ಗೆ ಹತ್ತಿರವಾಗಿದ್ದೇವೆ’ಎಂದಿದ್ದಾರೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಶರದ್ ಪವಾರ್‌, ವಿದೇಶಿ ಪೌರತ್ವ ಹೊಂದಿರುವ ಸೋನಿಯಾ ಗಾಂಧಿಗೆ ಪ್ರಧಾನಿ ಹುದ್ದೆ ನೀಡುವ ಪ್ರಸ್ತಾಪವನ್ನು ವಿರೋಧಿಸಿದಕ್ಕೆ ಕಾಂಗ್ರೆಸ್‌ ಅವರನ್ನು ಉಚ್ಛಾಟಿಸಿತ್ತು. ಬಳಿಕ ಪವಾರ್‌ ಪಕ್ಷದಿಂದ ಹೊರ ನಡೆದು 1999ರಲ್ಲಿ ಎನ್‌ಸಿಪಿ ಸ್ಥಾಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ