ಪಿಟಿಐ ನವದೆಹಲಿ
ಜಮ್ಮು-ಕಾಶ್ಮೀರ ರಾಜ್ಯಪಾಲರಾಗಿದ್ದುಕೊಂಡು ಕೇಂದ್ರ ಸರ್ಕಾರದ ವಿರುದ್ಧವೇ ತೊಡೆತಟ್ಟಿ ನಿಂತು ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ ಸತ್ಯಪಾಲ ಮಲಿಕ್ ಅವರಿಗೆ ಈಗ ಸಿಬಿಐ ಬಿಸಿ ತಾಗಿದೆ. ಚೆನಾಬ್ ಕಣಿವೆಯ 2,200 ಕೋಟಿ ರು.ಗಳ ‘ಕಿರು’ ಜಲವಿದ್ಯುತ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಲಿಕ್ ಅವರ ಆಸ್ತಿಪಾಸ್ತಿ ಮತ್ತು ಇತರ 29 ಸ್ಥಳಗಳಲ್ಲಿ ಸಿಬಿಐ ಗುರುವಾರ ದಾಳಿ ನಡೆಸಿದೆ.ಬೆಳಗ್ಗೆಯಿಂದಲೇ ದೆಹಲಿ ಮತ್ತು ಮುಂಬೈ ಜೊತೆಗೆ ಜಮ್ಮು-ಕಾಶ್ಮೀರ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಹಲವು ನಗರಗಳ 30 ಸ್ಥಳಗಳಲ್ಲಿ ಸುಮಾರು 100 ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಿಲ್ಲಿಯ ಆರ್.ಕೆ. ಪುರಂ, ದ್ವಾರಕಾ ಮತ್ತು ಏಷ್ಯನ್ ಗೇಮ್ಸ್ ವಿಲೇಜ್, ಗುರುಗ್ರಾಮ ಮತ್ತು ಬಾಗ್‌ಪತ್‌ನಲ್ಲಿರುವ ಮಲಿಕ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಇನ್ನು ಮಲಿಕ್ ಆಪ್ತರಾದ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್ ಅಧಿಕಾರಿಗಳ ಆಸ್ತಿಗಳ ಮೇಲೂ ದಾಳಿ ನಡೆದಿದೆ.ಮಲಿಕ್ ಕಿಡಿ:ದಾಳಿಗೆ ಮಲಿಕ್ ಕಿಡಿಕಾರಿದ್ದಾರೆ. ‘ಕಳೆದ 3-4 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ. ಇಷ್ಟೆಲ್ಲಾ ಆದರೂ ಸರ್ಕಾರಿ ಸಂಸ್ಥೆಗಳ ಮೂಲಕ ನನ್ನ ಮನೆ ಮೇಲೆ ಸರ್ವಾಧಿಕಾರಿ ದಾಳಿ ನಡೆಸುತ್ತಿದ್ದಾರೆ. ನನ್ನ ಚಾಲಕ ಮತ್ತು ನನ್ನ ಸಹಾಯಕರ ಮೇಲೂ ದಾಳಿ ನಡೆಸಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ನಾನೊಬ್ಬ ರೈತನ ಮಗ, ಈ ದಾಳಿಗಳಿಗೆ ನಾನು ಹೆದರುವುದಿಲ್ಲ. ನಾನು ರೈತರೊಂದಿಗೆ ಇದ್ದೇನೆ’ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.ಏನಿದು ಹಗರಣ?:ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ)ಗೆ ಸಂಬಂಧಿಸಿದ ಸಿವಿಲ್-ವರ್ಕ್ ಗುತ್ತಿಗೆಯನ್ನು ನೀಡುವಾಗ 2,200 ಕೋಟಿ ರು.ಗಳ ಮೊತ್ತದ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸಲಾಗಿದೆ. ಈ ವೇಳೆ ಮಲಿಕ್ ಕಾಶ್ಮೀರ ರಾಜ್ಯಪಾಲರಾಗಿದ್ದರು ಹಾಗೂ ಗುತ್ತಿಗೆ ನೀಡಿಕೆಯಲ್ಲಿ ಅವರ ಪಾತ್ರವೂ ಇತ್ತು ಎಂದು ಆರೋಪಿಸಲಾಗಿದೆ. ಈ ನಡುವೆ ಮಲಿಕ್, ತಮಗೆ 2 ಫೈಲ್ ಕ್ಲಿಯರ್ ಮಾಡಲು ಖಾಸಗಿ ಕಂಪನಿಯೊಂದು 300 ಕೋಟಿ ರು. ಲಂಚದ ಆಫರ್ ನೀಡಿತ್ತು ಎಂದೂ ಆರೋಪಿಸಿದ್ದರು.