ಬೀದಿನಾಯಿಗಳನ್ನು ಶೆಡ್‌ಗೆ ಹಾಕುವ ತೀರ್ಪು ರದ್ದು

KannadaprabhaNewsNetwork |  
Published : Aug 23, 2025, 02:00 AM ISTUpdated : Aug 23, 2025, 04:52 AM IST
ಬೀದಿನಾಯಿ | Kannada Prabha

ಸಾರಾಂಶ

ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಶೆಡ್‌ಗೆ ಹಾಕಿ ಎಂದು ಆ.11ರಂದು ತಾನೇ ನೀಡಿದ್ದ ಸ್ವಯಂಪ್ರೇರಿತ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಪಾಡು

  ನವದೆಹಲಿ :  ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಶೆಡ್‌ಗೆ ಹಾಕಿ ಎಂದು ಆ.11ರಂದು ತಾನೇ ನೀಡಿದ್ದ ಸ್ವಯಂಪ್ರೇರಿತ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿದ್ದು, ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಮತ್ತು ಲಸಿಕೆ ನೀಡಿ ಸ್ವಸ್ಥಾನಕ್ಕೇ ಬಿಡುಗಡೆ ಮಾಡಬೇಕು ಎಂದು ಶುಕ್ರವಾರ ಆದೇಶ ಹೊರಡಿಸಿದೆ. ಇದೇ ವೇಳೆ, ಈ ಹಿಂದೆ ನೀಡಲಾಗಿದ್ದ ಆದೇಶ ಅತ್ಯಂತ ಕಠಿಣವಾಗಿತ್ತು ಎಂದೂ ವಿಷಾದ ವ್ಯಕ್ತಪಡಿಸಿದೆ.

ಈ ಹಿಂದೆ ನ್ಯಾ। ಆರ್‌. ಮಹಾದೇವನ್‌ ಹಾಗೂ ನ್ಯಾ। ಜೆ.ಬಿ. ಪರ್ದೀವಾಲಾ ಅವರ ದ್ವಿಸದಸ್ಯ ಪೀಠ ನೀಡಿದ್ದ ಆದೇಶವನ್ನು ಪರಿಷ್ಕರಿಸಿದ ನ್ಯಾ। ವಿಕ್ರಂ ನಾಥ್‌, ಸಂದೀಪ್‌ ಮೆಹ್ತಾ ಮತ್ತು ಎನ್‌.ವಿ. ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠ, ‘ದೆಹಲಿ, ಗಾಜಿಯಾಬಾದ್‌, ನೋಯ್ಡಾ, ಫರೀದಾಬಾದ್‌, ಗುರುಗ್ರಾಮ ಸೇರಿದಂತೆ ಎಲ್ಲಾ ಕಡೆಗಳಿಂದ ನಾಯಿಗಳನ್ನು ಹಿಡಿದು ತಂದು, ಸಂತಾನಹರಣ ಚಿಕಿತ್ಸೆ ನೀಡಿ, ಅವುಗಳನ್ನು ವೈರಾಣುಮುಕ್ತಗೊಳಿಬೇಕು. ರೋಗ ಬಾರದಂತೆ ಲಸಿಕೆ ನೀಡಿ, ಬಳಿಕ ಎಲ್ಲಿಂದ ಹಿಡಿದು ತರಲಾಗಿತ್ತೋ ಅದೇ ಜಾಗದಲ್ಲಿ ಬಿಡುಗಡೆ ಮಾಡಬೇಕು’ ಎಂದು ಆದೇಶಿಸಿತು.

ಆದರೆ, ರೇಬಿಸ್‌ ಸೋಂಕಿತ ಅಥವಾ ಆಕ್ರಮಣಕಾರಿಯಾಗಿ ನಡೆದುಕೊಳ್ಳುವ ಶ್ವಾನಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಅಂತಹವುಗಳನ್ನು ಚಿಕಿತ್ಸೆಯ ನಂತರ ಪ್ರತ್ಯೇಕವಾಗಿ ಶೆಡ್‌ಗಳನಲ್ಲಿ ಇರಿಸಬೇಕು ಎಂದು ತಾಕೀತು ಮಾಡಿತು.

ವರದಿಗೆ ಸೂಚನೆ:ಆದೇಶ ಪಾಲನೆಗೆ ಬಳಸಲಾದ ಸಂಪನ್ಮೂಲಗಳು, ನಾಯಿ ಶೆಡ್‌, ಪಶುವೈದ್ಯರು, ನಾಯಿ ಹಿಡಿಯುವ ಸಿಬ್ಬಂದಿ, ವಿಶೇಷವಾಗಿ ಮಾರ್ಪಡಿಸಿದ ವಾಹನಗಳು ಮತ್ತು ಪಂಜರಗಳ ಸಂಪೂರ್ಣ ವಿವರಗಳೊಂದಿಗೆ ತನ್ನ ಆದೇಶದ ಪಾಲನೆಯ ಅಫಿಡವಿಟ್ ಅನ್ನು ಸಲ್ಲಿಸುಬೇಕು ಎಂದು ಕೋರ್ಟು, ದಿಲ್ಲಿ ನಗರಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿತು. ಜತೆಗೆ, 8 ವಾರಗಳ ಬಳಿಕ ಮತ್ತೆ ಇದರ ವಿಚಾರಣೆ ಮಾಡುವುದಾಗಿ ಹೇಳಿತು.

ಹಿಂದಿನ ಆದೇಶಕ್ಕೆ ವಿಷಾದ:

‘ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಮೌಲ್ಯಮಾಪನ ಮಾಡದೆ ಎಲ್ಲಾ ಬೀದಿ ನಾಯಿಗಳನ್ನು ಎತ್ತಿಕೊಂಡು ಶೆಡ್‌ಗೆ ಹಾಕಬೇಕು ಎಂಬ ಸೂಚನೆಯು ಗೊಂದಲಮಯ ಪರಿಸ್ಥಿತಿಗೆ ಕಾರಣವಾಗಬಹುದು. ಏಕೆಂದರೆ ಅಂತಹ ನಿರ್ದೇಶನಗಳನ್ನು ಪಾಲಿಸುವುದು ಅಸಾಧ್ಯವಾಗಬಹುದು’ ಎಂದ ತ್ರಿಸದಸ್ಯ ಪೀಠ, ‘ಲಸಿಕೆ ಪಡದ ಹಾಗೂ ಸಂತಾನಹರಣಕ್ಕೆ ಒಳಗಾದ ನಾಯಿಗಳನ್ನು ಸ್ವಸ್ಥಾನಕ್ಕೆ ಬಿಡಬೇಡಿ ಎಂಬ ನಮ್ಮದೇ ದ್ವಿಸದಸ್ಯ ಪೀಠ ನೀಡಿದ್ದ ಆದೇಶ ನಮ್ಮ ಅನಿಸಿಕೆ ಪ್ರಕಾರ ಕಠಿಣವಾಗಿತ್ತು’ ಎಂದು ವಿಷಾದ ವ್ಯಕ್ತಪಡಿಸಿತು.

ಏನಿದು ವಿವಾದ?:

ದಿಲ್ಲಿಯಲ್ಲಿ ಬೀದಿನಾಯಿ ಕಡಿತ ಪ್ರಕರಣಗಳು ಹೆಚ್ಚಿ, ಅದರಿಂದ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ರೇಬಿಸ್‌ ಸೋಂಕು ತಗುಲುತ್ತಿರುವುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ, ಜು.28ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ‘ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ಎಲ್ಲ ಬೀದಿ ನಾಯಿಗಳನ್ನು ಶೆಡ್‌ಗೆ ಹಾಕಬೇಕು’ ಎಂದು ಆ.11ರಂದು ತೀರ್ಪು ನೀಡಿತ್ತು. ಆ ಆದೇಶಕ್ಕೆ ಪ್ರಾಣಿಪ್ರಿಯರು ಹಾಗೂ ಕೆಲವು ರಾಜಕೀಯ ನಾಯಕರ ವಿರೋಧ ಕೇಳಿಬಂದಿತ್ತು. ಹೀಗಾಗಿ ಮುಖ್ಯ ನ್ಯಾಯಾಧೀಶ ನ್ಯಾ। ಬಿ.ಆರ್‌. ಗವಾಯಿ ಅವರ ಸೂಚನೆ ಮೇರೆಗೆ ತ್ರಿಸದಸ್ಯ ಪೀಠ ರಚನೆ ಆಗಿತ್ತು. ಈಗ ತ್ರಿಸದಸ್ಯ ಪೀಠ, ಹಿಂದಿನ ಪೀಠದ ಆದೇಶದಲ್ಲಿ ಮಾರ್ಪಾಡು ಮಾಡು ಆದೇಶ ಹೊರಡಿಸಿದೆ. ==

ಕಂಡಕಂಡಲ್ಲಿ ಬೀದಿನಾಯಿಗೆ ಆಹಾರ ಹಾಕಬೇಡಿ: ಸುಪ್ರೀಂ ಎಚ್ಚರಿಕೆ 

ನವದೆಹಲಿ: ‘ನಾಯಿಗಳಿಗೆ ಬೀದಿಗಳಲ್ಲಿ ಸಿಕ್ಕಸಿಕ್ಕಲ್ಲಿ ಆಹಾರ ಹಾಕಬಾರದು’ ಎಂದು ಕಟ್ಟೆಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ಅದಕ್ಕಾಗಿ ಮೀಸಲು ಸ್ಥಳಗಳನ್ನು ಸ್ಥಾಪಿಸುವಂತೆ ನಗರಪಾಲಿಕೆಗಳಿಗೆ ಸೂಚಿಸಿದೆ.

‘ನಾಯಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಅನುಗುಣವಾಗಿ ಪ್ರತಿ ಪುರಸಭೆಯ ವಾರ್ಡ್‌ಗಳಲ್ಲಿ ನಾಯಿಗಳಿಗೆ ಆಹಾರ ಹಾಕುವ ಜಾಗಗಳನ್ನು ನಿರ್ಮಿಸಬೇಕು. ಜತೆಗೆ, ಸೂಚನಾ ಫಲಕವನ್ನೂ ಅಳವಡಿಸಬೇಕು’ ಎಂದು ಹೇಳಿದೆ.

ಜತೆಗೆ, ‘ಕಂಡಕಂಡಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದರಿಂದ ಅನೇಕ ಅನಿತಕರ ಘಟನೆಗಳು ಸಂಭವಿಸಿರುವ ಅನೇಕ ವರದಿಗಳಿವೆ. ರಸ್ತೆಯಲ್ಲಿ ತಮ್ಮಷ್ಟಕ್ಕೆ ನಡೆದುಕೊಂಡು ಹೋಗುವವರಿಗೂ ಭಾರೀ ತೊಂದರೆಯಾಗುತ್ತದೆ. ಹಾಗಾಗಿ ಆದೇಶ ಮೀರಿ ಯಾರಾದರೂ ಬೀದಿಯಲ್ಲಿ ನಾಯಿಗಳಿಗೆ ಆಹಾರ ಕೊಡುವುದು ಪತ್ತೆಯಾದರೆ, ಅಂತಹವರ ವಿರುದ್ಧ ಸಂಬಂಧಿತ ಕಾನೂನು ಚೌಕಟ್ಟಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೀಠ ಹೇಳಿದೆ.

ಅಂತಹ ಘಟನೆಗಳು ಕಂಡುಬಂದಲ್ಲಿ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ ಸ್ಥಾಪಿಸಲೂ ಸೂಚಿಸಿದೆ. 

ಶ್ವಾನ ಪ್ರಿಯರೇ, ನಾಯಿಗಾಗಿ

ಠೇವಣಿ ಇಡಿ: ಸುಪ್ರೀಂ ಆದೇಶ 

ಬೀದಿ ನಾಯಿಗಳ ವಿಚಾರದಲ್ಲಿ ಕೋರ್ಟ್‌ ಬಾಗಿಲು ತಟ್ಟಿದ್ದ ಎಲ್ಲಾ ಶ್ವಾನಪ್ರಿಯರು ಮತ್ತು ನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಎನ್‌ಜಿಒಗಳು ಕ್ರಮವಾಗಿ 25,000 ರು. ಮತ್ತು 2 ಲಕ್ಷ ರು. ಠೇವಣಿ ಇಡಬೇಕು. ಆ ಮೊತ್ತವನ್ನು ನಾಯಿಗಳಿಗಾಗಿ ಮೂಲಸೌಕರ್ಯ ನಿರ್ಮಾಣಕ್ಕೆ ಬಳಸಲಾಗುವುದು. ಹಣ ಜಮೆ ಮಾಡದೇ ಇದ್ದರೆ ಈ ವಿಷಯದಲ್ಲಿ ವಾದಿಸುವ ಯಾವುದೇ ಅಧಿಕಾರ ಇರುವುದಿಲ್ಲ’ ಎಂದು ತ್ರಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿತು.

ಪ್ರಾಣಿ ಪ್ರಿಯರು ಇಚ್ಛಿಸಿದರೆ ಬೀದಿನಾಯಿಗಳನ್ನು ದತ್ತು ಪಡೆಯಬಹುದು ಎಂದ ಕೋರ್ಟ್‌, ‘ಅಂತಹವರು ಸಂಬಂಧಪಟ್ಟ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಒಮ್ಮೆ ದತ್ತು ಪಡೆದ ನಾಯಿಗಳು ಬೀದಿಗಳಿಗೆ ಹಿಂತಿರುಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾ’ ಎಂದು ಹೇಳಿತು.

‘ನಮ್ಮಆದೇಶದಂತೆ, ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಯಾರಾದರು ಅಡ್ಡಿ ಮಾಡಿದಲ್ಲಿ, ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದೂ ಪೀಠ ಎಚ್ಚರಿಸಿತು. 

ಬೀದಿನಾಯಿಗೆ ಸಂಬಂಧಿಸಿದ ದೇಶದ ಎಲ್ಲ ಕೇಸು ಸುಪ್ರೀಂಗೆ

ನವದೆಹಲಿ :  ಬೀದಿನಾಯಿಗಳ ಸಮಸ್ಯೆ ಪ್ರಕರಣಗಳನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಈ ಮೂಲಕ, ಸಮಸ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಅನ್ವಯಿಸುವಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

ಬೀದಿ ನಾಯಿಗಳು ಮತ್ತು ಅವುಗಳಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಹಾಗೂ ವಿಚಾರಣೆ ಬಾಕಿ ಇರುವ ದೂರುಗಳನ್ನು ಸುಪ್ರೀಂ ಕೋರ್ಟ್‌ಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಶುಕ್ರವಾರ ಸೂಚಿಸಿದೆ.

PREV
Read more Articles on

Recommended Stories

ಬಿಹಾರದಲ್ಲಿ ಏಷ್ಯಾದ ಅತಿ ಅಗಲದ 6 ಲೇನ್‌ ಸೇತುವೆ : 34 ಮೀ. ಅಗಲ
ಸಿಎಂಗಳ ಕ್ರಿಮಿನಲ್ ಕೇಸು : ರೇವಂತ್‌ ನಂ.1, ಸ್ಟಾಲಿನ್‌ ನಂ.2, ನಾಯ್ಡು ನಂ.3, ಸಿದ್ದು ನಂ.4