ದಿಲ್ಲಿ ಬೀದಿ ನಾಯಿಗಳ ಶೆಡ್‌ಗೆ ಹಾಕಿ : ಸುಪ್ರೀಂ ಖಡಕ್‌ ಆದೇಶ

KannadaprabhaNewsNetwork |  
Published : Aug 12, 2025, 12:30 AM ISTUpdated : Aug 12, 2025, 04:55 AM IST
ಬೀದಿ ನಾಯಿ  | Kannada Prabha

ಸಾರಾಂಶ

ಬೀದಿನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಶೀಘ್ರದಲ್ಲೇ ಆಶ್ರಯ ತಾಣಗಳಿಗೆ (ಶೆಡ್‌ಗೆ) ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನವದೆಹಲಿ :  ಬೀದಿನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಶೀಘ್ರದಲ್ಲೇ ಆಶ್ರಯ ತಾಣಗಳಿಗೆ (ಶೆಡ್‌ಗೆ) ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಇದನ್ನು ತಡೆಯುವ ಪ್ರಾಣಿಪ್ರಿಯರು ಅಥವಾ ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಖಡಕ್‌ ಸೂಚನೆ ನೀಡಿದೆ.

ಅಲ್ಲದೆ, ಇನ್ನು 6ರಿಂದ 8 ವಾರಗಳ ಒಳಗೆ ತಲಾ 5000 ನಾಯಿಗಳನ್ನು ಇಡಬಲ್ಲ ಶೆಡ್‌ ತೆರೆಯುವಂತೆ ದಿಲ್ಲಿ ಸರ್ಕಾರಕ್ಕೆ ಆದೇಶಿಸಿದೆ.

‘ರಾಷ್ಟ್ರ ರಾಜಧಾನಿಯ ವಲಯದಲ್ಲಿ ಈ ವರ್ಷ 26 ಸಾವಿರ ಬೀದಿ ನಾಯಿ ಕಡಿತ ಪ್ರಕರಣ ಘಟಿಸಿವೆ. ಅಲ್ಲದೆ, ಬೀದಿನಾಯಿ ಕಡಿತದಿಂದಾಗಿ ರೇಬೀಸ್ ಹೆಚ್ಚುತ್ತಿದೆ’ ಎಂದು ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾ। ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ। ಆರ್. ಮಹಾದೇವನ್ ಅವರಿದ್ದ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ದಿಲ್ಲಿ ಸರ್ಕಾರ ಹಾಗೂ ನಿವಾಸಿಗಳು ಸ್ವಾಗತಿಸಿದ್ದಾರೆ. ಪ್ರಾಣಿ ದಯಾ ಸಂಸ್ಥೆಗಳು ಹಾಗೂ ಕಾರ್ಯಕರ್ತರು ವಿರೋಧಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು?:

ದೆಹಲಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಆಶ್ರಯತಾಣಗಳಿಗೆ ಕಳಿಸುವಂತೆ ಸರ್ಕಾರ ಮತ್ತು ಗುರುಗ್ರಾಮ, ನೋಯ್ಡಾ, ಗಾಜಿಯಾಬಾದ್‌ನ ನಾಗರಿಕ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಆಶ್ರಯತಾಣಗಳು ನಾಯಿಗಳಿಗೆ ಸಂತಾನಹರಣ ಮತ್ತು ರೋಗನಿರೋಧಕ ಚಿಕಿತ್ಸೆ ನಡೆಸಲು ಬೇಕಾದ ಸಾಕಷ್ಟು ಸಿಬ್ಬಂದಿಗಳನ್ನು ಹೊಂದಿರಬೇಕು ಎಂದೂ ಸೂಚಿಸಿದೆ.

‘ರೇಬೀಸ್‌ಗೆ ಕಾರಣವಾಗುವ ನಾಯಿಕಡಿತಕ್ಕೆ ಶಿಶುಗಳು ಮತ್ತು ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ಬಲಿಯಾಗಬಾರದು. ಈ ಕ್ರಮವು ಯುವಕರು ಮತ್ತು ಹಿರಿಯರ ಮನಸ್ಸಿನಲ್ಲಿ ವಿಶ್ವಾಸವನ್ನು ತುಂಬಬೇಕು. ಅವರು ಬೀದಿನಾಯಿ ಕಚ್ಚುವ ಭಯವಿಲ್ಲದೆ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸುವಂತಾಗಬೇಕು. ದೆಹಲಿ ಪ್ರದೇಶದ ಯಾವುದೇ ಭಾಗದಿಂದ ಎತ್ತಿಕೊಂಡ ಒಂದೇ ಒಂದು ನಾಯಿಯನ್ನು ಆಶ್ರಯತಾಣಗಳು ಬೀದಿಗೆ/ಸಾರ್ವಜನಿಕ ಸ್ಥಳಗಳಿಗೆ ಹಿಂತಿರುಗಿಸಬಾರದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಾಣಿಪ್ರಿಯರು ಮೂಗು ತೂರಿಸುವಂತಿಲ್ಲ!

ನಾಯಿಗಳನ್ನು ಆಶ್ರಯತಾಣಗಳಿಗೆ ಕಳಿಸುವ ಕ್ರಮವನ್ನು ತಡೆಯಲು ಯಾರೇ ಮುಂದಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರ್ಟ್‌ ನಿರ್ದೇಶನ ನೀಡಿದೆ.

‘ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಈ ಕ್ರಮಕ್ಕೆ ಅಡ್ಡಿಪಡಿಸಿದರೆ, ಅಂತಹ ಯಾವುದೇ ಪ್ರತಿರೋಧದ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಾಣಿ ಕಾರ್ಯಕರ್ತರು ಮತ್ತು ಪ್ರಾಣಿಪ್ರೇಮಿಗಳು ಎಂದು ಕರೆಯಲ್ಪಡುವವರು ರೇಬೀಸ್‌ಗೆ ಬಲಿಯಾದ ಮಕ್ಕಳನ್ನು ಮರಳಿ ತರಲು ಸಾಧ್ಯವಾಗುತ್ತದೆಯೇ? ಅವರು ಆ ಮಕ್ಕಳಿಗೆ ಜೀವವನ್ನು ಮರಳಿ ಕೊಡುತ್ತಾರೆಯೇ?’ ಎಂದು ಪೀಠ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಮನೇಕಾ ಗಾಂಧಿ ಗರಂ

ಸುಪ್ರೀಂ ಕೋರ್ಟ್‌ ಆದೇಶ ಅವೈಜ್ಞಾನಿಕ. ದೆಹಲಿಯಲ್ಲಿ 3 ಲಕ್ಷ ನಾಯಿಗಳಿವೆ. ಅವುಗಳ ಆಶ್ರಯಕ್ಕೆ 3000 ಆಶ್ರಯ ಕೇಂದ್ರ ಬೇಕು. ಪ್ರತಿಯೊಂದಕ್ಕೂ ಒಳಚರಂಡಿ, ನೀರು, ಶೆಡ್, ಅಡುಗೆಮನೆ ಮತ್ತು ಕಾವಲುಗಾರನ ಅಗತ್ಯವಿದೆ. ಅದಕ್ಕೆ ಸುಮಾರು 15,000 ಕೋಟಿ ರು. ವೆಚ್ಚವಾಗುತ್ತದೆ. ಇದಕ್ಕಾಗಿ ದೆಹಲಿಯಲ್ಲಿ 15,000 ಕೋಟಿ ರು. ಇದೆಯೇ?- ಮನೇಕಾ ಗಾಂಧಿ, ಪ್ರಾಣಿ ದಯಾ ಕಾರ್ಯಕರ್ತೆ

ದೆಹಲಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಡಿತ, ರೇಬಿಸ್‌ ಕೇಸ್‌ ಹೆಚ್ಚಳ ವಿರುದ್ಧ ಸುಪ್ರೀಂಕೋರ್ಟ್‌ ಕಳವಳ

ರಾಜಧಾನಿ ಎಲ್ಲಾ ಬೀದಿನಾಯಿಗಳನ್ನು 3 ತಿಂಗಳಲ್ಲಿ ಜನವಸತಿ ಪ್ರದೇಶದಿಂದ ತೆರವು ಮಾಡಲು ಆದೇಶ

ಬೀದಿ ನಾಯಿಗಳಿಗಾಗಿ ನಗರದ ಹೊರವಲಯದಲ್ಲಿ ಆಶ್ರಯತಾಣ ಸ್ಥಾಪಿಸಿ ಅಲ್ಲಿಗೆ ವರ್ಗಾಯಿಸಲು ಸೂಚನೆ

ಇದಕ್ಕೆ ಯಾರಾದರೂ ಅಡ್ಡಿ ಮಾಡಿದರೆ ನಮಗೆ ತಿಳಿಸಿ, ನಾವು ಅವರ ವಿರುದ್ಧ ಕ್ರಮ ಕೈಗೊಳ್ತೀವಿ: ಸುಪ್ರೀಂ

ಸುಪ್ರೀಂ ಆದೇಶಕ್ಕೆ ದಿಲ್ಲಿ ಸರ್ಕಾರ, ನಿವಾಸಿಗಳ ಸ್ವಾಗತ. ಪ್ರಾಣಿ ದಯಾ ಸಂಸ್ಥೆಗಳಿಂದ ತೀವ್ರ ವಿರೋಧ

PREV
Read more Articles on

Recommended Stories

ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌
ಪಾಕ್‌ನ ಭಾರತ ದೂತರಿಗೆಪತ್ರಿಕೆ, ಗ್ಯಾಸ್‌, ನೀರು ಕಟ್‌ - ಮತ್ತೆ ರಾಜತಾಂತ್ರಿಕ ಸಮರ