ಉತ್ತರಪ್ರದೇಶದ ಸಂಭಲ್‌ ಮಸೀದಿ ಚೆಂಡು ಹೈಕೋರ್ಟ್‌ಗೆ : ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ತಾಕೀತು

KannadaprabhaNewsNetwork |  
Published : Nov 30, 2024, 12:48 AM ISTUpdated : Nov 30, 2024, 04:57 AM IST
ಸಂಭಲ್ ಮಸೀದಿ | Kannada Prabha

ಸಾರಾಂಶ

ಉತ್ತರಪ್ರದೇಶದ ಸಂಭಲ್‌ನಲ್ಲಿ ಮೊಘಲ್‌ ಅರಸ ಬಾಬರ್‌ 1526ರಲ್ಲಿ ಹಿಂದು ದೇಗುಲವನ್ನು ಕೆಡವಿ ಶಾಹಿ ಜಾಮಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂಬ ಪ್ರಕರಣ ಸಂಬಂಧ ಕೆಳಹಂತದ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ಬ್ರೇಕ್‌ ಒತ್ತಿದೆ.

 ನವದೆಹಲಿ : ಉತ್ತರಪ್ರದೇಶದ ಸಂಭಲ್‌ನಲ್ಲಿ ಮೊಘಲ್‌ ಅರಸ ಬಾಬರ್‌ 1526ರಲ್ಲಿ ಹಿಂದು ದೇಗುಲವನ್ನು ಕೆಡವಿ ಶಾಹಿ ಜಾಮಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂಬ ಪ್ರಕರಣ ಸಂಬಂಧ ಕೆಳಹಂತದ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ಬ್ರೇಕ್‌ ಒತ್ತಿದೆ.

ಹಿಂಸೆಗೆ ಸಾಕ್ಷಿಯಾದ ಸಂಭಲ್‌ ನಗರದಲ್ಲಿ ಉತ್ತರಪ್ರದೇಶ ಸರ್ಕಾರ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.

ಅಲ್ಲದೆ ವಿಚಾರಣಾ ನ್ಯಾಯಾಲಯದ ಸೂಚನೆ ಪ್ರಕಾರ ಕೋರ್ಟ್‌ ಕಮಿಷನರ್‌ ಮಸೀದಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಮುಚ್ಚಿಡಬೇಕು. ಮುಂದಿನ ಆದೇಶದವರೆಗೂ ಅದನ್ನು ತೆರೆಯುವಂತಿಲ್ಲ ಎಂದು ನಿರ್ದೇಶನ ನೀಡಿದೆ.

ಇದೇ ವೇಳೆ, ವಿಚಾರಣಾ ನ್ಯಾಯಾಲಯದ ಸಮೀಕ್ಷೆ ಆದೇಶದ ವಿರುದ್ಧ ತನ್ನ ಬಳಿ ಅರ್ಜಿ ಸಲ್ಲಿಸಿರುವ ಶಾಹಿ ಜಾಮಾ ಮಸೀದಿ ಸಮಿತಿ ಮುಂದಿನ ಮೂರು ದಿನಗಳಲ್ಲಿ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಬೇಕು. ಕೆಳ ಕೋರ್ಟ್‌ ಆದೇಶದ ವಿರುದ್ಧ ಮಸೀದಿ ಸಮಿತಿ ನೇರವಾಗಿ ಏಕೆ ಸುಪ್ರೀಂಕೋರ್ಟ್‌ಗೆ ಬಂದಿದೆ? ಆದೇಶದ ಬಗ್ಗೆ ಏನೇ ಕಳವಳಗಳು ಇರಬಹುದು. ಆದರೆ ಸಂವಿಧಾನದ 227ನೇ ವಿಧಿಯ ಪ್ರಕಾರ, ಕೆಳ ಹಂತದ ಕೋರ್ಟ್‌ಗಳ ಮೇಲೆ ಹೈಕೋರ್ಟ್‌ಗೆ ಅಧಿಕಾರವಿದೆ. ಅದನ್ನು ತಿದ್ದುಪಡಿ ಮಾಡಲಾಗದು. ಹೀಗಾಗಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಬೇಕು ಎಂದು ಹೇಳಿದೆ.

ಏನಿದು ಪ್ರಕರಣ?:

ಶಾಹಿ ಜಾಮಾ ಮಸೀದಿ ಈ ಹಿಂದೆ ದೇಗುಲವಾಗಿತ್ತು ಎಂಬ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ನ.19ರಂದು ಜಿಲ್ಲಾ ಸಿವಿಲ್‌ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ನ.24ರಂದು ಸಂಭಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದು ನಾಲ್ವರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿ ಸಮಿತಿ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಕೆಳ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ ನೀಡಿದೆ.

ಆದರೆ ಶುಕ್ರವಾರ ಈ ಆದೇಶ ಹೊರಬೀಳುವ ಮೊದಲು 10 ದಿನದಲ್ಲಿ ಸಮೀಕ್ಷೆ ವರದಿ ನೀಡುವಂತೆ ಕೆಳ ನ್ಯಾಯಾಲಯ ಕೋರ್ಟ್‌ ಕಮಿಷನರ್‌ ಅವರಿಗೆ ಸೂಚನೆ ನೀಡಿದೆ. ಆದರೆ ಸುಪ್ರೀಂ ಪ್ರವೇಶ ಹಿನ್ನೆಲೆಯಲ್ಲಿ ಆ ಆದೇಶ ಜಾರಿಗೆ ಬರುವುದಿಲ್ಲ. ಇದೇ ವೇಳೆ, ಜ.6ರವರೆಗೂ ಕೆಳ ಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಸೂಚಿಸಿದೆ.

PREV

Recommended Stories

ಜಾತಿಗಣತಿ ‘ಧರ್ಮಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ
ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ