ಪಿಟಿಐ ನವದೆಹಲಿ
2002ರ ಬಿಲ್ಕಿಸ್ ಬಾನೊ ಅತ್ಯಾಚಾರ ಹಾಗೂ ಆಕೆಯ ಕುಟುಂಬದವರ 7 ಮಂದಿ ಹತ್ಯೆ ಪ್ರಕರಣದಲ್ಲಿ 11 ಅಪರಾಧಿಗಳಿಗೆ ನೀಡಿದ್ದ ಕ್ಷಮಾದಾನವನ್ನು (ಅವಧಿಪೂರ್ವ ಬಿಡುಗಡೆ ಆದೇಶ) ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಅಲ್ಲದೆ, ‘ಪ್ರಕರಣದ ಸತ್ಯಾಂಶ ಮುಚ್ಚಿಟ್ಟು ಕ್ಷಮಾದಾನ ಪಡೆದುಕೊಂಡಿದ್ದ ದೋಷಿಯೊಂದಿಗೆ ಗುಜರಾತ್ ಸರ್ಕಾರ ಶಾಮೀಲಾಗಿದೆ ಹಾಗೂ ಕ್ಷಮಾದಾನ ನೀಡಿ ಅಧಿಕಾರ ದುರ್ಬಳಕೆ ಮಾಡಿದೆ’ ಎಂಬ ಗಂಭೀರ ಟಿಪ್ಪಣಿ ಮಾಡಿದೆ.
ಇದೇ ವೇಳೆ ಎಲ್ಲ 11 ಅಪರಾಧಿಗಳನ್ನು ಇನ್ನು 2 ವಾರದಲ್ಲಿ ಜೈಲಿಗೆ ಹಾಕಬೇಕು ಎಂದೂ ಅದು ಗುಜರಾತ್ ಸರ್ಕಾರಕ್ಕೆ ತಾಕೀತು ಮಾಡಿದೆ.ಅಪರಾಧಿಗಳ ಕ್ಷಮಾದಾನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಛದ ವಿಚಾರಣೆ ನಡೆಸಿ 251 ಪುಟಗಳ ತೀರ್ಪು ಪ್ರಕಟಿಸಿದ ನ್ಯಾ। ಬಿ.ವಿ. ನಾಗರತ್ನಾ ಹಾಗೂ ನ್ಯಾ। ಉಜ್ಜಲ್ ಭುಯಾನ್ ಅವರ ಪೀಠ, ‘ಕ್ಷಮಾದಾನ ನೀಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇರಲಿಲ್ಲ. ಏಕೆಂದರೆ, ಘಟನೆ ನಡೆದಿದ್ದು ಗುಜರಾತ್‌ನಲ್ಲಾದರೂ, ನಿಷ್ಪಕ್ಷಪಾತ ವಿಚಾರಣೆ ದೃಷ್ಟಿಯಿಂದ ಬಿಲ್ಕಿಸ್ ಪ್ರಕರಣದ ವಿಚಾರಣೆ ನಡೆದಿದ್ದು ಮಹಾರಾಷ್ಟ್ರದಲ್ಲಿ.
ನಿಯಮಾನುಸಾರ ಯಾವ ರಾಜ್ಯದಲ್ಲಿ ವಿಚಾರಣೆ ನಡೆದಿದೆಯೋ ಆ ರಾಜ್ಯ ಮಾತ್ರ ಕ್ಷಮಾದಾನ ಅರ್ಜಿ ಇತ್ಯರ್ಥ ಮಾಡಬೇಕು. ಇದು ಗೊತ್ತಿದ್ದರೂ ಸತ್ಯಾಂಶ ಮುಚ್ಚಿಟ್ಟು ವಂಚನೆ ಮಾರ್ಗದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, 2022ರಲ್ಲಿ ಕ್ಷಮಾದಾನ ಪರಿಶೀಲನೆಯ ಸೂಚನೆಯನ್ನು ಪಡೆಯಲಾಗಿತ್ತು. ಗುಜರಾತ್ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ದೋಷಿಗಳಿಗೆ ಕ್ಷಮಾದಾನ ಮಂಜೂರು ಮಾಡಿತ್ತು’ ಎಂದು ಚಾಟಿ ಬೀಸಿತು.
‘ಹೀಗಾಗಿ ನಿಯಮ ಉಲ್ಲಂಘಿಸಿ ಪಡೆಯಲಾದ ಆದೇಶಕ್ಕೆ ಈ ಪ್ರಕರಣ ಒಂದು ಉತ್ತಮ ನಿದರ್ಶನ. ಹೀಗಾಗಿ ಕ್ಷಮಾದಾನ ತೀರ್ಮಾನವನ್ನು ರದ್ದು ಮಾಡಲಾಗುತ್ತದೆ’ ಎಂದು ಕೋರ್ಟ್ ನುಡಿಯಿತು.‘ಮಹಿಳೆಯನ್ನು ಸಮಾಜ ಹೇಗೆ ಪರಿಗಣಿಸಿದರೂ ಸಹ ಆಕೆ ಗೌರವಕ್ಕೆ ಅರ್ಹಳು. ಆಕೆಯ ಧರ್ಮ ಅಥವಾ ಜಾತಿ ಏನೇ ಇರಲಿ. ಇದಾವುದೂ ಪರಿಣಾಮ ಬೀರುವುದಿಲ್ಲ. ಮಹಿಳೆಯ ವಿರುದ್ಧದ ಘೋರ ಅಪರಾಧಗಳನ್ನು ಅನುಮತಿಸಲು ಸಾಧ್ಯವೇ?’ ಎಂದು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರಕ್ಕೆ ಚಾಟಿ ಬೀಸಿತು.
‘1992ರಲ್ಲಿ ಗುಜರಾತ್ ಸರ್ಕಾರ ಆದೇಶ ಹೊರಡಿಸಿ ಜೀವಾವಧಿ ಶಿಕ್ಷೆಗೆ ಒಳಗಾದವರು 14 ವರ್ಷ ಜೈಲು ಶಿಕ್ಷೆ ಪೂರೈಸಿದರೆ ಸನ್ನಡತೆ ಆಧರಿಸಿ ಕ್ಷಮಾದಾನ ಪಡೆಯಬಹುದು ಎಂಬ ನಿಯಮ ರೂಪಿಸಿತ್ತು. ಅತ್ಯಂತ ಹೀನ ಅಪರಾಧಕ್ಕೆ ಇದು ಅನ್ವಯ ಆಗದು ಎಂಬ ಷರತ್ತೂ ಇತ್ತು. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಕ್ಷಮಾದಾನ ಪಡೆಯಲಾಗಿದೆ. ಮಹಿಳೆಯರ ಮೇಲೆ ಘೋರ ಅಪರಾಧ ಎಸಗಿದವರು ಕ್ಷಮಾದಾನಕ್ಕೆ ಅರ್ಹರೆ?’ ಎಂದೂ ನ್ಯಾಯಪೀಠ ಬೇಸರಿಸಿತು.ಇದೇ ವೇಳೆ, 2022ರಲ್ಲಿ 11 ಅಪರಾಧಿಗಳ ಬಿಡುಗಡೆ ಬಗ್ಗೆ ಪರಿಶೀಲನೆ ಮಾಡುವಂತೆ ತನ್ನದೇ ದ್ವಿಸದಸ್ಯ ಪೀಠ ನೀಡಿದ್ದ ಆದೇಶವನ್ನು ಅದು ರದ್ದು ಮಾಡಿತು.
ಏನಿದು ಬಿಲ್ಕಿಸ್ ಬಾನು ಪ್ರಕರಣ?
2002ರಲ್ಲಿ ಗೋಧ್ರಾ ರೈಲು ದಹನ ಘಟನೆಯ ಬಳಿಕ ಗುಜರಾತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಈ ವೇಳೆ ಅಹಮದಾಬಾದ್ ಬಳಿಯ ರಾಧಿಕಾಪುರ ಗ್ರಾಮದಲ್ಲಿ ದಾಳಿಯಿಂದ ಭಯಗ್ರಸ್ತಳಾಗಿದ್ದ 5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆದಿತ್ತು ಹಾಗೂ 3 ವರ್ಷದ ಮಗಳು ಸೇರಿ ಆಕೆಯ 7 ಕುಟುಂಬ ಸದಸ್ಯರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಸಜೆ ನೀಡಿತ್ತು. ಆದರೆ ಶಿಕ್ಷೆ 14 ವರ್ಷ ಮುಗಿದ ಕಾರಣ 2022ರಲ್ಲಿ ಅವರಿಗೆ ಕ್ಷಮಾದಾನ ನೀಡಲಾಗಿತ್ತು.
ಸುಪ್ರೀಂಕೋರ್ಟ್ ಹೇಳಿದ್ದೇನು?
ಬಿಲ್ಕಿಸ್ ಬಾನೋ ಪ್ರಕರಣ ನಡೆದಿದ್ದು, ಗುಜರಾತ್‌ನಲ್ಲಾದರೂ ಕೋರ್ಟ್ ವಿಚಾರಣೆ ನಡೆದಿದ್ದು ಮಹಾರಾಷ್ಟ್ರದಲ್ಲಿ. ಹೀಗಾಗಿ ಅಪರಾಧಿಗಳನ್ನು ಕ್ಷಮಿಸಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ. ಮಹಾರಾಷ್ಟ್ರ ಸರ್ಕಾರಕ್ಕಷ್ಟೇ ಅಧಿಕಾರ.
ಮಹಾರಾಷ್ಟ್ರದಲ್ಲಿ ಕ್ಷಮಾದಾನ ಅರ್ಜಿ ತಿರಸ್ಕಾರವಾಗಿದ್ದರೂ ದೋಷಿಗಳು ಅದನ್ನು ಮುಚ್ಚಿಟ್ಟು ಗುಜರಾತ್ ಹೈಕೋರ್ಟ್ ಮಾತ್ರ ತಿರಸ್ಕರಿಸಿದ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಈ ಅರ್ಜಿ ಆಧರಿಸಿ ಅಪರಾಧಿಗಳ ಕ್ಷಮಾದಾನ ಅರ್ಜಿ ಪರಿಶೀಲಿಸಲು ಗುಜರಾತ್ ಸರ್ಕಾರಕ್ಕೆ 2022ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಸೂಚನೆಯಲ್ಲಿ ದೋಷವಿದೆ. ಪರಿಶೀಲನೆ ಅಧಿಕಾರ ತನಗಿಲ್ಲ ಎಂಬ ಮರುಪರಿಶೀಲನಾ ಅರ್ಜಿಯನ್ನು ಗುಜರಾತ್ ಸರ್ಕಾರ ಏಕೆ ಸಲ್ಲಿಸಲಿಲ್ಲವೋ ಗೊತ್ತಿಲ್ಲ.
ಪರಿಣಾಮಗಳು ಏನೇ ಆಗಲಿ. ಆ ಬಗ್ಗೆ ಗಮನ ಕೊಡದೇ ಕಾನೂನು ಏನು ಹೇಳಿದೆಯೋ ಅದನ್ನು ಪಾಲಿಸಬೇಕು.- ಮಹಿಳೆಯನ್ನು ಸಮಾಜ ಹೇಗೆ ಪರಿಗಣಿಸಿದರೂ ಸಹ ಆಕೆ ಗೌರವಕ್ಕೆ ಅರ್ಹಳು. ಆಕೆಯ ಧರ್ಮವು ಲೆಕ್ಕಕ್ಕೆ ಬರುವುದಿಲ್ಲ. ಮಹಿಳೆಯ ವಿರುದ್ಧದ ಘೋರ ಅಪರಾಧಗಳನ್ನು ಅನುಮತಿಸಲು ಸಾಧ್ಯವೇ? ಮಹಿಳೆಯರ ಮೇಲೆ ಘೋರ ಅಪರಾಧ ಎಸಗಿದವರು ಕ್ಷಮಾದಾನಕ್ಕೆ ಅರ್ಹರೆ? ಸತ್ಯವನ್ನು ಮುಚ್ಚಿಟ್ಟು, ಹಾದಿತಪ್ಪಿಸುವ ಸತ್ಯಗಳನ್ನು ಪರಿಗಣಿಸಿ ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ. ಇದೊಂದು ವಂಚನೆಯ ಕೃತ್ಯವಾಗಿದೆ.