ರಾಜಕೀಯ ಪಕ್ಷಗಳ ಅನಾಮಧೇಯ ದೇಣಿಗೆ ಮೂಲ ಬಂದ್‌ । ಚುನಾವಣೆ ಬಾಂಡ್‌ ಸ್ಕೀಂ ರದ್ದು

KannadaprabhaNewsNetwork | Published : Feb 16, 2024 1:47 AM

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಹಾಗೂ ಸಂಸ್ಥೆಗಳು ಅನಾಮಧೇಯರಾಗಿ ದೇಣಿಗೆ ನೀಡಲು ಅವಕಾಶ ಕಲ್ಪಿಸುತ್ತಿದ್ದ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿ ತೀರ್ಪು ನೀಡಿದೆ.

ಪಿಟಿಐ ನವದೆಹಲಿ

ಕೋರ್ಟ್‌ ಹೇಳಿದ್ದೇನು?- ಚುನಾವಣಾ ಬಾಂಡ್‌ ಅಸಾಂವಿಧಾನಿಕ. ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತವೆ- ಕೂಡಲೇ ಬಾಂಡ್‌ಗಳ ಮಾರಾಟ ನಿಲ್ಲಿಸಬೇಕು. ಈವರೆಗೆ ದೇಣಿಗೆ ನೀಡಿರುವವರ ವಿವರವನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಬೇಕು- ರಾಜಕೀಯ ಪಕ್ಷಗಳು ಇನ್ನೂ ನಗದೀಕರಣ ಮಾಡಿಕೊಳ್ಳದ ಬಾಂಡ್‌ಗಳ ಮೊತ್ತವನ್ನು ದೇಣಿಗೆದಾರರಿಗೆ ಮರಳಿಸಬೇಕುಏನಿದು ಚುನಾವಣೆ ಬಾಂಡ್‌?

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು 2018ರಲ್ಲಿ ಜಾರಿಗೆ ಬಂದ ಯೋಜನೆ ಇದು. ಭಾರತೀಯ ನಾಗರಿಕರು ಮತ್ತು ಕಂಪನಿಗಳು ತಮ್ಮ ಗುರುತನ್ನು ಬಹಿರಂಗಪಡಿಸದೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಈ ಬಾಂಡ್‌ಗಳು ಅವಕಾಶ ನೀಡುತ್ತಿದ್ದವು. ಈ ಬಾಂಡ್‌ಗಳು ₹1,000ದಿಂದ ₹1 ಕೋಟಿಯವರೆಗಿನ ವಿವಿಧ ಮುಖಬೆಲೆಗಳಲ್ಲಿ ಲಭ್ಯವಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಎಲ್ಲಾ ಶಾಖೆಗಳಲ್ಲಿ ಪಡೆಯಬಹುದಿತ್ತು.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಹಾಗೂ ಸಂಸ್ಥೆಗಳು ಅನಾಮಧೇಯರಾಗಿ ದೇಣಿಗೆ ನೀಡಲು ಅವಕಾಶ ಕಲ್ಪಿಸುತ್ತಿದ್ದ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿ ತೀರ್ಪು ನೀಡಿದೆ. ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ನೆರವಾಗುತ್ತಿದ್ದ ಈ ಬಾಂಡ್‌ಗಳು ಸಂವಿಧಾನದತ್ತವಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕಿಗೆ ವಿರುದ್ಧವಾಗಿವೆ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಲೋಕಸಭೆ ಚುನಾವಣೆಗೂ ಮುನ್ನ ಹೊರಬಿದ್ದಿರುವ ಈ ತೀರ್ಪು ಕೇಂದ್ರ ಸರ್ಕಾರಕ್ಕೆ ದೊಡ್ಡ ಆಘಾತ ನೀಡಿದೆ. ಚುನಾವಣಾ ಬಾಂಡ್‌ಗಳನ್ನು ಅಸಿಂಧುಗೊಳಿಸಿದ ತನ್ನ ತೀರ್ಪಿನಲ್ಲೇ ಸುಪ್ರೀಂಕೋರ್ಟ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ ಕಳೆದ ಆರು ವರ್ಷಗಳಲ್ಲಿ ಯಾರ್‍ಯಾರು ಈ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ ಎಂಬುದನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ಕೂಡ ಆದೇಶ ನೀಡಿದೆ. ಅಲ್ಲದೆ, ಯಾವ್ಯಾವ ರಾಜಕೀಯ ಪಕ್ಷಗಳು ಯಾವ ದಿನಾಂಕದಂದು ಈ ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ ಎಂಬುದನ್ನು ಕೂಡ ತಿಳಿಸಲು ಸೂಚಿಸಿದೆ.

ಸಾಂವಿಧಾನಿಕ ಪೀಠದ ತೀರ್ಪು:ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಗುರುವಾರ ಈ ಮಹತ್ವದ ತೀರ್ಪು ಹೊರಡಿಸಿತು. ಎಸ್‌ಬಿಐ ಮಾರ್ಚ್‌ 6ರೊಳಗೆ ಈ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಹೆಸರು, ಬಾಂಡ್‌ಗಳನ್ನು ನಗದೀಕರಿಸಿಕೊಂಡ ರಾಜಕೀಯ ಪಕ್ಷಗಳು, ನಗದೀಕರಣದ ದಿನಾಂಕ ಹಾಗೂ ನಗದೀಕರಿಸಿಕೊಂಡ ಬಾಂಡ್‌ಗಳ ಮೌಲ್ಯದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಮಾರ್ಚ್‌ 13ರೊಳಗೆ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಈ ಮಾಹಿತಿಯನ್ನು ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತು.2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠ, ಎರಡು ಪ್ರತ್ಯೇಕ ಹಾಗೂ ಒಮ್ಮತದ ತೀರ್ಪುಗಳನ್ನು ನೀಡಿದೆ.

ವಾಕ್‌ ಸ್ವಾತಂತ್ರ್ಯ, ಮಾಹಿತಿ ಹಕ್ಕಿನ ಉಲ್ಲಂಘನೆ:‘ಚುನಾವಣಾ ಬಾಂಡ್‌ಗಳು ಸಂವಿಧಾನದ 19(1)(ಎ) ಪರಿಚ್ಛೇದದಲ್ಲಿ ಹೇಳಲಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತವೆ. ದೇಣಿಗೆ ನೀಡಿದವರ ಹೆಸರನ್ನು ಗೌಪ್ಯವಾಗಿರಿಸುವುದರಿಂದ ಮತದಾರರಿಗೆ ಇರುವ ಮಾಹಿತಿಯ ಹಕ್ಕನ್ನೂ ಉಲ್ಲಂಘಿಸುತ್ತವೆ. ಖಾಸಗಿತನದ ಮೂಲಭೂತ ಹಕ್ಕಿನಲ್ಲಿ ನಾಗರಿಕರ ರಾಜಕೀಯ ಖಾಸಗಿತನ ಹಾಗೂ ಗುರುತಿಸಿಕೊಳ್ಳುವಿಕೆಯ ಹಕ್ಕು ಕೂಡ ಸೇರಿದೆ’ ಎಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದರು.ಇದೇ ವೇಳೆ, ಚುನಾವಣಾ ಬಾಂಡ್‌ಗಳನ್ನು ಜಾರಿಗೊಳಿಸಿದ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಆದಾಯ ತೆರಿಗೆ ಕಾಯ್ದೆಗಳಿಗೆ ತಂದ ತಿದ್ದುಪಡಿಗಳನ್ನೂ ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿತು. ಅಲ್ಲದೆ, ಎಸ್‌ಬಿಐ ಈ ಬಾಂಡ್‌ಗಳ ಮಾರಾಟವನ್ನು ನಿಲ್ಲಿಸಬೇಕು. ಹಾಗೂ 2019ರ ಏಪ್ರಿಲ್‌ 12ರಿಂದ ಈವರೆಗೆ ಮಾರಾಟ ಮಾಡಿದ ಬಾಂಡ್‌ಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದೂ ಸೂಚಿಸಿದೆ.

ಅಲ್ಲದೆ, ಬಾಂಡ್‌ಗಳ ನಗದೀಕರಣಕ್ಕೆ 15 ದಿನದ ಅವಕಾಶ ಇರುತ್ತದೆ. ರಾಜಕೀಯ ಪಕ್ಷಗಳು ಇನ್ನೂ ನಗದೀಕರಣ ಮಾಡಿಕೊಳ್ಳದ ಇತ್ತೀಚಿನ ಬಾಂಡ್‌ಗಳ ಮೊತ್ತವನ್ನು, ದೇಣಿಗೆದಾರರಿಗೆ ಮರಳಿಸಬೇಕು ಎಂದು ನಿರ್ದೇಶಿಸಿದೆ.

ಕೋರ್ಟಿಗೆ ಹೋಗಿದ್ದ ಕಾಂಗ್ರೆಸ್‌:ಕಾಂಗ್ರೆಸ್‌ನ ಜಯಾ ಠಾಕೂರ್‌, ಸಿಪಿಎಂ ಹಾಗೂ ಎಡಿಆರ್‌ ಸ್ವಯಂಸೇವಾ ಸಂಸ್ಥೆಗಳು ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕಳೆದ ಅಕ್ಟೋಬರ್‌ನಿಂದ ಸಾಂವಿಧಾನಿಕ ಪೀಠ ನಡೆಸುತ್ತಿತ್ತು.ದೇಣಿಗೆ ನೀಡುವವರು ಅನಾಮಧೇಯರಾಗಿ ಇರುವ ಆಯ್ಕೆ ಚುನಾವಣಾ ಬಾಂಡ್‌ಗಳಲ್ಲಿ ಇರುವುದರಿಂದ ರಾಜಕೀಯ ಪಕ್ಷಗಳಿಗೆ ಅಕ್ರಮವಾಗಿ ದೇಣಿಗೆ ಸಂಗ್ರಹಿಸುವ ಅವಕಾಶಗಳನ್ನು ಈ ಬಾಂಡ್‌ಗಳು ನೀಡುತ್ತವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಸುಪ್ರೀಂಕೋರ್ಟ್‌ ಹೇಳಿದ್ದೇನು?

- ದೇಣಿಗೆ ನೀಡುವವರಿಗೆ ರಾಜಕೀಯ ಪಕ್ಷಗಳು ಅಥವಾ ಸರ್ಕಾರಗಳು ಅಕ್ರಮವಾಗಿ ನೆರವಾಗುವ ಅವಕಾಶವನ್ನು ಚುನಾವಣಾ ಬಾಂಡ್‌ಗಳು ಸೃಷ್ಟಿಸುತ್ತವೆ.

- ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ಆ ರಾಜಕೀಯ ಪಕ್ಷವನ್ನು ಬೆಂಬಲಿಸುವ ಅಥವಾ ಆ ರಾಜಕೀಯ ಪಕ್ಷದಿಂದ ಲಾಭ ಪಡೆಯುವ ಉದ್ದೇಶದಿಂದ ದೇಣಿಗೆ ನೀಡುತ್ತಾರೆ.

- ಎಲ್ಲಾ ದೇಣಿಗೆಯೂ ಸಾರ್ವಜನಿಕ ನೀತಿಯನ್ನು ಬದಲಿಸುವ ಉದ್ದೇಶವನ್ನೇ ಹೊಂದಿರುವುದಿಲ್ಲ. ವಿದ್ಯಾರ್ಥಿಗಳು, ದಿನಗೂಲಿ ನೌಕರರು ಕೂಡ ದೇಣಿಗೆ ನೀಡುತ್ತಾರೆ.

- ಕಂಪನಿಗಳು ನೀಡುವ ದೇಣಿಗೆಗಳು ರಾಜಕೀಯ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅವು ನೀಡುವ ದೇಣಿಗೆಗಳು ಅಪ್ಪಟ ವ್ಯಾವಹಾರಿಕ ದೇಣಿಗೆಯಾಗಿರುತ್ತವೆ.

Share this article