ನವದೆಹಲಿ: ಕೆಲವೇ ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಮಟಪಟ್ಟಿ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗದ ನಡೆಗೆ ಭಾರೀ ವಿರೋಧ ವ್ಯಕ್ತವಾಗಿ, ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗಲೇ, ಆಯೋಗವು ಪಶ್ಚಿಮ ಬಂಗಾಳ ಮತ್ತು ದೆಹಲಿಯ ಮತದಾರರ ಪಟ್ಟಿಯ ಪರಿಷ್ಕರಣೆಗೆ ಮುಂದಾಗಿದೆ.
ಪ್ರತಿ ವರ್ಷ ಹೊಸ ಮತದಾರರ ಸೇರ್ಪಡೆ ಅಥವಾ ರದ್ದತಿ ನಡೆಯುತ್ತಲೇ ಇರುವುದರಿಂದ, ಕಾಲಕಾಲಕ್ಕೆ ಪರಿಷ್ಕರಣೆ ಅಗತ್ಯ. ಪಶ್ಚಿಮ ಬಂಗಾಳದಲ್ಲಿ ಕೊನೆ ಬಾರಿಗೆ 2002ರಲ್ಲಿ ಹಾಗೂ ದೆಹಲಿಯಲ್ಲಿ 2008ರಲ್ಲಿ ಪತಪಟ್ಟಿ ಪರಿಷ್ಕರಣೆಯಾಗಿತ್ತು.
ದೆಹಲಿಗೆ 2008ರ ಮಾರ್ಚ್ 16ರನ್ನು ಕಟ್‌ಆಫ್ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಇದರರ್ಥ, ಈ ದಿನದ ಬಳಿಕ ನೋಂದಾಯಿಸಿಕೊಂಡವರು, ಅರ್ಹ ಮತದಾರರಾಗಿ ಉಳಿಯಲು ಪರಿಶೀಲನೆಗೆ ಒಳಪಡುವುದು ಅಗತ್ಯ. ಇದಕ್ಕವರು ಪೌರತ್ವ ಸಾಬೀತುಪಡಿಸುವ ಯಾವುದಾದರೂ ದಾಖಲೆ ಸಲ್ಲಿಸಬೇಕು.
ಬಿಹಾರ ಪಟ್ಟಿ ಪರಿಷ್ಕರಣೆ ಪ್ರಶ್ನೆ ಮಾಡಿದ್ದ ಅರ್ಜಿ ವಿಚಾರಣೆ ಜು.10ಕ್ಕೆ
ನವದೆಹಲಿ: ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಕೈಗೊಳ್ಳುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಜು.10ರಂದು ನಡೆಸಲು ಸುಪ್ರೀಂ ಕೋರ್ಟ್ ಅನುಮತಿಸಿದೆ. ರಾಜಕೀಯ ನಾಯಕರು ಸೇರಿದಂತೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ನೇತೃತ್ವದ ವಕೀಲರ ಗುಂಪು ಸಲ್ಲಿಸಿದ ಮನವಿಯನ್ನು ರಜಾಕಾಲದ ಪೀಠ ಪುರಸ್ಕರಿಸಿದೆ. ‘ಜು.25ರೊಳಗೆ ಮತದಾರರು ದಾಖಲೆಗಳನ್ನು ಸಲ್ಲಿಸಬೇಕಿದ್ದು, ಅಷ್ಟು ಕಡಿಮೆ ಅವಧಿಯಲ್ಲಿ 4 ಕೋಟಿ ಜನರ ದಾಖಲೆ ಸಲ್ಲಿಕೆ ಕಷ್ಟ’ ಎಂಬುದು ಪರಿಷ್ಕರಣೆ ವಿರೋಧಿಗಳ ವಾದವಾಗಿದೆ.
ಅತ್ತ, ಬಿಹಾರದಲ್ಲಿ ಆರಂಭಿಕ ಹಂತದ ಪರಿಷ್ಕರಣೆ ಸುಗಮವಾಗಿ ಮುಗಿದಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ‘ಬಿಹಾರದಲ್ಲಿ ಕೊನೆ ಬಾರಿ 2003ಲ್ಲಿ ಮತಪಟ್ಟಿ ಪರಿಷ್ಕರಣೆ ನಡೆದಿತ್ತು. ಕಳೆದ 20 ವರ್ಷಗಳಲ್ಲಿ ನಗರೀಕರಣದಿಂದಾಗಿ ಅನೇಕ ಹೆಸರುಗಳ ಸೇರ್ಪಡೆಯಾಗಿವೆ ಮತ್ತು ತೆಗೆಯಲ್ಪಟ್ಟಿವೆ. ಇದರಿಂದಾಗಿ, ನಕಲಿ ಮತಚೀಟಿಗಳು ಸೃಷ್ಟಿಯಾಗಿರುವ ಸಂಭವವಿದೆ. ಇವುಗಳನ್ನು ತೆಗೆದುಹಾಕಲು, ಚುನಾವಣೆಗೂ ಮುನ್ನ ಪರಿಷ್ಕರಣೆ ನಡೆಸಲಾಗುತ್ತಿದೆ’ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ರಾಜ್ಯದಲ್ಲಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.