ಒಬಿಸಿ ಮೀಸಲು ಕಸಿಯಲು ಬಿಡಲ್ಲ, ಇದು ಮೋದಿ ಗ್ಯಾರಂಟಿ: ಪ್ರಧಾನಿ

KannadaprabhaNewsNetwork |  
Published : Apr 27, 2024, 01:17 AM ISTUpdated : Apr 27, 2024, 05:23 AM IST
modi

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಉತ್ತರಾಖಂಡದಲ್ಲಿ ಜಾರಿಗೆ ತಂದಂತೆ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ದೇಶಾದ್ಯಂತ ಜಾರಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ.

ಅರಾರಿಯಾ/ಮುಂಗೇರ್‌: ಒಬಿಸಿ ಕೋಟಾದಲ್ಲಿ ಮುಸ್ಲಿಮರಿಗೂ ಮೀಸಲು ನೀಡಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸತತ 4ನೇ ದಿನವೂ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಒಬಿಸಿಗಳ ಮೀಸಲು ಕಸಿಯಲು ನಾನು ಬಿಡಲ್ಲ, ಇದು ಮೋದಿ ಗ್ಯಾರಂಟಿ’ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಇದೀಗ ಒಬಿಸಿ ಮೀಸಲಿಗೆ ಕನ್ನ ಹಾಕಿರುವ ಕಾಂಗ್ರೆಸ್‌ ಮುಂದೆ ಎಸ್‌ಸಿ, ಎಸ್ಟಿ ಸಮುದಾಯದ ಮೀಸಲನ್ನೂ ಕದಿಯಲಿದೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ, ’ಮುಸ್ಲಿಮರಿಗೆ ಈ ಸಂಪತ್ತಿನಲ್ಲಿ ಮುಖ್ಯ ಪಾಲು ದೊರಕಬೇಕು’ ಎಂದು 2006ರಲ್ಲಿ ಮಾತ್ರವಲ್ಲ 2009ರಲ್ಲೂ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಹೇಳಿದ್ದರು. ನಾನು ಮೊನ್ನೆ ಹೇಳಿದ್ದು ಸುಳ್ಳು ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಅದಕ್ಕೆ 2009ರ ವಿಡಿಯೋನೇ ಉತ್ತರ’ ಎಂದು ಶುಕ್ರವಾರ ವೈರಲ್‌ ಆಗಿರುವ ಹೊಸ ವಿಡಿಯೋವನ್ನು ಉಲ್ಲೇಖಿಸಿದ್ದಾರೆ.

ಶುಕ್ರವಾರ ಬಿಹಾರದ ಅರಾರಿಯಾ ಮತ್ತು ಮುಂಗೇರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಒಬಿಸಿ ಮೀಸಲಿನ ಲಾಭವನ್ನು ಕಸಿದು ಮುಸ್ಲಿಮರಿಗೆ ನೀಡಿದೆ. ಜೊತೆಗೆ ಈ ಮಾದರಿಯನ್ನು ಅದು ಬಿಹಾರ ಸೇರಿ ದೇಶವ್ಯಾಪಿ ವಿಸ್ತರಿಸಲು ಯೋಜಿಸಿದೆ. ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿ ಹಿಂದುಳಿದ ಸಮುದಾಯ ಎದುರಿಸಿದ ಸಂಕಷ್ಟವನ್ನು ನಾನು ಅರಿಯಬಲ್ಲೆ’ ಎಂದು ಹೇಳಿದರು.

ಜೊತೆಗೆ, ‘ಈಗ ಒಬಿಸಿ ಮೀಸಲು ಕದ್ದವರು ಮುಂದೆ ತಮ್ಮ ವೋಟ್‌ಬ್ಯಾಂಕ್‌ ಮೀಸಲು ನೀಡುವ ಸಲುವಾಗಿ ಎಸ್‌ಸಿ, ಎಸ್ಟಿಗಳ ಮೀಸಲನ್ನೂ ಕದಿಯುತ್ತಾರೆ. ಆದರೆ ಇಂಥದ್ದು ಆಗಲು ನಾನು ಬಿಡಲ್ಲ, ಇದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ಭರವಸೆ ನೀಡಿದರು.ಇದೇ ವೇಳೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ ಛಾಯೆ ಇದೆ ಎಂದು ಪುನರುಚ್ಚರಿಸಿದ ಮೋದಿ, ‘ಪ್ರಣಾಳಿಕೆಯು ಹಿಂದೂಗಳ ಕುರಿತಾದ ಕಾಂಗ್ರೆಸ್‌ನ ಅನ್ಯಾಯವನ್ನು ಎತ್ತಿ ತೋರಿಸಿದೆ. ನಾವು ದೇಶದ ಸಂಪತ್ತಿನ ಮೇಲೆ ಬಡವರಿಗೆ ಮೊದಲ ಹಕ್ಕಿದೆ ಎಂದು ಹೇಳಿದರೆ, ಕಾಂಗ್ರೆಸ್‌, ತನ್ನ ವೋಟ್‌ಬ್ಯಾಂಕ್‌ಗೆ ಮೊದಲ ಹಕ್ಕಿದೆ ಎನ್ನುತ್ತದೆ. ಇಷ್ಟು ಮಾತ್ರವಲ್ಲ ಅವರು ನಿಮ್ಮ ಆಸ್ತಿ, ಮಹಿಳೆಯರ ಮಂಗಳಸೂತ್ತ, ಪಿತ್ರಾರ್ಜಿತ ಆಸ್ತಿಯ ಮೇಲೂ ಕಣ್ಣಿಟ್ಟಿದ್ದಾರೆ’ ಎಂದು ಕಾಂಗ್ರಸ್‌ ವಿರುದ್ಧ ಕಿಡಿಕಾರಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ