ಬೈರೂತ್: 12 ಜನರ ಬಲಿ ಪಡೆದು, 3000ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಪೇಜರ್ ಬಾಂಬ್ ಸ್ಫೋಟದಿಂದ ಚೇತರಿಸಿಕೊಳ್ಳುವ ಮೊದಲೇ ಮಧ್ಯಪ್ರಾಚ್ಯದ ಲೆಬನಾನ್ ದೇಶದಲ್ಲಿ ಬುಧವಾರ ಮತ್ತೆ ಸರಣಿ ಸ್ಫೋಟ ಸಂಭವಿಸಿದೆ. ಈ ಬಾರಿ ವಾಕಿಟಾಕಿ, ಸಂವಹನಕ್ಕೆ ಬಳಸುವ ರೇಡಿಯೋ ಸೆಟ್, ಲ್ಯಾಂಡ್‌ಲೈನ್ ಫೋನ್ ಮತ್ತು ಮನೆಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸುವ ಸೌರಶಕ್ತಿ ವ್ಯವಸ್ಥೆಗಳನ್ನು ಸ್ಫೋಟಿಸಲಾಗಿದೆ. ಈ ಸರಣಿ ಸ್ಫೋಟದಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಂಗಳವಾರದಂತೆ ಬುಧವಾರ ಕೂಡಾ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ವಾಕಿಟಾಕಿ, ರೇಡಿಯೋ ಸೆಟ್‌ಗಳನ್ನು ಸ್ಫೋಟಿಸಲಾಗಿದೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಅಥವಾ ದೇಶ ಹೊತ್ತುಕೊಂಡಿಲ್ಲವಾದರೂ, ತನ್ನ ವಿರುದ್ಧದ ಯುದ್ಧದಲ್ಲಿ ಹಮಾಸ್‌ಗೆ ಹಿಜ್ಬುಲ್ಲಾ ಉಗ್ರರು ನೆರವು ನೀಡುತ್ತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಇನ್ನೊಂದೆಡೆ ಲೆಬನಾನ್ ಕೂಡಾ ಇದೇ ಆರೋಪ ಮಾಡಿದೆ.
ಹೀಗೆ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವ ಕಾರಣ ಲಕ್ಷಾಂತರ ಲೆಬನಾನಿಗಳು, ತಮ್ಮ ಬಳಿ ಇರುವ ಉತ್ಪನ್ನಗಳನ್ನು ಬಳಸಲು ಹಿಂಜರಿಯುವಂತಾಗಿದೆ.
ಈ ನಡುವೆ ನಾಗರಿಕ ಉತ್ಪನ್ನಗಳನ್ನು ಶಸ್ತ್ರಾಸ್ತ್ರಗಳನ್ನಾಗಿ ಬಳಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗದು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರೆಸ್ ಸ್ಫೋಟವನ್ನು ಖಂಡಿಸಿದ್ದಾರೆ.
ಭೀಕರ ಸ್ಫೋಟ:
ಮಂಗಳವಾರ ಸಂಭವಿಸಿದ ಪೇಜರ್ ಸ್ಫೋಟದಲ್ಲಿ ಮೃತರ ಅಂತ್ಯಸಂಸ್ಕಾರದ ವೇಳೆ ಬುಧವಾರ ಲೆಬನಾನ್‌ನ ಹಲವು ನಗರಗಳಲ್ಲಿ ಸ್ಫೋಟ ಸಂಭವಿಸಿದೆ. ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ವಾಕಿಟಾಕಿ, ರೇಡಿಯೋ ಸೆಟ್ ಮತ್ತು ಮೊಬೈಲ್‌ಗಳನ್ನು ಏಕಕಾಲಕ್ಕೆ ಸ್ಫೋಟಿಸಲಾಗಿದೆ. ಇದೇ ವೇಳೆ ಹಲವು ಮನೆಗಳಲ್ಲಿ ವಿದ್ಯುತ್ ಉತ್ಪಾದನೆಗೆಂದು ಹಾಕಲಾಗಿದ್ದ ಸೋಲಾರ್ ಸಿಸ್ಟಮ್ ಮತ್ತು ಲ್ಯಾಂಡ್‌ಲೈನ್ ಫೋನ್‌ಗಳನ್ನು ಕೂಡಾ ಸ್ಫೋಟಿಸಲಾಗಿದೆ.
ಈ ಹಿಂದೆ ಮೊಬೈಲ್‌ಗಳನ್ನು ತ್ಯಜಿಸಿ ಪೇಜರ್ ಖರೀದಿಸಿದ ಸಮಯದಲ್ಲೇ ಈ ವಾಕಿಟಾಕಿ ಮತ್ತು ರೇಡಿಯೋ ಸೆಟ್‌ಗಳನ್ನೂ ಹಿಜ್ಬುಲ್ಲಾ ಉಗ್ರರು ಖರೀದಿಸಿದ್ದರು ಎನ್ನಲಾಗಿದೆ.
ಈ ಸ್ಫೋಟದಿಂದ ಹಲವು ಮನೆಗಳು, ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಹೊಗೆ ಹೊರಹೊಮ್ಮುತ್ತಿದ್ದ ದೃಶ್ಯಗಳು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ. ಇದಲ್ಲದೆ ಕೆಲವು ಕಡೆ ಕಾರಿಗೂ ಬೆಂಕಿ ಹತ್ತಿಕೊಂಡಿದೆ. ಪೇಜರ್ ಸ್ಫೋಟದಲ್ಲಿ ಗಾಯಗೊಂಡವರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ಹೊತ್ತಿನಲ್ಲೇ ಹೊಸದಾಗಿ ಸಂಭವಿಸಿರುವ ಸ್ಫೋಟದಲ್ಲಿ ಮತ್ತಷ್ಟು ಗಾಯಾಳುಗಳು ಸೃಷ್ಟಿಯಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲೂ ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.