ಪಹಲ್ಗಾಂ ರಕ್ಕಸರಿಗಾಗಿ ಭದ್ರತಾ ಪಡೆಗಳ ಕಾರ್ಯಾಚರಣೆ ಬಿರುಸು ಉಗ್ರಗಾಮಿಗಳ ಬೇಟೆ ಶುರು

Published : Apr 26, 2025, 07:12 AM IST
Two Lashkar e Taiba members involved in Pahalgam terror attack destroyed in blast watch video bsm

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಧರ್ಮ ಕೇಳಿ ಭೀಕರವಾಗಿ ಹತ್ಯೆಗೈದ ಪಾಪಿ ಉಗ್ರರಿಗಾಗಿ ಬೇಟೆಯನ್ನು ಭಾರತೀಯ ಭದ್ರತಾ ಪಡೆಗಳು ಮತ್ತಷ್ಟು ಚುರುಕುಗೊಳಿಸಿವೆ.

ಶ್ರೀನಗರ: ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಧರ್ಮ ಕೇಳಿ ಭೀಕರವಾಗಿ ಹತ್ಯೆಗೈದ ಪಾಪಿ ಉಗ್ರರಿಗಾಗಿ ಬೇಟೆಯನ್ನು ಭಾರತೀಯ ಭದ್ರತಾ ಪಡೆಗಳು ಮತ್ತಷ್ಟು ಚುರುಕುಗೊಳಿಸಿವೆ.

 ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಮನೆಗಳು ಸೇನೆಯಿಂದ ಸ್ಫೋಟಕ ತಪಾಸಣೆ ವೇಳೆ ಸ್ಫೋಟಗೊಂಡು ಹಾನಿಗೊಂಡಿದ್ದರೆ, ಮತ್ತೊಂದೆಡೆ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಮನೆ ಮನೆಗೂ ತೆರಳಿ ಉಗ್ರರಿಗಾಗಿ ಭದ್ರತಾ ಪಡೆಗಳು ಭಾರೀ ಪ್ರಮಾಣದ ಹುಡುಕಾಟ ಆರಂಭಿಸಿವೆ. ಜೊತೆಗೆ ಸಮೀಪದ ಅರಣ್ಯ ಪ್ರದೇಶಗಳಲ್ಲೂ ಬೃಹತ್‌ ಕೂಂಬಿಂಗ್‌ ನಡೆಸುವ ಮೂಲಕ ಉಗ್ರರು ತಪ್ಪಿಸಿಕೊಳ್ಳದಂತೆ ಬಲೆ ಬೀಸಿವೆ.

ಪಹಲ್ಗಾಂ ಘಟನೆಯ ಶಂಕಿತ ದಾಳಿಕೋರರಲ್ಲಿ ಒಬ್ಬನಾದ ಆದಿಲ್‌ ಹುಸೈನ್‌ ಠೋಕರ್‌ ಮತ್ತು ಉಗ್ರರಿಗೆ ನೆರವು ನೀಡಿದ್ದ ಆಸೀಫ್‌ ಶೇಖ್‌ ಮನೆಯಲ್ಲಿ ಸ್ಫೋಟಕ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅನಂತನಾಗ್‌ನ ಬಿಜ್‌ಬೆಹರಾದಲ್ಲಿರುವ ಆದಿಲ್‌ ಮನೆಯಲ್ಲಿ ತಪಾಸಣೆ ಮಾಡಿದಾಗ ಅಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ವೇಳೆ ಅವು ಸ್ಫೋಟಗೊಂಡಿವೆ. ಇನ್ನೊಂದೆಡೆ ಪುಲ್ವಾಮಾದ ತ್ರಾಲ್‌ನಲ್ಲಿರುವ ಆಸಿಫ್‌ ಶೇಖ್‌ ಮನೆಯಲ್ಲೂ ಶುಕ್ರವಾರ ಬೆಳಗ್ಗೆ ತಪಾಸಣೆ ವೇಳೆ ಸ್ಫೋಟ ಸಂಭವಿಸಿದೆ. ಎರಡೂ ಪ್ರಕರಣಗಳಲ್ಲಿ ಮನೆ ಪೂರ್ಣ ಛಿದ್ರಗೊಂಡಿದೆ. ಒಂದು ವೇಳೆ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸದೇ ಹೋಗಿದ್ದರೆ ಮತ್ತೊಂದು ದೊಡ್ಡ ಅನಾಹುತದ ಸಾಧ್ಯತೆ ಇತ್ತು ಎಂದು ಭದ್ರತಾ ಪಡೆಗಳು ತಿಳಿಸಿವೆ.

ಆದಿಲ್‌, 2018ರಲ್ಲಿ ಅಟ್ಟಾರಿ-ವಾಘಾ ಗಡಿ ಮೂಲಕ ಅಧಿಕೃತವಾಗಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದು, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ತರಬೇತಿ ಪಡೆದು ಭಾರತಕ್ಕೆ ಮರಳಿದ್ದ ಎನ್ನಲಾಗಿದೆ. ಈತನ ಕುರಿತು ಮಾಹಿತಿ ಕೊಟ್ಟವರಿಗೆ 20 ಲಕ್ಷ ರು. ಬಹುಮಾನ ಘೋಷಿಸಲಾಗಿದೆ.

ಮನೆ ಮನೆ ಹುಡುಕಾಟ:

ಈ ನಡುವೆ ಪಹಲ್ಗಾಂ ದಾಳಿಕೋರರ ಪತ್ತೆಗಾಗಿ ಭದ್ರತಾ ಸಿಬ್ಬಂದಿ ಆರಂಭಿಸಿರುವ ಶೋಧ ಕಾರ್ಯ 3ನೇ ದಿನಕ್ಕೆ ಕಾಲಿಟ್ಟಿದ್ದು, ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಹುಡುಕಾಟ ನಡೆಸಲಾಗುತ್ತಿದೆ. ಪುಲ್ವಾಮಾದಲ್ಲಿ 4 ಉಗ್ರರ ಓಡಾಟ ಕಂಡುಬಂದ ಶಂಕೆ ಇದ್ದು, ಪುಲ್ವಾಮಾ, ಬಂಡಿಪೋರ, ಕಿಶ್ತ್ವಾರ್‌, ಶೋಪಿಯಾನ್‌ನಲ್ಲಿ ಭದ್ರತಾ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಕೋಣೆಕೋಣೆಗಳಲ್ಲಿ ಉಗ್ರರಿಗಾಗಿ ಶೋಧ ನಡೆಸಿದ್ದಾರೆ.

ಅತ್ತ ಕಾಶ್ಮೀರದ ಉಧಾಂಪುರ ಅರಣ್ಯ, ರಜೌರಿ ಮತ್ತು ಜಮ್ಮುವಿನ ಪೂಂಚ್‌ನಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಈಗಾಗಲೇ ಉಧಾಂಪುರ ಜಿಲ್ಲೆಯ ಅರಣ್ಯ ಪ್ರದೇಶವನ್ನು ಭದ್ರತಾಪಡೆಗಳು ಸುತ್ತುವರಿದಿದ್ದು, ಕಿಶ್ತಾವರ್, ಕಠುವಾ, ರಜೌರಿ ಮತ್ತು ಪೂಂಚ್‌ನಲ್ಲೂ ಭದ್ರತಾಪಡೆಗಳು ಉಗ್ರ ಬೇಟೆ ಆರಂಭಿಸಿವೆ. ಸೇನೆ, ಪೊಲೀಸ್‌ ಮತ್ತು ಸಿಆರ್‌ಪಿಎಫ್‌ನ ವಿಶೇಷ ಪಡೆಗಳು ಜಂಟಿಯಾಗಿ ಈ ಶೋಧ ಕಾರ್ಯ ನಡೆಸುತ್ತಿದ್ದು,

ಡ್ರೋನ್‌ ಹಾಗೂ ಕಾಪ್ಟರ್‌ಗಳನ್ನೂ ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಭದ್ರತಾಪಡೆಗಳು ಮಾಹಿತಿ ನೀಡಿವೆ.

PREV

Recommended Stories

ನಮ್ಮ ತೆರಿಗೆ ದುಡ್ಡಲ್ಲಿ ಬಿಹಾರದಲ್ಲಿ ಗ್ಯಾರಂಟಿ ಜಾತ್ರೆ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಕನ್ನಡಕ್ಕೆ ಎರಡು ಗರಿ