ಮುಂಬೈ: ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಪ್ರಮಾಣವನ್ನು ಆರ್‌ಬಿಐ ಈ ಸಲ ಕಳೆದ ವರ್ಷದ ಶೇ.7 ರಿಂದ ಶೇ.7.2ಕ್ಕೆ ಏರಿಸಿದ ಪರಿಣಾಮ ಶುಕ್ರವಾರ ಭಾರತೀಯ ಷೇರುಪೇಟೆ ದಾಖಲೆಯ ಅಂತ್ಯ ಕಂಡಿದೆ . ಸೆನ್ಸೆಕ್ಸ್ ಹಾಗೂ ನಿಫ್ಟಿ ತನ್ನ ಸಾರ್ವಕಾಲಿಕ ದಾಖಲೆ ಬರೆದು ಮುಕ್ತಾಯಗೊಂಡಿವೆ.
ಸೆನ್ಸೆಕ್ಸ್ 1,618.85 ಅಂಕ ಏರಿ 76,693.36ಕ್ಕೆ ಹಾಗೂ ನಿಫ್ಟಿ 468.75 ಅಂಕ ಏರಿ 23,290.15ಕ್ಕೆ ತಲುಪಿ ದಾಖಲೆ ನಿರ್ಮಿಸಿದವು. ಇದರೊಂದಿಗೆ ಮಂಗಳವಾರ 31 ಲಕ್ಷ ಕೋಟಿ ರು. ನಷ್ಟ ಅನುಭವಿಸಿದ್ದ ಹೂಡಿಕೆದಾರರು ಕಳೆದ 3 ದಿನದ ಏರಿಕೆಯೊಂದಿಗೆ ಬಹುತೇಕ ₹31 ಲಕ್ಷ ಕೋಟಿ ನಷ್ಟವನ್ನು ಪುನಃ ವಸೂಲು ಮಾಡಿದಂತಾಗಿದೆ.
ಭಾರಿ ಏರಿಕೆ: ಒಂದು ಹಂತದಲ್ಲಿ ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ದಿನದ ಮಧ್ಯದಲ್ಲಿ ಬರೋಬ್ಬರಿ 1750.8 ಅಂಕ ಅಂದರೆ ಶೇ.2.29ರಷ್ಟು ಜಿಗಿದು 76,795.31ಕ್ಕೆ ತಲುಪಿತ್ತು. ಆದರೆ ದಿನದ ಅಂತ್ಯದಲ್ಲಿ 76,693.36ಕ್ಕೆ ತೃಪ್ತಿ ಪಟ್ಟಿತು. ಇದೇ ರೀತಿ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ದಿನದ ಮಧ್ಯದಲ್ಲಿ 498.8 ಅಂಕ ಏರಿತ್ತು. ಕೊನೆಗೆ 468 ಅಂಕಕ್ಕೆ ಏರಿಕೆ ಇಳಿದು 23,290.15ಕ್ಕೆ ತಲುಪಿತು.
ಸೆನ್ಸೆಕ್ಸ್‌ನಿಂದ ಮಹೀಂದ್ರಾ & ಮಹೀಂದ್ರಾ, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಅದಾನಿ ಭಾರ್ತಿ ಏರ್‌ಟೆಲ್ ಹಾಗೂ ಟಾಟಾ ಸ್ಟೀಲ್ ಲಾಭ ಮಾಡಿದವು.
ಹೂಡಿಕೆದಾರರ ನಷ್ಟ ವಸೂಲು:
ಮಂಗಳವಾರ ಬಿಜೆಪಿಗೆ ಏಕಾಂಗಿಯಾಗಿ ಬಹುಮತ ಬಾರದ ಕಾರಣ ಷೇರುಪೇಟೆ ಪತನಗಗೊಂಡು, ಹೂಡಿಕೆದಾರರಿಗೆ ಒಂದೇ ದಿನ 31 ಲಕ್ಷ ಕೋಟಿ ರು. ನಷ್ಟವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಷೇರುಪೇಟೆ ಏರಿದ ಕಾರಣ 28.65 ಲಕ್ಷ ಕೋಟಿ ರು. ತಂದುಕೊಟ್ಟಿದೆ. ಇದರಿಂದ ನಷ್ಟವನ್ನು ಬಹುತೇಕ ಸರಿದೂಗಿಸಿದಂತಾಗಿದೆ. 3 ದಿನದಲ್ಲಿ ಸೆನ್ಸೆಕ್ಸ್ ಒಟ್ಟಾರೆ 4617 ಅಂಕ ಏರಿಕೆ ಕಂಡಿದೆ.