ಸಾರಾಂಶ
ಶಿಕ್ಷಕರೊಬ್ಬರು ಎಲ್ಲರೆದುರು ಕಪಾಳಮೋಕ್ಷ ಮಾಡಿದ್ದಕ್ಕೆ ಸಿಟ್ಟಿಗೆದ್ದು ವಿದ್ಯಾರ್ಥಿ ಲಂಚ್‌ಬಾಕ್ಸ್‌ನಲ್ಲಿ ಗನ್ ತಂದು ಅಧ್ಯಾಪಕರ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಡೆಹ್ರಾಡೂನ್: ಶಿಕ್ಷಕರೊಬ್ಬರು ಎಲ್ಲರೆದುರು ಕಪಾಳಮೋಕ್ಷ ಮಾಡಿದ್ದಕ್ಕೆ ಸಿಟ್ಟಿಗೆದ್ದು ವಿದ್ಯಾರ್ಥಿ ಲಂಚ್‌ಬಾಕ್ಸ್‌ನಲ್ಲಿ ಗನ್ ತಂದು ಅಧ್ಯಾಪಕರ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಇಲ್ಲಿನ ಉಧಮ್ ಸಿಂಗ್ ಜಿಲ್ಲೆಯ ಗುರು ನಾನಕ್ ಶಾಲೆಯ ಭೌತಶಾಸ್ತ್ರ ಶಿಕ್ಷಕ ಗಂಗನದೀಪ್ ಸಿಂಗ್ ಕೊಹ್ಲಿ ಕೆಲ ದಿನಗಳ ಹಿಂದೆ ಸಮರತ್ ಬಾಜ್ವಾ ಎಂಬಾತ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಬುಧವಾರ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಬಂದೂಕನ್ನು ಪ್ಯಾಕ್ ಮಾಡಿ ತಂದು ತನಗೆ ಹೊಡೆದ ಶಿಕ್ಷಕನಿಗೆ ಹಿಂಬದಿಯಿಂದ ಗುಂಡು ಹಾರಿಸಿದ್ದಾನೆ.
ಪರಿಣಾಮ ಶಿಕ್ಷಕ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ದೇಹದೊಳಗೆ ಹೊಕ್ಕಿದ್ದ ಗುಂಡು ಹೊರ ತೆಗೆಯಲಾಗಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಶೂಟೌಟ್ ನಡೆಸಿದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.