ಅಮೆರಿಕ ರಿಸೆಷನ್‌ ಭೀತಿಗೆ ಸೆನ್ಸೆಕ್ಸ್‌ 2222 ಅಂಕ ಪಲ್ಟಿ!

KannadaprabhaNewsNetwork | Published : Aug 6, 2024 1:36 AM

ಸಾರಾಂಶ

ಅಮೆರಿಕ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಬಹುದು ಹಾಗೂ ಮಧ್ಯಪ್ರಾಚ್ಯದಲ್ಲಿನ ಇಸ್ರೇಲ್‌- ಇರಾನ್‌ ಬಿಕ್ಕಟ್ಟು ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕದಿಂದಾಗಿ ಸೋಮವಾರ ಭಾರತದ ಷೇರುಪೇಟೆಗಳು ತಲ್ಲಣಕ್ಕೆ ಒಳಗಾಗಿವೆ.

ಪಿಟಿಐ ಮುಂಬೈ

ಅಮೆರಿಕ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಬಹುದು ಹಾಗೂ ಮಧ್ಯಪ್ರಾಚ್ಯದಲ್ಲಿನ ಇಸ್ರೇಲ್‌- ಇರಾನ್‌ ಬಿಕ್ಕಟ್ಟು ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕದಿಂದಾಗಿ ಸೋಮವಾರ ಭಾರತದ ಷೇರುಪೇಟೆಗಳು ತಲ್ಲಣಕ್ಕೆ ಒಳಗಾಗಿವೆ. ಇದರ ಫಲವಾಗಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2222 ಅಂಕ ಕುಸಿದು 78759ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 662 ಅಂಕ ಪಲ್ಟಿ ಹೊಡೆದು 24055ಕ್ಕೆ ಜಾರಿದೆ. ಇದರಿಂದಾಗಿ ಷೇರು ಹೂಡಿಕೆದಾರರಿಗೆ ಒಂದೇ ದಿನ ಬರೋಬ್ಬರಿ 15 ಲಕ್ಷ ಕೋಟಿ ರು. ನಷ್ಟವಾಗಿದೆ.

ಭಾರತ ಮಾತ್ರವೇ ಅಲ್ಲದೆ ಜಪಾನ್‌, ದಕ್ಷಿಣ ಕೊರಿಯಾ, ಹಾಂಕಾಂಗ್‌, ಚೀನಾ, ಐರೋಪ್ಯ ಮಾರುಕಟ್ಟೆಗಳಲ್ಲೂ ಸೂಚ್ಯಂಕಗಳು ಕುಸಿತ ದಾಖಲಿಸಿವೆ.

ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಸೆನ್ಸೆಕ್ಸ್‌ 2686 ಅಂಕ ಕುಸಿತ ದಾಖಲಿಸಿತ್ತು. ಅದು ಈ ವರ್ಷ ಸೂಚ್ಯಂಕ ಅನುಭವಿಸಿದ ದುಡ್ಡ ಇಳಿಕೆಯಾಗಿತ್ತು. ಅದಾದ ನಂತರ ಸೋಮವಾರ 2222 ಅಂಕ ಇಳಿದದ್ದು, ಈ ವರ್ಷದ 2ನೇ ಅತಿ ಹೆಚ್ಚು ಅಂಕಗಳ ಕುಸಿತವಾಗಿದೆ.

ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ ಹಾಗೂ ಅಮೆರಿಕದಲ್ಲಿ ಉದ್ಯೋಗ ನಷ್ಟದಿಂದಾಗಿ ಸೃಷ್ಟಿಯಾದ ಆರ್ಥಿಕ ಹಿಂಜರಿತ ಭೀತಿ ಷೇರು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿದೆ. ಚೀನಾ ಹಾಗೂ ಯುರೋಪ್‌ ಈಗಾಗಲೇ ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಜತೆಗೆ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಕೂಡ ಷೇರು ಸೂಚ್ಯಂಕಗಳ ಕುಸಿತಕ್ಕೆ ಕೊಡುಗೆ ನೀಡಿದೆ ಎಂದು ಸ್ವಾಸ್ತಿಕಾ ಇನ್‌ವೆಸ್ಟ್‌ಮಾರ್ಟ್‌ ಕಂಪನಿಯ ಮುಖ್ಯಸ್ಥ ಸಂತೋಷ್‌ ಮೀನಾ ತಿಳಿಸಿದ್ದಾರೆ.

ರುಪಾಯಿ ಕೂಡ ಐತಿಹಾಸಿಕ ಕನಿಷ್ಠ

ಸೋಮವಾರ ಡಾಲರ್‌ ಎದುರು ರುಪಾಯಿ ಮೌಲ್ಯ ಕೂಡಾ 84.03 ರು.ಗೆ ಕುಸಿದಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ.

Share this article