ಹೊಸ ವರ್ಷದ ಸತತ 2 ದಿನಕ್ಕೆ 1804 ಅಂಕ ಏರಿದ್ದ ಸೆನ್ಸೆಕ್ಸ್‌ ನಿನ್ನೆ720 ಅಂಕಗಳ ಕುಸಿತ

KannadaprabhaNewsNetwork |  
Published : Jan 04, 2025, 12:31 AM ISTUpdated : Jan 04, 2025, 04:54 AM IST
ಸೆನ್ಸೆಕ್ಸ್ | Kannada Prabha

ಸಾರಾಂಶ

 ಹೊಸ ವರ್ಷದ ಸತತ 2 ದಿನ ಒಟ್ಟಾರೆ 1804 ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 720 ಅಂಕಗಳ ಕುಸಿತ ಕಂಡು 79223ರಲ್ಲಿ ಅಂತ್ಯವಾಗಿದೆ.

ಮುಂಬೈ: ಹೊಸ ವರ್ಷದ ಸತತ 2 ದಿನ ಒಟ್ಟಾರೆ 1804 ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 720 ಅಂಕಗಳ ಕುಸಿತ ಕಂಡು 79223ರಲ್ಲಿ ಅಂತ್ಯವಾಗಿದೆ. ಅದೆ ರೀತಿ ನಿಫ್ಟಿ ಕೂಡಾ 183 ಅಂಕ ಇಳಿಕೆ ಕಂಡು 24004 ಅಂಕಗಳಲ್ಲಿ ಮುಕ್ತಾಯವಾಗಿದೆ. ಬ್ಯಾಂಕ್‌ ಮತ್ತು ಐಟಿ ವಲಯದ ತ್ರೈಮಾಸಿಕ ವರದಿಗಳ ಕುರಿತು ಕಳವಳ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು ಷೇರುಪೇಟೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಯಿತು.

ಹಳಿ ಮೇಲೆ ಪಬ್ಜಿ ಆಡುವ ವೇಳೆ ರೈಲು ಹರಿದು ಮೂರು ಯುವಕರ ಸಾವು 

ಪಟನಾ: ಹಳಿ ಮೇಲೆ ಕುಳಿತು ಮೊಬೈಲ್‌ನಲ್ಲಿ ಪಬ್ಜಿ ಆಡುತ್ತಾ ಮೈ ಮರೆತಿದ್ದಾಗ ರೈಲು ಹರಿದು ಮೂವರು ಯುವಕರು ದುರ್ಮರಣ ಹೊಂದಿರುವ ಆಘಾತಕಾರಿ ಘಟನೆ ಬಿಹಾರ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಕಟಿಯಾಗಂಜ್-ಮುಜಾಫರ್‌ಪುರ್ ರೈಲು ವಿಭಾಗದ ಮಾನ್ಸಾ ಟೋಲಾದ ರಾಯಲ್ ಸ್ಕೂಲ್ ಬಳಿ ಈ ದುರಂತ ಸಂಭವಿಸಿದೆ. ಫುರ್ಕನ್ ಆಲಂ, ಸಮೀರ್ ಆಲಂ ಮತ್ತು ಹಬೀಬುಲ್ಲಾ ಅನ್ಸಾರಿ ಮೃತರು. ಮೂವರು ಯುವಕರು ಕಿವಿಗೆ ಇಯರ್‌ ಫೋನ್‌ ಧರಿಸಿ ಗೇಮ್‌ನಲ್ಲಿ ಮಗ್ನರಾಗಿದ್ದ ಕಾರಣ, ರೈಲು ಬಂದಿದ್ದು ಅವರ ಅರಿವಿಗೆ ಬಂದಿಲ್ಲ.

ಅಮೆರಿಕ; ಕಟ್ಟಡದ ಮೇಲೆ ಅಪ್ಪಳಿಸಿದ ಲಘು ವಿಮಾನ: 2 ಸಾವು, 18 ಜನರಿಗೆ ಗಾಯ

ಫುಲರ್ಟನ್: ಅಜರ್ಬೈಜನ್, ದ.ಕೊರಿಯಾದ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ವಿಮಾನ ಅಪಘಾತ ನಡೆದಿದೆ. ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಲಘು ವಿಮಾನವೊಂದು ಪೀಠೋಪಕರಣ ಕಟ್ಟಡ ಕಟ್ಟಡದ ಮೇಲೆ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ.ಆರೆಂಜ್ ಕೌಂಟಿಯ ಫುಲ್ಲರ್‌ಟನ್‌ನ ಮುನ್ಸಿಪಲ್‌ ಏರ್‌ಪೋರ್ಟ್‌ನಿಂದ ಟೇಕ್ ಆಫ್‌ ಆದ 2 ನಿಮಿಷಗಳ ನಂತರ ವಿಮಾನವು ಪತನಗೊಂಡಿದೆ. ವಿಮಾನ ಪತನದ ದೃಶ್ಯ ಸಿಸಿಟೀವಿಯೊಂದರಲ್ಲಿ ಸೆರೆಯಾಗಿದೆ. ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಪೈಲಟ್‌ ಏರ್‌ ಟ್ರಾಫಿಕ್ ಕಂಟ್ರೋಲ್‌ಗೆ ತುರ್ತು ಲ್ಯಾಂಡಿಂಗ್ ಮಾಡಲು ಹಿಂದಿರುಗುವುದಾಗಿ ಹೇಳಿದ್ದರು. ಆದರೆ ವಿಮಾನದ ಸಮಸ್ಯೆ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ವಿಮಾನದ ಸಿಬ್ಬಂದಿ ಹೇಳಿದ್ದಾರೆ.

ಪರೀಕ್ಷೆ ವೇಳೆ 180 ಕಿ.ಮೀ ವೇಗ ಸಾಧಿಸಿದ ವಂದೇ ಭಾರತ್‌ ಸ್ಲೀಪರ್‌ ರೈಲು

ನವದೆಹಲಿ: ಕಳೆದ 3 ದಿನಗಳಲ್ಲಿ ಬಹು ವಿಧದಲ್ಲಿ ನಡೆಸಿದ ಪರೀಕ್ಷೆ ವೇಳೆ ವಂದೇ ಭಾರತ್‌ ಸ್ಲೀಪರ್‌ ರೈಲು ಗಂಟೆಗೆ 180 ಕಿ.ಮೀ. ಉನ್ನತ ವೇಗ ಮಿತಿ ಸಾಧಿಸಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಶುಕ್ರವಾರ ಹೇಳಿದೆ. ದೂರದೂರಿನ ಪಯಣಕ್ಕೆ ದೇಶಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಪ್ರವಾಸ ಒದಗಿಸುವ ಈ ವಂದೇ ಭಾರತ್‌ ಸೇವೆಗೆ ನಿಯೋಜನೆಗೂ ಮುನ್ನ ಈ ತಿಂಗಳ ಅಂತ್ಯದ ವರೆಗೂ ರೈಲಿನ ಪರೀಕ್ಷೆಗಳು ನಡೆಯಲಿವೆ ಎಂದು ಇಲಾಖೆ ತಿಳಿಸಿದೆ. ಕೋಟಾ ರೈಲು ವಿಭಾಗದಲ್ಲಿ ನಡೆಸಿದ ವಂದೇ ಭಾರತ್‌ನ ಯಶಸ್ವಿ ಪರೀಕ್ಷೆಯ ವಿಡಿಯೋ ತುಣುಕೊಂದನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅದರ ವೇಗವನ್ನು ಉಲ್ಲೇಖಿಸಿದ್ದಾರೆ.

ಮಣಿಪುರದಲ್ಲಿ ಎಸ್ಪಿ ಕಚೇರಿ ಮೇಲೆ ದುಷ್ಕರ್ಮಿಗಳ ದಾಳಿ: ಹಲವರಿಗೆ ತೀವ್ರ ಗಾಯ

ಇಂಫಾಲ: ಇಂಫಾಲ್‌ ಪೂರ್ವ ಜಿಲ್ಲೆಯ ಗಡಿಯಲ್ಲಿರುವ ಸೈಬೋಲ್ ಗ್ರಾಮದಿಂದ ಕೇಂದ್ರ ಪಡೆಗಳನ್ನು ತೆಗೆದುಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಜನರ ಗುಂಪು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ ಘಟನೆ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ನಡೆದಿದೆ. ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವಿನ ಘರ್ಷಣೆಯಲ್ಲಿ ಎಸ್ಪಿ ಎಂ.ಪ್ರಭಾಕರನ್, ಪೊಲೀಸ್‌ ಸಿಬ್ಬಂದಿ, ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಡಿ.31ರಂದು ಸೈಬೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳು, ಮಹಿಳೆಯರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಕುಕಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ನಡುವೆಯೇ ಬಿಎಸ್‌ಎಫ್‌ ಮತ್ತು ಸಿಆರ್‌ಪಿಎಫ್‌ ಕೇಂದ್ರ ಪಡೆಗಳ ನಿಯೋಜಿಸಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿ ಎಸ್ಪಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಮೇಲೆ ಕಲ್ಲು, ಇತರ ಸ್ಫೋಟಕಗಳನ್ನು ಎಸೆದು ದಾಂಧಲೆ ಮಾಡಿದ್ದಾರೆ. ಅಲ್ಲದೇ ಪೊಲೀಸ್‌ ವಾಹನಗಳನ್ನು ಕೂಡ ಜಖಂಗೊಳಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಕೇಂದ್ರ ಪಡೆಗಳು ಸ್ಥಳಕ್ಕೆ ಧಾವಿಸಿವೆ.

PREV

Recommended Stories

ಟ್ರಿಪಲ್‌ ಏರ್‌ಡಿಫೆನ್ಸ್‌ ಪರೀಕ್ಷೆ ಯಶಸ್ವಿ
ಗಗನಯಾನದ ಏರ್‌ಡ್ರಾಪ್‌ ಪರೀಕ್ಷೆ ಯಶಸ್ವಿ - ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯ