ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 885 ಅಂಕಗಳ ಭಾರೀ ಕುಸಿತ : 4.4 ಲಕ್ಷ ಕೋಟಿ ರು. ನಷ್ಟ

KannadaprabhaNewsNetwork |  
Published : Aug 03, 2024, 12:42 AM ISTUpdated : Aug 03, 2024, 05:17 AM IST
ಸೆನ್ಸೆಕ್ಸ್‌ | Kannada Prabha

ಸಾರಾಂಶ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 885 ಅಂಕಗಳ ಭಾರೀ ಕುಸಿತ ಕಂಡು 80981 ಅಂಕಗಳಲ್ಲಿ ಮುಕ್ತಾಯವಾಗಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 885 ಅಂಕಗಳ ಭಾರೀ ಕುಸಿತ ಕಂಡು 80981 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 324 ಅಂಕ ಕುಸಿದು 24717 ಅಂಕಗಳಲ್ಲಿ ಕೊನೆಗೊಂಡಿತು. ಇದರೊಂದಿಗೆ ಸತತ 5 ದಿನಗಳ ಏರಿಕೆಗೆ ಬ್ರೇಕ್‌ ಬಿದ್ದಿದೆ. ಅಮೆರಿಕದ ಐಟಿ ವಲಯದ ಕಂಪನಿಗಳ ನೀರಸ ಪ್ರಗತಿ ವರದಿ, ನಿರುದ್ಯೋಗ ಹೆಚ್ಚಳ, ಬಡ್ಡಿದರ ಏರಿಕೆ, ಮತ್ತೆ ಆರ್ಥಿಕ ಹಿಂಜರಿತದ ವದಂತಿಗಳು ಅಮೆರಿಕ ಷೇರುಪೇಟೆಯಲ್ಲಿ ಭಾರೀ ಇಳಿಕೆಗೆ ಕಾರಣವಾಗಿತ್ತು. 

ಅದರ ಪ್ರಭಾವ ಇತರೆ ಜಾಗತಿಕ ಷೇರುಪೇಟೆಗಳ ಮೇಲೂ ಉಂಟಾಗಿ ಅಂತಿಮ ಭಾರತದ ಷೇರುಪೇಟೆ ಮೇಲೂ ಪ್ರಭಾವ ಬೀರಿತು. ಲೋಹ, ಐಟಿ, ಆಟೋಮೊಬೈಲ್‌ ವಲಯದ ಷೇರುಗಳ ಬೆಲೆ ಭಾರಿ ಇಳಿಕೆ ಕಂಡಿತು. ಶುಕ್ರವಾರ ಷೇರುಪೇಟೆಯಲ್ಲಿ ಕಂಡುಬಂದ ಭಾರೀ ಕುಸಿತದ ಪರಿಣಾಮ ಹೂಡಿಕೆದಾರರಿಗೆ 4.4 ಲಕ್ಷ ಕೋಟಿ ರು.ನಷ್ಟವಾಯಿತು.

ಕಾಶ್ಮೀರ ಉಗ್ರ ದಾಳಿ ಹೆಚ್ಚಳ: ಬಿಎಸ್‌ಎಫ್‌ನ 2 ಡಿಜಿಗಳಿಗೆ ಹಿಂಬಡ್ತಿ

ನವದೆಹಲಿ: ಇತ್ತೀಚಿಗೆ ಜಮ್ಮು-ಕಾಶ್ಮೀರದಲ್ಲಿ ಸರಣಿ ಉಗ್ರ ದಾಳಿ ಬೆನ್ನಲ್ಲೇ ಇಬ್ಬರು ಬಿಎಸ್ಎಫ್‌ ಡಿಜಿಗಳಿಗೆ ಕೇಂದ್ರ ಸರ್ಕಾರ ಹಿಂಬಡ್ತಿ ನೀಡಿದೆ. ಜೊತೆಗೆ ಕಡ್ಡಾಯವಾಗಿ ರಾಜ್ಯ ಸೇವೆಗೆ ವಾಪಾಸ್ಸಾಗುವಂತೆ ಆದೇಶಿಸಿದೆ. ಐಪಿಎಸ್‌ ಅಧಿಕಾರಿಗಳಾಗಿರುವ ಗಡಿ ಭದ್ರತಾ ಪಡೆಯ ಡಿಜಿ ನಿತಿನ್ ಅರ್ಗವಾಲ್ ಮತ್ತು ಉಪ ವಿಶೇಷ ಡಿಜಿ ವೈ.ಬಿ ಖುರಾನಿಯಾರಿಗೆ ರಾಜ್ಯ ಸೇವೆಗೆ ಮರಳುವಂತೆ ಕೇಂದ್ರದ ಸಂಪುಟ ನೇಮಕಾತಿ ಸಮಿತಿ ಆದೇಶ ನೀಡಿದೆ. ಈ ವರ್ಷದಲ್ಲಿ ಕಾಶ್ಮೀರದಲ್ಲಿ ಸುಮಾರು 22 ಮಂದಿ ಪ್ರತ್ಯೇಕ ಉಗ್ರ ದಾಳಿಗಳಲ್ಲಿ ಸಾವನ್ನಪ್ಪಿದ್ದರು. ಅಲ್ಲದೇ 5 ಮಂದಿ ಯೋಧರು ಕೂಡ ಹತರಾಗಿದ್ದರು. ವಿಧ್ವಂಸಕ ಕೃತ್ಯಗಳನ್ನು ತಡೆಯಲು ವಿಫಲರಾದ ಬೆನ್ನಲ್ಲೇ ಕೇಂದ್ರ ಈ ಕ್ರಮ ಕೈಗೊಂಡಿದೆ.

ಕೇರಳ ಭೂಕುಸಿತ ಹೇಳಿಕೆ: ಶಾ ವಿರುದ್ಧ ಹಕ್ಕುಚ್ಯುತಿ ಕೋರಿ ಕಾಂಗ್ರೆಸ್‌ ನೋಟಿಸ್‌

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತಕ್ಕೂ ಮುನ್ನ ಕೇರಳ ಸರ್ಕಾರಕ್ಕೆ, ಕೇಂದ್ರ ಸರ್ಕಾರ ಎಚ್ಚರಿಸಿತ್ತು ಎಂದು ಹೇಳುವ ಮೂಲಕ ರಾಜ್ಯಸಭೆಯಲ್ಲಿ ದುರಂತದ ಬಗ್ಗೆ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡನೆ ಕೋರಿ ಮಂಡಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ರಾಜ್ಯಸಭಾ ಸ್ವೀಕರ್‌ ಜಗದೀಪ್‌ ಧನಕರ್‌ ಅವರಿಗೆ ನೋಟಿಸ್‌ ಬರೆದಿದ್ದಾರೆ. ಈ ಪತ್ರದಲ್ಲಿ ಜೈರಾಮ್‌, ಕೇರಳ ಸರ್ಕಾರಕ್ಕೆ ಮುಂಚಿತವಾಗಿಯೇ ಎಚ್ಚರಿಸಿದ್ದೇವೆ ಎಂದ ಅಮಿತ್‌ ಶಾ ಅವರು ತಿಳಿಸಿರುವುದು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪೂಜಾ ಬೆನ್ನಲ್ಲೇ ಇನ್ನೂ 6 ಐಎಎಸ್‌ಗಳ ವಿರುದ್ಧ ಕೇಂದ್ರ ಆಂತರಿಕ ತನಿಖೆ

ನವದೆಹಲಿ: ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಪ್ರಕರಣದ ಬೆನ್ನಲ್ಲೇ ಮತ್ತೆ 6 ಐಎಎಸ್‌ ಹಾಗೂ ಐಆರ್‌ಎಸ್‌ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆ ನಡೆಸಲು ಕೇಂದ್ರ ವೈಯಕ್ತಿಕ ಮತ್ತು ತರಬೇತಿ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಪೂಜಾ ಖೇಡ್ಕರ್‌ ಬಳಿಕ ಈ ರೀತಿ ನಕಲಿ ಪ್ರಮಾಣ ಪತ್ರ ಹೊಂದಿರುವ ಹಲವು ಅಧಿಕಾರಿ ಹಾಗೂ ಪ್ರೊಬೇಷನರಿ ಅಧಿಕಾರಿಗಳ ಅಂಗವೈಕಲ್ಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳನ್ನು ಕೇಂದ್ರ ಲೋಕಸೇವಾ ಆಯೋಗ ಪರಿಶೀಲನೆಗೆ ಒಳಪಡಿಸಿದೆ. ಇದರಲ್ಲಿ ಓರ್ವ ಐಆರ್‌ಎಸ್‌ ಮತ್ತು ಐವರು ಐಎಎಸ್‌ ಅಧಿಕಾರಿಗಳ ಪ್ರಮಾಣ ಪತ್ರವನ್ನು ತನಿಖೆ ನಡೆಸಲು ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ