ಪಹಲ್ಗಾಂ ದಾಳಿ ಭದ್ರತಾ ವೈಫಲ್ಯದ ಹೊಣೆ ಅಮಿತ್‌ ಶಾ ಹೊರಲಿ: ಖರ್ಗೆ

KannadaprabhaNewsNetwork |  
Published : Jul 30, 2025, 12:45 AM IST
ಖರ್ಗೆ  | Kannada Prabha

ಸಾರಾಂಶ

ಪಹಲ್ಗಾಂ ದಾಳಿ ವಿಚಾರ ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ

- ಪಹಲ್ಗಾಂ ದಾಳಿ ಉತ್ತರದಾಯಿತ್ವ ನಿಗದಿಯಾಗಬೇಕು

- ರಾಜ್ಯಸಭೆಯಲ್ಲಿ ಆಪರೇಷನ್‌ ಸಿಂದೂರ ಚರ್ಚೆಯಲ್ಲಿ ಆಗ್ರಹ- ಪಹಲ್ಗಾಂ ದಾಳಿ ವಿಚಾರವಾಗಿ ಕೇಂದ್ರ ವಿರುದ್ಧ ಖರ್ಗೆ ಕಿಡಿ- ನಾವು ಖಂಡಿಸುತ್ತಿದ್ದರೆ, ನೀವು ಅವರನ್ನು ಅಪ್ಪಿಕೊಳ್ಳುತ್ತೀರಿ- 2015ರ ಪಾಕ್‌ ಪಿಎಂ ಮಗಳ ಮದುವೆಗೆ ಭೇಟಿಗೆ ಟಾಂಗ್‌

ಪಿಟಿಐ ನವದೆಹಲಿ

ಪಹಲ್ಗಾಂ ದಾಳಿ ವಿಚಾರ ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ‘ನಾವು ಪಾಕಿಸ್ತಾನವನ್ನು ಖಂಡಿಸುತ್ತಿದ್ದರೆ ನೀವು ಅವರನ್ನು ಅಪ್ಪಿಕೊಳ್ಳುತ್ತೀರಿ’ ಕಿಡಿಕಾರಿದ ಖರ್ಗೆ, ‘ಪಹಲ್ಗಾಂ ದಾಳಿಗೆ ಕಾರಣವಾದ ಭದ್ರತಾ ವೈಫಲ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಹೊಣೆ ಹೊರಬೇಕು ಮತ್ತು ಈ ಸಂಬಂಧ ಉತ್ತರದಾಯಿತ್ವ ನಿಗದಿಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಆಪರೇಷನ್‌ ಸಿಂದೂರ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ ಕೇಂದ್ರ ಸರ್ಕಾರ ವಿರುದ್ಧ ತೀವ್ರ ಹರಿಹಾಯ್ದ ಅವರು 2015ರ ಪ್ರಧಾನಿ ಮೋದಿ ಅವರ ಪೂರ್ವನಿಯೋಜಿತವಲ್ಲದ ಪಾಕಿಸ್ತಾನ ಭೇಟಿ ಕುರಿತೂ ಕಿಡಿಕಾರಿದರು.

‘ಇಡೀ ದೇಶದ ಜತೆಗೆ ಈ (ಪಹಲ್ಗಾಂ) ಬರ್ಬರ ದಾಳಿ ಹಾಗೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನೂ ಖಂಡಿಸುತ್ತೇನೆ. ನಾವು ಹಿಂದೆಯೂ ಪಾಕಿಸ್ತಾನವನ್ನು ಖಂಡಿಸಿದ್ದೇವೆ. ಇಂದೂ ಖಂಡಿಸುತ್ತೇವೆ, ಒಂದು ವೇಳೆ ಅವರು ಇದೇ ರೀತೀ ಭಯೋತ್ಪಾದನೆಗೆ ಬೆಂಬಲಿಸಿದರೆ ಮುಂದೆಯೂ ಖಂಡಿಸುತ್ತೇವೆ. ನಾವು ಯಾವತ್ತಿಗೂ ಪಾಕಿಸ್ತಾನವನ್ನು ಖಂಡಿಸುತ್ತಾ ಬಂದಿದ್ದೇವೆ. ಆದರೆ ಇಲ್ಲಿ ನಾವು ಪಾಕಿಸ್ತಾವನ್ನು ಖಂಡಿಸುತ್ತಿದ್ದರೆ, ನೀವು (ಮೋದಿ) ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಅಪ್ಪುಗೆ ನೀಡುತ್ತೀರಿ. ನಿಮಗೆ ಕರೆಯದೆ ಹೋಗುವ ಅಭ್ಯಾಸವೇ ಇದೆ. ಈ ಸದನದಲ್ಲಿ ಉಪಸ್ಥಿತರಿರುವ ಯಾವ ಸದಸ್ಯರು ಪಾಕಿಸ್ತಾನಕ್ಕೆ ಹೋಗಿಲ್ಲ. ಆದರೆ ವಿಶ್ವಗುರು ಮಾತ್ರ ಅಲ್ಲಿಗೆ ಹೋಗಿ ಬಂದಿದ್ದಾರೆ’ ಎಂದು ಕಾಲೆಳೆದರು.

ಶಾ ವಿರುದ್ಧ ಕಿಡಿ:

ಪಹಲ್ಗಾಂ ದಾಳಿ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಗೃಹ ಸಚಿವ ಅಮಿತ್‌ ಶಾ ವಿರುದ್ಧವೂ ಖರ್ಗೆ ಕಿಡಿಕಾರಿದರು. ಘಟನೆ ಕುರಿತ ಎಲ್ಲಾ ಹೊಣೆಯನ್ನು ತಾನೇ ವಹಿಸಿಕೊಳ್ಳುವುದಾಗಿ ಲೆಫ್ಟಿನೆಂಟ್‌ ಗವರ್ನರ್‌ ಹೇಳಿದ್ದಾರೆ. ಆದರೆ, ಭದ್ರತಾ ವೈಫಲ್ಯಕ್ಕೆ ಗೃಹ ಸಚಿವರು ಕಾರಣವೇ ಹೊರತು ಲೆಫ್ಟಿನೆಂಟ್‌ ಗವರ್ನರ್‌ ಅಲ್ಲ. ಈ ಕುರಿತ ಉತ್ತರದಾಯಿತ್ವ ನಿಗದಿಯಾಗಬೇಕು ಎಂದು ಆಗ್ರಹಿಸಿದರು.ನೀವು ಕಟ್ಟಿದ್ದು ಸುಳ್ಳಿನ ಫ್ಯಾಕ್ಟರಿ!

ಚರ್ಚೆಯ ವೇಳೆ ಪಕ್ಷದ ಸಾಧನೆ ಕುರಿತು ಪ್ರಸ್ತಾಪಿಸಿದ ಖರ್ಗೆ, ‘ಕಾಂಗ್ರೆಸ್‌ನ ಇತಿಹಾಸ ದೊಡ್ಡದಿದೆ. ರಾಷ್ಟ್ರನಿರ್ಮಾಣದಲ್ಲಿ ಪಕ್ಷದ ಕೊಡುಗೆ ಅಪಾರ. ನೀವು ಸುಳ್ಳಿನ ಫ್ಯಾಕ್ಟರಿಯನ್ನಷ್ಟೇ ಕಟ್ಟಿದ್ದೀರಿ ಹೊರತು ಒಂದೇ ಒಂದು ಸಾರ್ವಜನಿಕ ಕ್ಷೇತ್ರದ ಸಂಸ್ಥೆಯನ್ನು ನಿರ್ಮಿಸಿಲ್ಲ. ಆದರೂ ನಾವು ಸ್ಥಾಪಿಸಿದ ಎಚ್‌ಎಎಲ್‌ ಮತ್ತು ಇತರೆ ಸರ್ಕಾರಿ ಸಂಸ್ಥೆಗಳ ಬಗ್ಗೆ ನೀವು ಮಾತನಾಡುತ್ತೀರಿ’ ಎಂದರು.

ದಾಳಿ ಬಗ್ಗೆ ಮೊದಲೇ ಗೊತ್ತಿತ್ತೇ?:

‘ಪಹಲ್ಗಾಂ ದಾಳಿಯ ಮೂರು ದಿನಗಳ ಮೊದಲು ಮೋದಿ ಅವರ ಕಾಶ್ಮೀರ ಭೇಟಿ ರದ್ದು ಮಾಡಲಾಗಿತ್ತು. ಈ ವಿಚಾರದ ಕುರಿತು ನಾನು ಹಿಂದೆಯೂ ಪ್ರಸ್ತಾಪಿಸಿದ್ದೆ. ಆದರೂ ನನಗೆ ಉತ್ತರ ಸಿಕ್ಕಿಲ್ಲ. ಕೇಂದ್ರ ಸರ್ಕಾರಕ್ಕೆ ಉಗ್ರ ದಾಳಿಯ ಸೂಚನೆ ಮೊದಲೇ ಸಿಕ್ಕಿತ್ತೇ? ಒಂದು ವೇಳೆ ಸಿಕ್ಕಿತ್ತಾದರೆ ಕಾಶ್ಮೀರಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಯಾಕೆ ತಡೆಯಲಿಲ್ಲ’ ಎಂದು ಪ್ರಶ್ನಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ