ಪ್ರೀತಿಯ ಬಂಗಲೆ ಮನ್ನತ್‌ ಬಿಟ್ಟು ಶೀಘ್ರವೇ ಬಾಡಿಗೆ ಮನೆಗೆ ನಟ ಶಾರುಖ್‌ ಖಾನ್‌ ಶಿಫ್ಟ್‌!

KannadaprabhaNewsNetwork | Updated : Feb 27 2025, 04:31 AM IST

ಸಾರಾಂಶ

ಅಭಿಮಾನಿಗಳ ನೆಚ್ಚಿನ ಮುಂಬೈನಲ್ಲಿರುವ 4 ಮಹಡಿಗಳ ತಮ್ಮ ನೆಚ್ಚಿನ ಬಂಗಲೆಯಾದ ‘ಮನ್ನತ್‌’ ಅನ್ನು ನಟ ಶಾರುಖ್‌ ಖಾನ್‌ ಶೀಘ್ರ ತೊರೆದು ಬಾಡಿಗೆ ಮನೆ ಸೇರಲಿದ್ದಾರೆ.

ನವದೆಹಲಿ: ಅಭಿಮಾನಿಗಳ ನೆಚ್ಚಿನ ಮುಂಬೈನಲ್ಲಿರುವ 4 ಮಹಡಿಗಳ ತಮ್ಮ ನೆಚ್ಚಿನ ಬಂಗಲೆಯಾದ ‘ಮನ್ನತ್‌’ ಅನ್ನು ನಟ ಶಾರುಖ್‌ ಖಾನ್‌ ಶೀಘ್ರ ತೊರೆದು ಬಾಡಿಗೆ ಮನೆ ಸೇರಲಿದ್ದಾರೆ. ಮನ್ನತ್‌ಗೆ ಇನ್ನೂ ಎರಡು ಮಹಡಿ ಸೇರಿಸಲು ಕೋರ್ಟ್‌ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಾರುಖ್‌ 4 ಮಹಡಿಯ ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ತೆರಳಲಿದ್ದಾರೆ. ಇದರ ಮಾಸಿಕ ಬಾಡಿಗೆ 24 ಲಕ್ಷ ರು. ಇದೆ. ಬಂಗಲೆಯ ನವೀಕರಣ ಕಾರಣ ಮೇ ಹೊತ್ತಿಗೆ ನಟ ಕುಟುಂಬ ಸಮೇತ ಸ್ಥಳಾಂತರವಾಗಲಿದ್ದಾರೆ. ಮನ್ನತ್‌ ಪಾರಂಪರಿಕ ಕಟ್ಟಡದ ಮಾನ್ಯತೆ ಹೊಂದಿರುವ ಕಾರಣ ಅದರ ನವೀಕರಣಕ್ಕೆ ಕೋರ್ಟ್‌ ಅನುಮತಿ ಅಗತ್ಯವಾಗಿತ್ತು. 

ಫಡ್ನವೀಸ್‌ ಹೊಗಳಿ, ಶಿಂಧೆ ಟೀಕಿಸಿದ ಠಾಕ್ರೆ ಬಣದ ಮುಖವಾಣಿ ‘ಸಾಮ್ನಾ’ 

ಮುಂಬೈ: ಶಿವಸೇನೆ (ಠಾಕ್ರೆ ಬಣ) ಮುಖವಾಣಿ ‘ಸಾಮ್ನಾ’ ಪತ್ರಿಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಆಡಳಿತದಲ್ಲಿ ಶಿಸ್ತು ತರಲು, ವಿಶೇಷವಾಗಿ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಫಡ್ನವೀಸ್ ತೆಗೆದುಕೊಂಡ ನಿರ್ಧಾರಗಳನ್ನು ತನ್ನ ಸಂಪಾದಕೀಯದಲ್ಲಿ ಶ್ಲಾಘಿಸಿದೆ. ಇದೇ ವೇಳೆ, 2022ರಲ್ಲಿ ಪಕ್ಷದಿಂದ ಬೇರ್ಪಟ್ಟು ಠಾಕ್ರೆ ನೇತೃತ್ವದ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಏಕನಾಥ್ ಶಿಂಧೆ ವಿರುದ್ಧ ಚಾಟಿ ಬೀಸಿದೆ. ‘ಶಿಂಧೆ ಅವಧಿಯಲ್ಲಿ ಆರ್ಥಿಕ ಅಶಿಸ್ತು ಮಿತಿ ಮೀರಿತ್ತು. ಜನರ ಹಣವನ್ನು ಲೂಟಿ ಹೊಡೆಯಲಾಗಿತ್ತು. ಇತ್ತೀಚಿನ ಸುದ್ದಿಯಂತೆ, ಶಿಂಧೆ ಆಪ್ತ ಹತ್ತು ಸಾವಿರ ಕೋಟಿ ರು.ಗಳೊಂದಿಗೆ ದುಬೈಗೆ ಪರಾರಿಯಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದೆ.

ಮುಂದಿನ ಮಹಾಕುಂಭ ಮರಳಲ್ಲಿ: ಪ್ರಧಾನಿಗೆ ವಾಂಗ್ಚುಕ್ ಎಚ್ಚರಿಕೆ!ನವದೆಹಲಿ: ‘ಹಿಮಾಲಯದ ಹಿಮನದಿಗಳು ಕರಗುತ್ತಿದ್ದು, ಹಿಮನದಿಗಳ ಸ್ಥಿತಿ ನಿರ್ಣಯಿಸಲು ಆಯೋಗವನ್ನು ಸ್ಥಾಪಿಸ ಬೇಕು. ಇಲ್ಲದಿದ್ದರೆ ನದಿಗಳೆಲ್ಲವೂ ಒಣಗಿ ಮುಂದಿನ ಮಹಾಕುಂಭಮೇಳ ಮರಳಿನ ಮೇಲೆ ಮಾಡಬೇಕಾಗಬಹುದು’ ಎಂದು ಆತಂಕ ವ್ಯಕ್ಯಪಡಿಸಿ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.ಹಿಮನದಿಗಳ ಸ್ಥಿತಿ ಕುರಿತು ಮೋದಿಗೆ ಬಹಿರಂಗ ಪತ್ರ ಬರೆದಿರುವ ವಾಂಗ್ಚುಕ್ ‘ಭಾರತದ ಹಲವು ನದಿಗಳ ಮೂಲವಾದ ಹಿಮಾಲಯದ ನದಿಗಳು ವೇಗವಾಗಿ ಕರಗುತ್ತಿದೆ. ಭಾರತವು ತನ್ನ ಹಿಮನದಿಗಳನ್ನು ಸಂರಕ್ಷಿಸುವಲ್ಲಿ ಮುಂಚೂಣಿ ಯಲ್ಲಿರಬೇಕು. ಹಿಮನದಿ ಕರಗುವಿಕೆಯ ಪರಿಸ್ಥಿತಿ ಹೀಗೆ ಮುಂದುವರೆದರೆ, 144 ವರ್ಷಗಳ ಬಳಿಕ ಮಹಾಕುಂಭವನ್ನು ಪವಿತ್ರ ನದಿಯ ಮರಳಿನ ಅವಶೇಷಗಳ ಮೇಲೆ ಮಾತ್ರ ನಡೆಸಬಹುದು’ ಎಂದಿದ್ದಾರೆ.

370ನೇ ವಿಧಿ ರದ್ಧತಿ ಬಗ್ಗೆ ಕಿಡಿಕಾರಿದ್ದ ಒಮರ್‌ರಿಂದ ಇದೀಗ ಭಾರೀ ಮೆಚ್ಚುಗೆ 

ನವದೆಹಲಿ: 370ನೇ ವಿಧಿ ರದ್ದತಿಯನ್ನು ಬಹುವಾಗಿ ವಿರೋಧಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಹಾಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಇದೀಗ ಅದರ ಪರ ಮಾತನಾಡಿದ್ದಾರೆ. 2019ರ ನಂತರ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳು ಇಳಿಮುಖವಾಗಿವೆ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒಮರ್‌, ‘ರಾಜ್ಯಕ್ಕೆ ವಿಶೇಷ ಅಧಿಕಾರ ನೀಡುವ ವಿಧಿ ರದ್ದಾದ ನಂತರ ಅಲ್ಲಿ ಆತಂಕವಾದಿಗಳ ಚಟುವಟಿಕೆ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಿದೆ’ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರ ವಿಷಯ ನಿಮಗೆ ಸಂಬಂಧ ಇಲ್ಲ: ಭಾರತಕ್ಕೆ ಬಾಂಗ್ಲಾ ಟಾಂಗ್‌ 

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈ. ಶಂಕರ್‌ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ‘ ನಮ್ಮ ದೇಶದಲ್ಲಿನ ದಾಳಿಗಳಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ. ಈ ವಿಚಾರದಲ್ಲಿ ಭಾರತ ಹಸ್ತಕ್ಷೇಪ ಮಾಡದಿರುವುದು ಉತ್ತಮ ’ ಎಂದು ಬಾಂಗ್ಲಾ ತಿರುಗೇಟು ನೀಡಿದೆ.ಜೈಶಂಕರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದ ವಿದೇಶಾಂಗ ಸಲಹೆಗಾ ತೌಹೀದ್‌ ಹೊಸೈನ್, ‘ ಇದರಿಂದ ಭಾರತಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎನ್ನುವುದು ಅವರ ಆಂತರಿಕ ವಿಚಾರ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ದಾಳಿಯನ್ನು ಭಾರತದಲ್ಲಿ ಬೇರೆಯ ರೀತಿಯಲ್ಲೇ ಚಿತ್ರಿಸಲಾಗುತ್ತದೆ. ಭಾರತವು ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅನುಸರಿಸಬೇಕು’ ಎಂದಿದ್ದಾರೆ.

Share this article