ಸಾರಾಂಶ
ತೇಜಸ್ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರ ತವರಿನಲ್ಲಿ ದುಃಖ ಮಡುಗಟ್ಟಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆ ನಗರೋಟಾ ಬಗವಾನ್‌ನಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರು ಹಾಗೂ ಊರವರು ತಮ್ಮ ‘ರಿಯಲ್ ಹೀರೋ’ವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಧರ್ಮಶಾಲಾ/ಹಮೀರ್‌ಪುರ : ಶುಕ್ರವಾರ ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರ ತವರಿನಲ್ಲಿ ದುಃಖ ಮಡುಗಟ್ಟಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ನಗರೋಟಾ ಬಗವಾನ್‌ನಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರು ಹಾಗೂ ಊರವರು ತಮ್ಮ ‘ರಿಯಲ್ ಹೀರೋ’ವನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಡುತ್ತಿದ್ದಾರೆ. ಈ ನಡುವೆ ದುಬೈನಿಂದ ಅವರ ಮೃತಶರೀರದ ಅವಶೇಷಗಳನ್ನು ಕರೆತರುವ ಕೆಲಸವಾಗುತ್ತಿದ್ದು, ಭಾನುವಾರ ಕಂಗ್ರಾದ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಅವಶೇಷಗಳು ತಲುಪಲಿವೆ. ಭಾನುವಾರ ಮಧ್ಯಾಹ್ನ 2 ಗಂಟೆ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ನಿಯೂ ವಾಯುಪಡೆಯಲ್ಲಿ ಸೇವೆ
ನಮಾಂಶ್ ಸ್ಯಾಲ್ ಅವರ ಪತ್ನಿ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಜಗನ್ನಾಥ್ ಅವರು ಈ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ದಂಪತಿಗೆ 6 ವರ್ಷದ ಪುತ್ರಿಯಿದ್ದಾಳೆ
ಪಾಕ್ ರಕ್ಷಣಾ ಸಚಿವ ಸಂತಾಪ
ತೇಜಸ್ ಪತನದ ವೇಳೆ ಸಾವಿಗೀಡಾದ ಪೈಲಟ್ ನಮಾಂಶ್ ಸ್ಯಾಲ್ ಅವರ ಕುಟುಂಬಕ್ಕೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಶುಕ್ರವಾರ ಸಂತಾಪ ಸೂಚಿಸಿದ್ದಾರೆ. ‘ದುಬೈ ಏರ್ ಶೋನಲ್ಲಿ ಮೃತಪಟ್ಟ ಪೈಲಟ್ ನಮಾಂಶ್ ಅವರ ಕುಟುಂಬಕ್ಕೆ ಇಡೀ ರಾಷ್ಟ್ರದ ಪರವಾಗಿ ಪಾಕಿಸ್ತಾನ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬ್ರೆಜಿಲ್ ಮಾಜಿ ಅಧ್ಯಕ್ಷ ಬೋಲ್ಸೋನಾರೋ ಬಂಧನ
ಸಾವೊ ಪಾಲೊ: ಕ್ಷಿಪ್ರಕ್ರಾಂತಿ ಯತ್ನದ ಆರೋಪದಲ್ಲಿ 27 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸೋನಾರೋರನ್ನು ಶಿಕ್ಷೆ ಆರಂಭಕ್ಕೂ ಮುನ್ನವೇ ಪೊಲೀಸರು ಬಂಧಿಸಿದ್ದಾರೆ. ಬೋಲ್ಸೋನಾರೋ ದೇಶ ಬಿಟ್ಟು ಹೋಗಲು ಸಂಚು ರೂಪಿಸಿದ್ದಾರೆ ಎಂದು ಗೊತ್ತಾಗಿ ಸುಪ್ರೀಂ ಕೋರ್ಟು ಅವರ ಬಂಧನಕ್ಕೆ ಆದೇಶಿಸಿದ ಕಾರಣ ಅವರನ್ನು ಬಂಧಿಸಲಾಗಿದೆ,2019 ರಿಂದ 2022ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬೋಲ್ಸೋನಾರೋ ಕ್ಷಿಪ್ರ ಕ್ರಾಂತಿಗೆ ಕಾರಣವಾದ ಆರೋಪದಲ್ಲಿ 27 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಮುಂದಿನ ವಾರದಿಂದ ಶಿಕ್ಷೆ ಆರಂಭವಾಗಬೇಕಿತ್ತು.
ದಿಲ್ಲಿ ಹವೆ ಮತ್ತಷ್ಟು ವಿಷಮ: ನಿಯಂತ್ರಣಕ್ಕೆ ಕಠಿಣ ಕ್ರಮ
ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಡುತ್ತಿರುವ ಕಾರಣ ಅದರ ನಿಯಂತ್ರಣಕ್ಕೆ ಸರ್ಕಾರವು ಮತ್ತಷ್ಟು ಕಠಿಣ ಕ್ರಮ ಜಾರಿಗೊಳಿಸಿದೆ. ಇದರ ಅಂಗವಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್‌ಎಪಿ)- 3 ಅನ್ನು ಜಾರಿಗೆ ತಂದಿದೆ.ಶನಿವಾರ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತುಂಬಾ ಕಳಪೆ’ ವಿಭಾಗದಲ್ಲಿ 360ರಷ್ಟಿತ್ತು. ಹೀಗಾಗಿ ಡೀಸೆಲ್ ಜನರೇಟರ್ ಬಳಕೆ ತಗ್ಗಿಸಲು ನಿರಂತರ ವಿದ್ಯುತ್ ಪೂರೈಸಬೇಕು. ದಟ್ಟಣೆ ಇರುವ ಸ್ಥಳಗಳಲ್ಲಿ ಸಂಚಾರ ಸುಗಮಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು. ಪತ್ರಿಕೆ, ಟೀವಿ ಮತ್ತು ರೇಡಿಯೋ ಮೂಲಕ ಮಾಲಿನ್ಯ ಎಚ್ಚರಿಕೆ ನೀಡಬೇಕು. ಸಿಎನ್‌ಜಿ ಹಾಗೂ ವಿದ್ಯುತ್ ಚಾಲಿತ ಸಾರ್ವಜನಿಕ ಸಾರಿಗೆ ಸೌಲಭ್ಯ ಹೆಚ್ಚಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಇದಲ್ಲದೆ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ 50% ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು ಎಂದೂ ಅದು ತಾಕೀತು ಮಾಡಿದೆ.
ಸೇವಾ ಮಾರ್ಗದಲ್ಲಿ ಸಾಗಲು ಬಾಬಾ ಸ್ಫೂರ್ತಿ: ಮುರ್ಮು
ಪುಟ್ಟಪರ್ತಿ : ಇಲ್ಲಿ ನಡೆಯುತ್ತಿರುವ ಸತ್ಯ ಸಾಯಿಬಾಬಾ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಭಾಗಿಯಾದರು ಹಾಗೂ ‘ಲಕ್ಷಾಂತರ ಜನರು ಸೇವಾ ಮಾರ್ಗದಲ್ಲಿ ಸಾಗಲು ಬಾಬಾ ಸ್ಫೂರ್ತಿಯಾಗಿದ್ದಾರೆ’ ಎಂದರು ಸ್ಮರಿಸಿದರು.ಸಾಯಿಬಾಬಾ ಸಮಾಧಿ ದರ್ಶನ ಪಡೆದು ಬಳಿಕ ಮಾತನಾಡಿದ ಮುರ್ಮು, ‘ಜನರ ಸೇವೆಯೇ ದೇವರ ಸೇವೆ ಎಂದು ಸಾಯಿಬಾಬಾ ನಂಬಿದ್ದರು. ಅವರು ಆಧ್ಯಾತ್ಮಿಕತೆಯನ್ನು ನಿಸ್ವಾರ್ಥ ಸೇವೆ ಮತ್ತು ವೈಯಕ್ತಿಕ ಪರಿವರ್ತನೆಯ ನಡುವಿನ ಸಂಬಂಧವನ್ನು ಪ್ರತಿಪಾದಿಸುತ್ತಿದ್ದರು. ಈ ಜಗತ್ತೇ ನಮ್ಮ ಪಾಠಶಾಲೆಯಾಗಿದ್ದು, ಸತ್ಯ, ಒಳ್ಳೆಯ ನಡತೆ, ಶಾಂತಿ, ಪ್ರೀತಿ ಮತ್ತು ಅಹಿಂಸೆಯಂತಹ ಮಾನವೀಯ ಮೌಲ್ಯಗಳು ಪಠ್ಯಕ್ರಮ ಎಂಬುದು ಅವರ ನಂಬಿಕೆಯಾಗಿತ್ತು’ ಎಂದರು.
ಜತೆಗೆ, ‘ಸೇವೆಯ ಮಾರ್ಗವನ್ನು ಅನುಸರಿಸುವಲ್ಲಿ ಬಾಬಾ ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡಿದ್ದಾರೆ. ಸಾಯಿಬಾಬಾ ಅವರ ಭಕ್ತರು ಹಲವು ದೇಶಗಳಲ್ಲಿ ಹಿಂದುಳಿದವರ ಸೇವೆ ಮಾಡುತ್ತಿದ್ದಾರೆ. ಇದು ತೃಪ್ತಿಕರ. ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ನೆರವಾಗಿ. ಯಾರನ್ನೂ ನೋಯಿಸಬೇಡಿ ಅವರ ಸಂದೇಶವು ಶಾಶ್ವತ ಮತ್ತು ಸಾರ್ವತ್ರಿಕವಾಗಿದೆ’ ಎಂದು ರಾಷ್ಟ್ರಪತಿ ಹೇಳಿದರು.
ಬೆಳಗ್ಗೆ 11ರ ಸುಮಾರಿಗೆ ಶ್ರೀ ಸತ್ಯಸಾಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಸ್ವಾಗತಿಸಿದರು. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.
)

;Resize=(128,128))
;Resize=(128,128))
;Resize=(128,128))
;Resize=(128,128))