ಕೋಲ್ಕತಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಆರೋಪಿ ಶಜಹಾನ್ ಶೇಖ್‌ನನ್ನು ಕೊನೆಗೂ ಸಿಬಿಐ ತನ್ನ ವಶಕ್ಕೆ ಪಡೆದಿದೆ.
ಶೇಖ್‌ನನ್ನು ಬುಧವಾರವೇ ಸಿಬಿಐ ವಶಕ್ಕೆ ಒಪ್ಪಿಸುವಂತೆ ಕಲ್ಕತಾ ಹೈಕೋರ್ಟ್ ಆದೇಶಿಸಿತ್ತಾದರೂ, ಅದನ್ನು ಬಂಗಾಳ ಪೊಲೀಸರು ತಿರಸ್ಕರಿಸಿದ್ದರು.
ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕಾರಣ ಪ್ರಕರಣ ಮತ್ತು ಶಜಹಾನ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸಲ್ಲ ಎಂದು ಪೊಲೀಸರು ಪಟ್ಟುಹಿಡಿದಿದ್ದರು.
ಆದರೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರವೂ ಬಂಗಾಳದ ಸರ್ಕಾರದ ಮೇಲ್ಮನವಿ ವಿಚಾರಣೆಗೆ ಬರದ ಹಿನ್ನೆಲೆಯಲ್ಲಿ ಸಂಜೆಯೊಳಗೆ ಶೇಖ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಮತ್ತೊಮ್ಮೆ ತಾಕೀತು ಮಾಡಿತ್ತು.
ಅದರ ಬೆನ್ನಲ್ಲೇ ಸೂಕ್ತ ವೈದ್ಯಕೀಯ ತಪಾಸಣೆಗಳನ್ನು ಮಾಡಿ ಪೊಲೀಸರು ಶೇಖ್‌ನನ್ನು ಸಿಬಿಐಗೆ ಹಸ್ತಾಂತರಿಸಿದೆ. ಹೀಗಾಗಿ ಬಂಗಾಳ ಸರ್ಕಾರ ಮತ್ತು ಹೈಕೋರ್ಟ್ ನಡುವಿನ ಸಂಘರ್ಷ ತಪ್ಪಿದೆ.