27 ವರ್ಷಗಳ ನಂತರ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿ ಮತ್ತೆ ಅಚ್ಚರಿ ಆಯ್ಕೆ : ರೇಖಾ ಗುಪ್ತಾ ದಿಲ್ಲಿ ಸಿಎಂ

KannadaprabhaNewsNetwork |  
Published : Feb 20, 2025, 12:50 AM ISTUpdated : Feb 20, 2025, 04:21 AM IST
ರೇಖಾ ಗುಪ್ತಾ | Kannada Prabha

ಸಾರಾಂಶ

27 ವರ್ಷಗಳ ನಂತರ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿ ಮತ್ತೆ ಅಚ್ಚರಿ ಸಿಎಂ ಅನ್ನು ಆಯ್ಕೆ ಮಾಡಿದೆ. ದಿಲ್ಲಿ ವಿಧಾನಸಭೆಗೆ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಬುಧವಾರ ಘೋಷಿಸಿದೆ.

 ನವದೆಹಲಿ : 27 ವರ್ಷಗಳ ನಂತರ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿ ಮತ್ತೆ ಅಚ್ಚರಿ ಸಿಎಂ ಅನ್ನು ಆಯ್ಕೆ ಮಾಡಿದೆ. ದಿಲ್ಲಿ ವಿಧಾನಸಭೆಗೆ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಬುಧವಾರ ಘೋಷಿಸಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ದೆಹಲಿ ವಿಧಾನಸಭೆಯ ಬಿಜೆಪಿ ಶಾಸಕಾಂಗ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಒ.ಪಿ. ಧನಕರ್ ಅವರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 48 ಬಿಜೆಪಿ ಶಾಸಕರು ಭಾಗವಹಿಸಿದ್ದರು.

ಶಾಲಿಮಾರ್ ಬಾಗ್ ಶಾಸಕಿ ಆಗಿರುವ ಗುಪ್ತಾ ಮತ್ತು ಅವರ ಸಂಪುಟ ಸಚಿವರು ಗುರುವಾರ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಕ್ಕೂ ಮುನ್ನ ನಿಯೋಜಿತ ಮುಖ್ಯಮಂತ್ರಿ, ರಾಜ್ ನಿವಾಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿ ಮಾಡಿ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ.

ಘಟಾನುಘಟಿಗಳನ್ನು ಹಿಂದಿಕ್ಕಿದ ರೇಖಾ:

ರೇಖಾ ಅವರಿಗಿಂತ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ರನ್ನು ಸೋಲಿಸಿದ್ದ ಹಿರಿಯ ನಾಯಕ ಪರ್ವೇಶ್‌ ವರ್ಮಾ, ದಿಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ಈ ಹುದ್ದೆಗೆ ಸ್ಪರ್ಧೆಯಲ್ಲಿದ್ದರು. ಪವನ್ ಶರ್ಮಾ, ಆಶಿಶ್ ಸೂದ್ ಮತ್ತು ಶಿಖಾ ರಾಯ್‌ ಸೇರಿದಂತೆ ಇತರ ಪ್ರಮುಖ ಹೆಸರುಗಳು ಸ್ಪರ್ಧೆಯಲ್ಲಿದ್ದವು. ಇವರನ್ನೆಲ್ಲ ಹಿಂದಿಕ್ಕಿ ಮೊದಲ ಬಾರಿ ಶಾಸಕಿ ಆಗಿರುವ ರೇಖಾ ಆಯ್ಕೆ ಅಚ್ಚರಿ ಮೂಡಿಸಿದೆ.

ಫೆ.5ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ ಸ್ಥಾನದಿಂದ ಎಎಪಿ ಅಭ್ಯರ್ಥಿ ಬಂದನಾ ಕುಮಾರಿ ಅವರನ್ನು 29,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಇದು ಅವರ ಮೊದಲ ವಿಧಾನಸಭಾ ಗೆಲುವಾಗಿತ್ತು.

ಎಬಿವಿಪಿಯಿಂದ ದಿಲ್ಲಿ ಸಿಎಂ ಗದ್ದುಗೆವರೆಗೆ...

ನವದೆಹಲಿ: ಇತ್ತೀಚಿನ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿದ್ದ ರೇಖಾ ಗುಪ್ತಾಗೆ ದಿಲ್ಲಿ ಸಿಎಂ ಸ್ಥಾನ ಅಚ್ಚರಿಯ ರೀತಿಯಲ್ಲಿ ಒಲಿದುಬಂದಿದೆ.ಶಾಸಕರಾಗುವ ಮೊದಲು, ಅವರು ದಿಲ್ಲಿ ಮಹಾನಗರ ಪಾಲಿಕೆ ಕೌನ್ಸಿಲರ್ ಆಗಿದ್ದರು. ಎಬಿವಿಪಿ ಪ್ರಧಾನ ಕಾರ್ಯದರ್ಶಿ ಮತ್ತು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ವಿದ್ಯಾರ್ಥಿ ಜೀವನದಲ್ಲಿ ಕೆಲಸ ಮಾಡಿದ್ದರು. ಬಿಜೆಪಿ ಸೇರಿದ ನಂತರ ಹಂತ ಹಂತವಾಗಿ ರಾಜಕೀಯ ಮೆಟ್ಟಿಲು ಏರಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿದ್ದರು ಮತ್ತು ಪಕ್ಷದ ದೆಹಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮದುವೆಯ ನಂತರವೂ ರೇಖಾ ಗುಪ್ತಾ ರಾಜಕೀಯದಿಂದ ದೂರ ಉಳಿಯಲಿಲ್ಲ. 2007ರಲ್ಲಿ, ಅವರು ಉತ್ತರ ಪೀತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು. 2025ರಲ್ಲಿ ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅವರು ಶಾಲಿಮಾರ್ ಬಾಗ್ ನಿಂದ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾದರು.ರೇಖಾ ಗುಪ್ತಾ ಅವರ ಪತಿ ಮನೀಶ್ ಗುಪ್ತಾ ವೃತ್ತಿಯಲ್ಲಿ ವಾಹನ ಬಿಡಿಭಾಗಗಳ ಉದ್ಯಮಿ .

ಎಲ್‌ಎಲ್‌ಬಿ ಪದವೀಧರೆ:ರೇಖಾ 1974 ರಲ್ಲಿ ಜಿಂದ್ ಜಿಲ್ಲೆಯ ಜುಲಾನಾ ಉಪವಿಭಾಗದ ನಂದಗಡ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ದಿಲ್ಲಿ ಎಸ್‌ಬಿಐನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ದಿಲ್ಲಿಗೆ ಸ್ಥಳಾಂತರಗೊಂಡರು. ತಮ್ಮ ಸಂಪೂರ್ಣ ಶಿಕ್ಷಣವನ್ನು ದೆಹಲಿಯಲ್ಲಿ ಮುಗಿಸಿದರು. ಎಲ್‌ಎಲ್‌ಬಿ ಪಾಸಾದರು. ಈ ಸಮಯದಲ್ಲಿ ಅವರು ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಸೇರಿದರು ಮತ್ತು ರಾಜಕೀಯದಲ್ಲಿ ಸಕ್ರಿಯರಾದರು.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ