- ಮದುವೆ ನೆಪದಲ್ಲಿ 7 ತಿಂಗಳಲ್ಲಿ 25 ವರರಿಗೆ ಮಹಿಳೆ ಭಾರಿ ವಂಚನೆ
- ಕೊನೆಗೆ ಪೊಲೀಸನೇ ತಾನು ವರ ಎಂದು ನಂಬಿಸಿ ಆಕೆಯ ಹಿಡಿದ!ಜೈಪುರ: ಮದುವೆ ಹೆಸರಿನಲ್ಲಿ ಕೇವಲ 7 ತಿಂಗಳಲ್ಲಿ 25 ವರರಿಗೆ ವಂಚಿಸಿ ಅವರ ಲಕ್ಷಾಂತರ ರು. ಲಪಟಾಯಿಸಿದ್ದ ಖತರ್ನಾಕ್ ವಧುವನ್ನು ಮಧ್ಯಪ್ರದೇಶದ ಸವಾಯಿ ಮಾಧೋಪುರ ಪೊಲೀಸರು ಬಂಧಿಸಿದ್ದಾರೆ. ‘ಲೂಟಿಕೋರ ವಧು’ ಎಂದೇ ಕುಖ್ಯಾತಿ ಪಡೆದಿರುವ ಅನುರಾಧಾ ಪಾಸ್ವಾನ್ ಬಂಧಿತೆ. 32 ವರ್ಷದ ಈಕೆ ಕಡುಬಡವಳು. ಮದುವೆಯಾಗುವ ಇಚ್ಛೆಯಿದ್ದರೂ ಬಡತನದ ಕಾರಣದಿಂದ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ನಂಬಿಸಿ ಅಮಾಯಕ ಯುವಕರಿಗೆ ಬಲೆ ಬೀಸುತ್ತಿದ್ದಳು. ಈಕೆಯ ಗ್ಯಾಂಗ್‌ನ ಸದಸ್ಯರು ವಿವಾಹಾಕಾಂಕ್ಷಿ ಯುವಕರನ್ನು ಹುಡುಕಿ, ಈಕೆಯ ಫೋಟೊ ತೋರಿಸಿ ಮದುವೆ ಮಾತುಕತೆ ನಡೆಸುತ್ತಿದ್ದರು. ಸಂಬಂಧ ಕುದುರಿಸಲು 2 ಲಕ್ಷ ರು. ಪಡೆಯುತ್ತಿದ್ದರು. ಮದುವೆ ಒಪ್ಪಂದದ ಬಳಿಕ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಮದುವೆಯಾಗುತ್ತಿತ್ತು.ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಎಲ್ಲರೊಟ್ಟಿಗೂ ಅನ್ಯೋನ್ಯವಾಗಿರುವಂತೆ ನಟಿಸುತ್ತಿದ್ದಳು. ಮುಗ್ಧಳಂತೆ ವರ್ತಿಸಿ ಎಲ್ಲರನ್ನೂ ಮರಳು ಮಾಡುತ್ತಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಪತಿಯ ಕುಟುಂಬದವರಿಗೆ ಕೊಡುತ್ತಿದ್ದಳು. ನಂತರ ಮನೆಯಲ್ಲಿ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಳು. ಈ ರೀತಿ ಬರೋಬ್ಬರಿ 25 ವರರಿಗೆ ವಂಚಿಸಿದ್ದಳು. ವಂಚನೆಗೆ ಒಳಗಾದ ವರರು ಪೊಲೀಸರಿಗೆ ದೂರು ನೀಡಿದ್ದು, ‘ನಾನು ಒಮ್ಮೆ ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕ ಊಟ ಮಾಡಿ ಮಲಗಿದೆ. ನಾನು ನಿದ್ದೆ ತುಂಬಾ ಕಮ್ಮಿ ಮಾಡುತ್ತೇನೆ. ಆದರೆ ಅಂದು ನಾನು ಮಗುವಿನಂತೆ ದೀರ್ಘಾವಧಿಗೆ ಮಲಗಿದೆ. ಎದ್ದಾಗ ನನಗೆ ಶಾಕ್ ಆಗಿತ್ತು. ಅನುರಾಧಾ ನನ್ನನ್ನು ವಂಚಿಸಿ ಪರಾರಿ ಆಗಿದ್ದಾಳೆ ಎಂದು ಗೊತ್ತಾಯಿತು. ಆಗ ನಾನು ದೂರು ನೀಡಿದೆ’ ಎಂದಿದ್ದಾರೆ.ಪೊಲೀಸರು ಹೆಣೆದ ವಿಶಿಷ್ಟ ಬಲೆ:
ದೂರಿನ ಬಳಿಕ ಪೊಲೀಸರು ಅವಳದೇ ಶೈಲಿಯಲ್ಲಿ ಬಲೆ ಬೀಸಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ವರನ ರೀತಿಯಲ್ಲಿ ಬಿಂಬಿಸಿ, ಆಕೆಯನ್ನು ಸಂಪರ್ಕಿಸಿದ್ದಾರೆ. ಕೊನೆಗೆ ಆಕೆಯನ್ನು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ.