ಠಾಣೆಯಲ್ಲೇ ಶಿಂಧೆಸೇನೆ ಮುಖಂಡನಿಗೆ ಬಿಜೆಪಿ ಶಾಸಕನ ಗುಂಡು

KannadaprabhaNewsNetwork |  
Published : Feb 04, 2024, 01:32 AM ISTUpdated : Feb 04, 2024, 12:51 PM IST
ಗಣಪತ್‌ ಗಾಯಕ್‌ವಾಡ್‌ | Kannada Prabha

ಸಾರಾಂಶ

ತಮ್ಮ ಮಗನ ಮೇಲೆ ಹಲ್ಲೆ ಮಾಡಿದರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಬಿಜೆಪಿ ಶಾಸಕ ಗಣಪತ್‌ ಗಾಯಕ್‌ವಾಡ್‌ ಅವರು, ಮುಖ್ಯಮಂತ್ರಿ ಏಕ್‌ನಾಥ್‌ ಶಿಂಧೆ ಆಪ್ತ ಹಾಗೂ ಶಿವಸೇನೆಯ ಮುಖಂಡರೊಬ್ಬರಿಗೆ ಪೊಲೀಸ್‌ ಠಾಣೆಯಲ್ಲೇ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಥಾಣೆಯ ಉಲ್ಲಾಸನಗರದಲ್ಲಿ ನಡೆದಿದೆ.

ಮುಂಬೈ: ತಮ್ಮ ಮಗನ ಮೇಲೆ ಹಲ್ಲೆ ಮಾಡಿದರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಬಿಜೆಪಿ ಶಾಸಕ ಗಣಪತ್‌ ಗಾಯಕ್‌ವಾಡ್‌ ಅವರು, ಮುಖ್ಯಮಂತ್ರಿ ಏಕ್‌ನಾಥ್‌ ಶಿಂಧೆ ಆಪ್ತ ಹಾಗೂ ಶಿವಸೇನೆಯ ಮುಖಂಡರೊಬ್ಬರಿಗೆ ಪೊಲೀಸ್‌ ಠಾಣೆಯಲ್ಲೇ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಥಾಣೆಯ ಉಲ್ಲಾಸನಗರದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಶಾಸಕ ಗಣಪತ್‌ರನ್ನು ಬಂಧಿಸಲಾಗಿದೆ. ಗುಂಡೇಟು ತಿಂದ ಮಹೇಶ್‌ ಗಾಯಕವಾಡ್‌ ಸ್ಥಿತಿ ಗಂಭೀರವಾಗಿದೆ.

ಆಡಳಿತಾರೂಢ ಕೂಟದ ನಾಯಕರ ನಡುವೆಯೇ ನಡೆದಿರುವ ಈ ಜಟಾಪಟಿ ಸಹಜವಾಗಿಯೇ ಬಿಜೆಪಿ-ಶಿಂಧೆ ಶಿವಸೇನೆಗೆ ಮುಜುಗರ ತಂದಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಅದಾಗ್ಯೂ ‘ನಾನು ಗುಂಡು ಹಾರಿಸಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಹಾಗೂ ನಾನು ಸರಿಯನ್ನೇ ಮಾಡಿದ್ದೇನೆ’ ಎಂದು ಗಣಪತ್‌ ಹೇಳಿಕೆ ನೀಡಿದ್ದಾರೆ. 

ಏನಿದು ಘಟನೆ?
ಶಾಸಕ ಗಣಪತ್‌ ಹಾಗೂ ಶಿಂಧೆ-ಶಿವಸೇನೆ ಮುಖಂಡ ಮಹೇಶ್‌ ಗಾಯಕ್ವಾಡ್‌ ಮಧ್ಯೆ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಜಗಳವಿತ್ತು. ತಮ್ಮ ಭೂಮಿಯನ್ನು ಮಹೇಶ್‌ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಗಣಪತ್‌ ಅವರ ಪುತ್ರ ಮಹೇಶ್‌ ವಿರುದ್ಧ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದಿದ್ದಾರೆ. 

ಇದೇ ವೇಳೆ ‘ಮಹೇಶ್‌ ಹಾಗೂ ಇತರರು ನನ್ನ ಪುತ್ರನನ್ನು ಥಳಿಸುತ್ತಿದ್ದರು. ಇದನ್ನು ನೋಡಿ ನಾನು ಹೇಗೆ ಸುಮ್ಮನಿರಲಿ. ನನ್ನ ಮಗನಿಗಾಗಿ ನಾನು ಅವರಿಗೆ ಗುಂಡು ಹಾರಿಸಿದೆ’ ಎಂದು ಗಣಪತ್‌ ಹೇಳಿದ್ದಾರೆ. ಠಾಣೆಯಲ್ಲಿ ಅವರು ಬರೋಬ್ಬರಿ 5 ಸುತ್ತು ಗುಂಡು ಹಾರಿಸಿದ್ದಾರೆ.

ಸಿಎಂ ಶಿಂಧೆ ವಿರುದ್ಧ ಗಣಪತ್‌ ಆಕ್ರೋಶ:ಇನ್ನು ಗಾಯಕ್ವಾಡ್‌, ಶಿಂಧೆಯ ಆಪ್ತರಾಗಿರುವ ಕಾರಣಕ್ಕೆ ಘಟನೆ ಬಳಿಕ ಗಣಪತ್‌, ಶಿಂಧೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ‘ಶಿಂಧೆ, ಮಹಾರಾಷ್ಟ್ರದಲ್ಲಿ ಗೂಂಡಾ ರಾಜ್ಯ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. 

ಈಗಾಗಲೇ ಉದ್ಧವ್‌ ಠಾಕ್ರೆಗೆ ದ್ರೋಹ ಮಾಡಿರುವ ಶಿಂಧೆ, ಬಿಜೆಪಿಗೂ ದ್ರೋಹ ಮಾಡುತ್ತಾರೆ. ಅವರು ರಾಜೀನಾಮೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಡಿಸಿಎಂ ಫಡ್ನವೀಸ್‌ ಅವರಿಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.

PREV

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ