ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಮಹಾ ವಿಕಾಸ್ ಅಘಾಡಿ ಕೂಟ, ಫಲಿತಾಂಶ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಅಘಾಡಿ ಕೂಟಕ್ಕೆ ಆಘಾತಕಾರಿ ಮತ್ತು ಮಯಾಯುತಿ ಕೂಟಕ್ಕೆ ನಿರೀಕ್ಷೆ ಮೀರಿ ಬಂದ ಫಲಿತಾಂಶದ ಹಿಂದೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿದ ಆರೋಪ ಮಾಡಿರುವ ವಿಪಕ್ಷಗಳು, ಇದೇ ವಿಷಯ ಮುಂದಿಟ್ಟುಕೊಂಡು ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿವೆ.ಫಲಿತಾಂಶದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿ ಮೈತ್ರಿಕೂಟದ ಪರವಾಗಿ ಇಲ್ಲವೇ ಪರಾಜಿತ ಅಭ್ಯರ್ಥಿಗಳ ಮೂಲಕ ಪ್ರತ್ಯೇಕವಾಗಿ ದೂರು ಸಲ್ಲಿಸುವ ಚಿಂತನೆಯೊಂದು ಅಘಾಡಿ ಕೂಟದಲ್ಲಿ ಮೂಡಿದೆ.ಮಹಾರಾಷ್ಟ್ರಕ್ಕೆ ಕಾಂಗ್ರೆಸ್ ವೀಕ್ಷಕರಾಗಿ ನಿಯೋಜಿತರಾಗಿದ್ದ ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಇವಿಎಂ ತಿರುಚಿರುವ ಆರೋಪ ಮಾಡಿದ್ದ ಜೊತೆಗೆ ಫಲಿತಾಂಶ ಪ್ರಶ್ನಿಸಿ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಭಾನುವಾರ ಹೇಳಿದ್ದರು.
ಅದರ ಮುಂದುವರೆದ ಭಾಗವಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವುತ್ ಕೂಡಾ ಸೋಮವಾರ ಇವಿಎಂ ತಿರುಚಿದ ಆರೋಪ ಮಾಡಿ, ಹೊಸದಾಗಿ ಚುನಾವಣೆ ನಡೆಸಬೇಕೆಂದು ಆಗ್ರಹ ಮಾಡಿದ್ಧಾರೆ. ಆದರೆ ಬಿಜೆಪಿ ನಾಯಕರು ಕಾಂಗ್ರೆಸ್, ಸೇನೆ ನಾಯಕರ ಆರೋಪಗಳನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ.
ಇವಿಎಂ ಬಗ್ಗೆ ನನಗೆ ಸಂದೇಹವಿಲ್ಲ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
ನವದೆಹಲಿ: ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನಾಯಕರು ಇವಿಎಂಗಳ ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ, ಅವರದ್ದೇ ಪಕ್ಷದ ನಾಯಕ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ, ಸಂಸದ ಕಾರ್ತಿ ಚಿದಂಬರಂ, ‘ನನಗೆ ಇವಿಎಂ ಬಗ್ಗೆ ಯಾವುದೇ ಸಂದೇಹವಿಲ್ಲ ’ಎಂದಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು 2004ರಿಂದಲೂ ಇವಿಎಂ ಬಳಸಿ ಚುನಾವಣೆ ಗೆದ್ದಿದ್ದೇನೆ. ನನಗೆ ವೈಯುಕ್ತಿಕವಾಗಿ ಅಂತಹ ಯಾವುದೇ ಕೆಟ್ಟ ಅನುಭವ ಆಗಿಲ್ಲ.
ಇವಿಎಂ ತಿರುಚಲಾಗಿದೆ ಎಂದು ಹೇಳುವುದಕ್ಕೆ ನನ್ನಲ್ಲಿ ಯಾವುದೇ ಸಾಕ್ಷಿಗಳು ಇಲ್ಲ. ಇವಿಎಂ ಬಗ್ಗೆ ನಿಜವಾಗಿಯೂ ಸಂದೇಹವಿದ್ದರೆ ಅವರು ಹೇಳಬೇಕು. ಆದರೆ ನನಗೆ ಯಾವುದೇ ಸಂದೇಹವಿಲ್ಲ. ಇವಿಎಂನಿಂದಲೇ ಚುನಾವಣೆ ಗೆದ್ದಿದ್ದೇವೆ. ಇವಿಎಂನಿಂದಲೇ ಚುನಾವಣೆ ಸೋತಿದ್ದೇವೆ. ಇವಿಎಂ ತಿರುಚಲಾಗಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸದ ಹೊರತು, ನನ್ನ ದೃಷ್ಟಿಕೋನವನ್ನು ನಾನು ಬದಲಾಯಿಸಿಕೊಳ್ಳಲು ಸಿದ್ಧನಿಲ್ಲ’ ಎಂದರು.2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಿಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ಗಳನ್ನು ತಿರುಚಿ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂಬ ಆರೋಪ ಮಾಡುತ್ತಲೇ ಬಂದಿದೆ.
ಮಹಾ ಸರ್ಕಾರ ರಚನೆ ಮುಹೂರ್ತ ವಿಳಂಬ
ಮುಂಬೈ: ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿ ಒಕ್ಕೂಟದ ಸರ್ಕಾರ ರಚನೆ ಇನ್ನೂ ಕೆಲ ದಿನ ವಿಳಂಬವಾಗುವುದು ಬಹುತೇಕ ಖಚಿತವಾಗಿದೆ. ಪ್ರಸಕ್ತ ವಿಧಾನಸಭೆಯ ಅವಧಿ ಜ.26ಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ನೂತನ ಸರ್ಕಾರ ಆಗಲಿದೆ ಎಂಬ ವರದಿಗಳು ಇದ್ದವಾದರೂ, ಅದು ಕಡ್ಡಾಯವೇನಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.ಏಕೆಂದರೆ ಈ ಹಿಂದೆ ಕೂಡಾ ಮಹಾರಾಷ್ಟ್ರದಲ್ಲಿ ಹಿಂದಿನ ವಿಧಾನಸಭೆ ಅವಧಿ ಮುಗಿದ ಹಲವು ದಿನಗಳ ಬಳಿಕವೇ ಹೊಸ ಸರ್ಕಾರ ರಚನೆಯಾದ ಉದಾಹರಣೆ ಇದೆ. ಹೀಗಾಗಿ ಈ ಬಾರಿಯೂ ಅದೇ ಸಂಪ್ರದಾಯ ಮುಂದುವರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ಈಗಾಗಲೇ ಚುನಾವಣಾ ಆಯೋಗ, ವಿಧಾನಸಭೆಗೆ ಆಯ್ಕೆಯಾದ ಎಲ್ಲಾ ಶಾಸಕರ ಹೆಸರನ್ನು ಗೆಜೆಟ್‌ನಲ್ಲಿ ಮುದ್ರಿಸಿ ರಾಜ್ಯಪಾಲರಿಗೆ ಹಸ್ತಾಂತರಿಸಿದೆ. ಜನಪ್ರತಿನಿಧಿಗಳ ಕಾಯ್ದೆಯ 73ನೇ ವಿಧಿಯ ಅನ್ವಯ, ಚುನಾಯಿತ ಸದಸ್ಯರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದಾಕ್ಷಣ, ರಾಜ್ಯಸಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದೇ ಅರ್ಥ. ಹೀಗಾಗಿ ರಾಜ್ಯದಲ್ಲಿ ಯಾವುದೇ ಸಂವಿಧಾನದ ಬಿಕ್ಕಟ್ಟು ಉದ್ಭವಿಸಲ್ಲ ಎಂದು ಮೂಲಗಳು ತಿಳಿಸಿವೆ.ಶಾ ಭೇಟಿ:
ಈ ನಡುವೆ ಮುಂದಿನ ಸಿಎಂ ರೇಸ್‌ನಲ್ಲಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಹಾಲಿ ಸಿಎಂ ಏಕನಾಥ್ ಶಿಂಧೆ ಇಬ್ಬರೂ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಉಭಯ ನಾಯಕರು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆ, ನೂತನ ಸಿಎಂ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಅದಾದ ಬಳಿಕವೇ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ಸ್ಪಷ್ಟ ರೂಪ ಸಿಗಲಿದೆ. ನೂತನ ಸರ್ಕಾರ ರಚನೆ ನ.28-29ರಂದು ಆಗಬಹುದು ಎಂದು ಮೂಲಗಳು ತಿಳಿಸಿವೆ.==
ಇಂದು ಸಿಎಂ ಶಿಂಧೆ ರಾಜೀನಾಮೆ?ಹಾಲಿ ವಿಧಾನಸಭೆಯ ಅವಧಿ ನ.26ರಂದು ಮುಕ್ತಾಯವಾಗುತ್ತಿರು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ವೇಳೆ ನೂತನ ಸರ್ಕಾರ ರಚನೆ ಆಗುವವರೆಗೂ ಹುದ್ದೆಯಲ್ಲಿ ಮುಂದುವರೆಯುವಂತೆ ಶಿಂಧೆಗೆ ರಾಜ್ಯಪಾಲರು ಸೂಚಿಸಲಿದ್ದಾರೆ ಎನ್ನಲಾಗಿದೆ.