ಅಯೋಧ್ಯೆ: ರಾಮ ಮಂದಿರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಂದಿರದ ಟ್ರಸ್ಟ್ ದೇವಳದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಿದೆ.
ದೇಗುಲ ಮೂರು ಅಂತಸ್ತಿನದ್ದಾಗಿದ್ದು, ನೆಲಮಹಡಿಯಲ್ಲಿ ರಾಮನ ಗರ್ಭಗುಡಿಯಿದೆ. 1ನೇ ಮಹಡಿಯಲ್ಲಿ ರಾಮನ ದರ್ಬಾರ್ ಹಾಲ್ ಇದ್ದು, ಪ್ರಸ್ತುತ ಜನರು ಮೆಟ್ಟಿಲು ಹತ್ತಿಕೊಂಡು ದರ್ಬಾರ್ ಹಾಲ್‌ಗೆ ಹೋಗಬೇಕಾಗಿದೆ. ಇದು ಅಂಗವಿಕಲರಿಗೆ ಕಷ್ಟವಾಗಿರುವ ಕಾರಣ ಲಿಫ್ಟ್ ಅಳವಡಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, 2 ಲಿಫ್ಟ್‌ಗಳನ್ನು ವಿಕಲ ಚೇತನರಿಗೆ ಮತ್ತೊಂದು ಲಿಫ್ಟ್ ಅನ್ನು ವಿಐಪಿಗಳು, ಸಾಧು ಸಂತರಿಗಾಗಿ ಅಳವಡಿಸಲಾಗುತ್ತಿದೆ ಎಂದರು.
ರಾಮ್ ಚರಣ್ 256 ಅಡಿ ‘ಗೇಮ್‌ಚೇಂಜರ್’ ಕಟೌಟ್
ವಿಜಯವಾಡ: ಖ್ಯಾತ ನಟ ರಾಮ್ ಚರಣ್ ಅವರ ಬಹುನಿರೀಕ್ಷಿತ ಗೇಮ್ ಚೇಂಜರ್ ಚಲನಚಿತ್ರ ಜ.10ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅವರ 256 ಅಡಿ ಎತ್ತರದ ಬೃಹತ್ ಕಟೌಟ್ ಹಾಕಲಾಗಿದೆ. ಚಿತ್ರನಟನೊಬ್ಬನ ಅಭಿಮಾನದಿಂದ ಹಾಕಲಾಗಿರುವ ಈವರೆಗಿನ ಅತಿದೊಡ್ಡ ಕಟೌಟ್ ಇದು ಎಂದು ಹೇಳಲಾಗುತ್ತಿದೆ.ಆರ್‌ಆರ್‌ಆರ್ ಸಿನಿಮಾದ ಯಶಸ್ಸಿನ ನಂತರ ರಾಮ್ ಚರಣ್ ಅವರ ಬಹುನಿರೀಕ್ಷೆಯ ಚಿತ್ರ ಗೇಮ್ ಚೇಂಜರ್. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿದ್ದಾರೆ. ಜ.10ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಕಟೌಟ್‌ನ ಫೋಟೋಗಳು ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗೇಮ್ ಚೇಂಜರ್‌ನಲ್ಲಿ ರಾಮ್ ಚರಣ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದ ಹಿರೋಯಿನ್.
ವಿಮಾನ ದುರಂತಕ್ಕೆ ರಷ್ಯಾ ಕಾರಣ: ಅಜರ್ಬೈಜಾನ್ ಅಧ್ಯಕ್ಷ ಆರೋಪ
ಬಾಕು: 38 ಮಂದಿಯನ್ನು ಬಲಿ ಪಡೆದಿದ್ದ ಅಜರ್ಬೈಜಾನ್ ವಿಮಾನ ದುರಂತದ ಹಿಂದೆ ರಷ್ಯಾ ಕೈವಾಡ ಇದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆಮ್ ಆರೋಪಿಸಿದ್ದಾರೆ. ‘ರಷ್ಯಾದ ಕ್ಷಿಪಣಿ ದಾಳಿಯಿಂದಲೇ ದುರಂತ ಸಂಭವಿಸಿದೆ. ಇದು ಉದ್ದೇಶಪೂರ್ವಕ ಅಲ್ಲದೇ ಇರಬಹುದು. ಆದರೂ ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.
ಶನಿವಾರವಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ದುರಂತಕ್ಕೆ ಕ್ಷಮೆಯಾಚಿಸಿದ್ದರು. ಈ ಬೆನ್ನಲ್ಲೇ ಅಜರ್ಬೈಜಾನ್ ಅಧ್ಯಕ್ಷ ರಷ್ಯಾ ವಿರುದ್ಧ ಆರೋಪಿಸಿದ್ದಾರೆ..
ಮಲಯಾಳಂ ನಟ ದಿಲೀಪ್ ನಿಗೂಢ ಸಾವು
ತಿರುವನಂತಪುರಂ: ಮಲಯಾಳಂ ಕಿರುತೆರೆಯ ಜನಪ್ರಿಯ ನಟ ದಿಲೀಪ್ ಶಂಕರ್ ಅವರು ಖಾಸಗಿ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದಿಲ್ಲ.ದಿಲೀಪ್ 2 ದಿನ ಹಿಂದೆ ಧಾರವಾಹಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿ ಕಾರಣ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದರು. ಈ ನಡುವೆ ದಿಲೀಪ್ ಅವರ ಸಹ ನಟರು ಫೋನ್ ಮಾಡಿದ್ದರೂ ಕೂಡ ಅವರು ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಪರಿಶೀಲನೆಗೆ ಹೋಟೆಲ್‌ಗೆ ಬಂದಿದ್ದಾರೆ. ಅಷ್ಟರೊಳಗೆ ನಟ ಸಾವನ್ನಪ್ಪಿದ್ದಾರೆ.
2023-24ರಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ದಾಖಲೆ
ನವದೆಹಲಿ: 2023-24ನೇ ಹಣಕಾಸು ವರ್ಷದಲ್ಲಿ ಭಾರತವು ಕಲ್ಲಿದ್ದಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 997.826 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ.
2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.11.71ರಷ್ಟು ಹೆಚ್ಚಿನ ಕಲ್ಲಿದ್ದಲು ಉತ್ಪಾದನೆ ದಾಖಲಿಸಿದಂತಾಗಿದೆ. ಆ ಅವಧಿಯಲ್ಲಿ 893.191 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿತ್ತು ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.2024ನೇ ಕ್ಯಾಲೆಂಡರ್ ವರ್ಷದಲ್ಲಿ (ಡಿ.15ರವರೆಗೆ) 962.11 ದಶಲಕ್ಷ ಟನ್ ಕಲ್ಲಿದ್ದಲು ಪೂರೈಸಿದ್ದರೆ, ಹಿಂದಿನ ವರ್ಷ (2023ರಲ್ಲಿ) 904.61 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾಗಿತ್ತು. ಈ ಮೂಲಕ ಇಲ್ಲೂ ಶೇ.6.47 ರಷ್ಟು ಬೆಳವಣಿಗೆ ದಾಖಲಿಸಲಾಗಿದೆ. ಈ ವರ್ಷ ವಿದ್ಯುತ್ ಕ್ಷೇತ್ರಕ್ಕೆ 792.958 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 755.029 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಗೊಂಡಿತ್ತು. ಈ ಮೂಲಕ ವಿದ್ಯುತ್ ಕ್ಷೇತ್ರಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ಶೇ.5.02ರಷ್ಟು ಹೆಚ್ಚುವರಿ ಬೆಳವಣಿಗೆ ದಾಖಲಿಸಲಾಗಿದೆ.
ಅನಿಯಂತ್ರಿತ ಕ್ಷೇತ್ರಕ್ಕೆ 171.236 ದಶಲಕ್ಷ ಟನ್ ಕಲ್ಲಿದ್ದಲು ಈ ವರ್ಷ ಪೂರೈಕೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 149.573 ದಶಲಕ್ಷ ಟನ್ ಪೂರೈಕೆಯಾಗಿತ್ತು. ಇಲ್ಲೂ ಶೇ.14.48ರಷ್ಚು ಬೆಳವಣಿಗೆ ದಾಖಲಾಗಿದೆ.ಮಿಷನ್ ಕೋಕಿಂಗ್ ಕೋಲ್:
ವಿದೇಶದಿಂದ ಕೋಕಿಂಗ್ ಕೋಲ್ ಆಮದು ಇಳಿಸಲು ಕಲ್ಲಿದ್ದಲು ಸಚಿವಾಲಯ "ಮಿಷನ್ ಕೋಕಿಂಗ್ ಕೋಲ್'''''''' ಎಂಬ ಕಾರ್ಯಕ್ರಮ ರೂಪಿಸಿದೆ. ಸ್ಟೀಲ್ ಕ್ಷೇತ್ರದಿಂದ ಹೆಚ್ಚುತ್ತಿರುವ ಕಲ್ಲಿದ್ದಲು ಬೇಡಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕಾರ್ಯಕ್ರಮದಡಿ ದೇಶಿ ಕಚ್ಚಾ ಕೋಕಿಂಗ್ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು 2024-25ರಲ್ಲಿ 77 ದಶಲಕ್ಷ ಟನ್‌ಗೆ ನಿಗದಿಪಡಿಸಲಾಗಿದೆ. 2029-30ನೇ ಹಣಕಾಸು ವರ್ಷದಲ್ಲಿ ದೇಶೀಯವಾಗಿ 140 ದಶಲಕ್ಷ ಟನ್ ಕಚ್ಚಾ ಕೋಕಿಂಗ್ ಕೋಲ್ ಉತ್ಪಾದನೆ ಗುರಿ ಹೊಂದಲಾಗಿದೆ.2029-30ನೇ ಹಣಕಾಸು ವರ್ಷದಲ್ಲಿ ಕೋಲ್ ಇಂಡಿಯಾದ ಸಹಸಂಸ್ಥೆಗಳಿಂದಲೇ 105 ದಶಲಕ್ಷ ಟನ್ ಕಚ್ಚಾ ಕೋಕಿಂಗ್ ಕಲ್ಲಿದ್ದಲು ಉತ್ಪಾದನೆ ಮಾಡುವ ಗುರಿ ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.