ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ತೆರಳಿದ್ದ ಭಾರತದ ಮೊದಲಿಗೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಇದೇ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಲಿದ್ದು, ಆ ಬಳಿಕ ಲಖನೌನಲ್ಲಿನ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಆ ಬಳಿಕ ಆ.23ರ ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಶುಕ್ಲಾ ಸೇರಿ 4 ಗಗನಯಾತ್ರಿಗಳು ಆ್ಯಕ್ಸಿಯೋಂ-4 ಯೋಜನೆಯಲ್ಲಿ ಜೂ.25ರಂದು ಅಂತರಿಕ್ಷಕ್ಕೆ ಬಾಹ್ಯಾಕಾಶ ನಿಲ್ದಾಣದಲ್ಲಿ 60 ಪ್ರಯೋಗಗಳನ್ನು ನಡೆಸಿದ್ದರು. ಬಳಿಕ ಜು.15ರಂದು ಅಮೆರಿಕದ ಸ್ಯಾನ್ ಡಿಯಾಗೋ ಬಳಿ ಪೆಸಿಫಿಕ್ ಸಾಗರಕ್ಕೆ ಬಂದು ಇಳಿದಿದ್ದರು.
ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದ ಎಸ್‌ಪಿ ಶಾಸಕಿ ಉಚ್ಚಾಟನೆ
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಾಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಶಾಸಕಿಯನ್ನು ಉಚ್ಚಾಟಿಸಿದ್ದಾರೆ.ಶಾಸಕಿ ಪೂಜಾ ಪಾಲ್ ಅವರು ಸದನದಲ್ಲಿ ಯೋಗಿ ಆದಿತ್ಯನಾಥ್ ಅವರು ಅಪರಾಧಿಗಳ ಬಗ್ಗೆ ಹೊಂದಿರುವ ಶೂನ್ಯ ಸಹಿಷ್ಣುತೆ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಪತಿಯನ್ನು ಕೊಂದಿದ್ದ ಪಾತಕಿ ಅತೀಕ್ ಅಹ್ಮದ್‌ನ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದರು. ‘ನನ್ನ ದೂರನ್ನು ಯಾರೂ ಕೇಳಲಿಲ್ಲ, ಆದರೆ ಯೋಗಿ ಆಲಿಸಿ, ನ್ಯಾಯ ದೊರಕಿಸಿದರು’ ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ‘ಪಕ್ಷದ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಪೂಜಾ ಪಾಲ್ ಅವರನ್ನು ಪಕ್ಷದ ಎಲ್ಲಾ ಸ್ಥಾನದಿಂದಲೂ ಉಚ್ಚಾಟಿಸಲಾಗಿದೆ’ ಎಂದು ಅಖಿಲೇಶ್ ಯಾದವ್ ಆದೇಶ ಹೊರಡಿಸಿದ್ದಾರೆ.
₹60 ಕೋಟಿ ವಂಚನೆ: ನಟಿ ಶಿಲ್ಪಾ ಶೆಟ್ಟಿ, ಪತಿ ಕುಂದ್ರಾ ವಿರುದ್ಧ ಕೇಸ್
ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚನೆ ಪ್ರಕರಣ ದಾಖಲಾಗಿದೆ. ತಮ್ಮ ಬೆಸ್ಟ್ ಡೀಲ್ ಟೀವಿ ಪ್ರೈವೇಟ್ ಲಿ.ಗಾಗಿ ಸಾಲ ಮತ್ತು ಹೂಡಿಕೆ ರೂಪದಲ್ಲಿ ದೀಪಕ್ ಕೊಠಾರಿ ಎಂಬುವವರಿಂದ 60.4 ಕೋಟಿ ರು. ಪಡೆದು ವಂಚಿಸಿರುವುದು ಇವರ ಮೇಲಿರುವ ಆರೋಪ.ಕೊಠಾರಿ ನೀಡಿರುವ ದೂರಿನ ಪ್ರಕಾರ, ರಾಜೇಶ್ ಆರ್ಯಾ ಎಂಬುವರ ಮೂಲಕ ಪರಿಚಯವಾದ ಶಿಲ್ಪಾ ಮತ್ತು ಕುಂದ್ರಾ, ಕೊಠಾರಿ ಅವರಿಂದ 75 ಕೋಟಿ ರು. ಸಾಲ ಕೇಳಿದ್ದರು. ಆದರೆ ಶೇ.12ರಷ್ಟು ತೆರಿಗೆಯಿಂದ ತಪ್ಪಿಸಿಕೊಳ್ಳಲು ಅದನ್ನು ಹೂಡಿಕೆಯೆಂದು ತೋರಿಸಿದ್ದರು. ಪ್ರತಿ ತಿಂಗಳು ಸಾಲ ಮರುಪಾವತಿ ಮಾಡುವ ಭರವಸೆಯನ್ನೂ ನೀಡಿದ್ದರು. ಹೀಗಾಗಿ ಕೊಠಾರಿ 2025ರಿಂದ 2023ರ ನಡುವೆ 60.4 ಕೋಟಿ ರು. ನೀಡಿದ್ದರು. ಆದರೆ ಅದನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡಿದ್ದರು ಮತ್ತು ನಂತರ ಹಣ ವಾಪಸು ಮಾಡಲಿಲ್ಲ. ಅಷ್ಟರಲ್ಲಿ ಬೆಸ್ಟ್ ಡೀಲ್ ಕಂಪನಿಯೇ ಮುಚ್ಚಿ ಹೋಗಿ ದಿವಾಳಿ ಪ್ರಕ್ರಿಯೆ ಆರಂಭವಾಗಿತ್ತು ಎಂದು ದೂರಿದ್ದಾರೆ.ಪ್ರಕರಣವನ್ನು ತನಿಖೆಗಾಗಿ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ರಜನಿ ನಟನೆಯ ‘ಕೂಲಿ’ ಭರ್ಜರಿ ಆರಂಭ: ಮೊದಲ ದಿನವೇ ₹23 ಕೋಟಿ ಗಳಿಕೆ
ಚೆನ್ನೈ: ಸೂಪರ್‌ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ಚಿತ್ರವು ಮೊದಲ ದಿನ ಭರ್ಜರಿ ಆರಂಭವಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರವು ಮೊದಲ ದಿನಕ್ಕೆ 23 ಕೋಟಿ ರು.ಗಳನ್ನು ಬಾಚಿದೆ ಎಂದು ಮೂಲಗಳು ತಿಳಿಸಿದೆ.ರಜನೀಕಾಂತ್ ಜೊತೆಗೆ ಕನ್ನಡದ ಉಪೇಂದ್ರ, ಬಾಲಿವುಡ್‌ನ ಅಮಿರ್ ಖಾನ್, ತೆಲುಗಿನ ನಾಗಾರ್ಜುನ ತಾರಾಗಣವಿರುವ ಕೂಲಿ, ಚಿನ್ನದ ಕುರಿತ ಕಥಾ ಹಂದರವನ್ನು ಹೊಂದಿದ್ದು, ಭಾರಿ ಜನಮೆಚ್ಚುಗೆ ಗಳಿಸಿದೆ.
ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಿಸಿ ಚಿತ್ರ ವೀಕ್ಷಿಸಿದರು. ವಿಶೇಷವೆಂದರೆ ಈ ಚಿತ್ರವು ರಜನೀಕಾಂತ್ ಅವರ ಚಿತ್ರರಂಗ ಪಯಣದ 50ನೇ ವರ್ಷಾಚರಣೆಯಂದೇ ಬಿಡುಗಡೆಯಾಗಿದೆ.