150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ : ಸಿದ್ದರಾಮಯ್ಯ

KannadaprabhaNewsNetwork |  
Published : Dec 15, 2024, 02:04 AM ISTUpdated : Dec 15, 2024, 04:26 AM IST
Siddaramaiah

ಸಾರಾಂಶ

ವಕ್ಫ್‌ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರುಪಾಯಿ ಆಮಿಷವೊಡ್ಡಿದ್ದಾರೆಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿ ಮಾಡಿರುವ ಆರೋಪ ಸಂಬಂಧ ಪ್ರಧಾನಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 ಬೆಂಗಳೂರು : ವಕ್ಫ್‌ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರುಪಾಯಿ ಆಮಿಷವೊಡ್ಡಿದ್ದಾರೆಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿ ಮಾಡಿರುವ ಆರೋಪ ಸಂಬಂಧ ಪ್ರಧಾನಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲೇ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿ ವಿಜಯೇಂದ್ರ ಸಂಬಂಧಿಸಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಸ್ಥಿಪಂಜರ ಉರುಳಿ ಬೀಳ್ತಿವೆ:

ಪ್ರಧಾನಿ ನರೇಂದ್ರ ಮೋದಿ ಅವರೇ, ಕೋವಿಡ್ ಸಲಕರಣೆಗಳ ಖರೀದಿ ಭ್ರಷ್ಟಾಚಾರದಿಂದ ಹಿಡಿದು ವಕ್ಫ್‌ ಆಸ್ತಿ ಕಬಳಿಕೆಯಲ್ಲಿನ ಲೂಟಿವರೆಗೆ ರಾಜ್ಯ ಬಿಜೆಪಿಯ ಕಪಾಟಿನಿಂದ ಒಂದೊಂದೇ ಅಸ್ಥಿಪಂಜರಗಳು ಉರುಳಿಬೀಳುತ್ತಲೇ ಇದೆ. ಈ ಹಗರಣಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಸಿದ್ದು ಆರೋಪ ಏನು?:

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಫ್‌ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು. ಮಾತ್ರವಲ್ಲ, ಇದಕ್ಕಾಗಿ 150 ಕೋಟಿ ರು. ಆಮಿಷವನ್ನೂ ಒಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ’ ಎಂದು ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.

ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ, ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ? ವಕ್ಫ್‌ ಆಸ್ತಿ ವಿಚಾರದಲ್ಲಿ ವಿಜಯೇಂದ್ರ ಅವರು ವಹಿಸುತ್ತಿರುವ ಆಸಕ್ತಿ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಫ್‌ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಶಾಮೀಲಾಗಿರುವಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಬಾಯ್ಮುಚ್ಚಿಸುವ ಷಡ್ಯಂತ್ರ:

ವಕ್ಫ್‌ ಹಗರಣದಲ್ಲಿ ವಿಜಯೇಂದ್ರರ ಜೊತೆ ಬಿಜೆಪಿಯ ಮಹಾಮಹಿಮರೆಲ್ಲರೂ ಶಾಮೀಲಾಗಿರುವ ಸಂಶಯವೂ ಇದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ವಕ್ಫ್‌ ಆಸ್ತಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟಿಸ್ ನೀಡಿರುವುದು ಈಗಾಗಲೇ ಬಯಲಾಗಿದೆ. ಮಾಣಿಪ್ಪಾಡಿ ಅವರ ಬಾಯ್ಮುಚ್ಚಿಸುವ ಷಡ್ಯಂತ್ರದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ವಕ್ಫ್‌ ಆಸ್ತಿ ಲೂಟಿಯಲ್ಲಿ ಬೇರೆ ಯಾರೆಲ್ಲ ಪಾಲುದಾರರಿದ್ದಾರೆ? ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಬಿಜೆಪಿಗೆ ಕರ್ನಾಟಕ ಎಟಿಎಂ:

ಒಂದೆಡೆ ಇಂತಹ ಗಂಭೀರ ಆರೋಪ ಹೊತ್ತುಕೊಂಡಿರುವ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ, ಇನ್ನೊಂದೆಡೆ ಪಕ್ಷದ ಹೈಕಮಾಂಡ್‌ಗೆ ಎರಡು ಸಾವಿರ ಕೋಟಿ ರುಪಾಯಿ ಸಂದಾಯ ಮಾಡಿ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ನೋಡಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕರ್ನಾಟಕವನ್ನು ಎಟಿಎಂ ಮಾಡಿತ್ತು ಎಂದು ಆರೋಪಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ