ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಸ್ಟರ್‌ ಮೈಂಡ್‌ ಬಂಧನ

KannadaprabhaNewsNetwork | Updated : Jun 23 2024, 05:00 AM IST

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಮುಖ್ಯ ಆರೋಪಿ, ‘ಸಾಲ್ವರ್‌ ಗ್ಯಾಂಗ್‌’ ಮುಖ್ಯಸ್ಥ ರವಿ ಅತ್ರಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಂಧಿಸಿದೆ.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಮುಖ್ಯ ಆರೋಪಿ, ‘ಸಾಲ್ವರ್‌ ಗ್ಯಾಂಗ್‌’ ಮುಖ್ಯಸ್ಥ ರವಿ ಅತ್ರಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಂಧಿಸಿದೆ.

ಈ ಮುಂಚೆ ಹಲವು ರಾಜ್ಯಗಳ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಬಂಧಿತ ಅತ್ರಿ, ‘ಸಾಲ್ವರ್ ಗ್ಯಾಂಗ್’ ಎಂಬ ಹೆಸರಿನ ನೆಟ್‌ವರ್ಕ್ ಮೂಲಕ ಉತ್ತರ ಬರೆಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆಗಳ ಉತ್ತರವನ್ನು ಅಪ್‌ಲೋಡ್ ಮಾಡುತ್ತಿದ್ದ.

ಪ್ರಕರಣ ಸಂಬಂಧ ಅತ್ರಿಯ ಜೊತೆ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಹಚರರನ್ನು ಬಿಹಾರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಅವರು ನೀಡಿದ ಸುಳಿವಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಗ್ರೇಟರ್ ನೋಯ್ಡಾ ಮೂಲದ ಅತ್ರಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಾಗಲು ಈ ಹಿಂದೆ ರಾಜಸ್ಥಾನದ ಕೋಟಾಗೆ ಹೋಗಿ 2012ರ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ. ನಂತರದ ದಿನಗಳಲ್ಲಿ ಆತ ಮಾಫಿಯಾಗಳ ಸಂಪರ್ಕಕ್ಕೆ ಬಂದಿದ್ದು, ಅನ್ಯ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆಗೆ ಹಾಜರಾಗುತ್ತಿದ್ದ. ಜೊತೆಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದ.

2012ರಲ್ಲಿ ಇಂತಹದೇ ಒಂದು ಪ್ರಕರಣದಲ್ಲಿ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಅತ್ರಿಯನ್ನು ಬಂಧಿಸಿತ್ತು.

ನೀಟ್ ಮಾಸ್ಟರ್‌ಮೈಂಡ್‌ ಸಂಜೀವ್‌ಗೆ ಪೊಲೀಸರ ಬಲೆ

ಪಟನಾ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಸಂಜೀವ್ ಮುಖಿಯಾ ಬಂಧನಕ್ಕೆ ಬಿಹಾರ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.ಸಂಜೀವ್‌ ಪಟನಾದ ಲರ್ನ್ ಪ್ಲೇ ಶಾಲೆಯ ವಸತಿಗೃಹವೊಂದರಲ್ಲಿ ಪರೀಕ್ಷೆಯ ಹಿಂದಿನ ದಿನ 25 ಹುಡುಗರಿಗೆ ಆಶ್ರಯ ನೀಡಿದ್ದ ಸೋರಿಕೆಯಾದ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಒದಗಿಸಿದ್ದ ಎಂದು ತಿಳಿದುಬಂದಿದೆ. ಪ್ರಭಾತ್ ರಂಜನ್ ಎನ್ನುವವರಿಂದ ಸಂಜೀವ್ ಜಾಗ ಪಡೆದಿದ್ದ ಹಾಗೂ ಪ್ರಾಧ್ಯಾಪಕರೊಬ್ಬರು ಪ್ರಶ್ನೆಪತ್ರಿಕೆಗಳನ್ನು ಒದಗಿಸಿದ್ದರು ಎನ್ನಲಾಗಿದೆ.

ಬಿಹಾರದ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ಆರೋಪಿ ಸಂಜೀವ್‌ ಬಂಧನದ ಸಿದ್ಧತೆಗಳನ್ನು ಶುರು ಮಾಡಿದ್ದು, ನಳಂದಾ, ಗಯಾ ಮತ್ತು ನವಾದಾ ಜಿಲ್ಲೆಯ ಪೊಲೀಸರಿಗೆ ನಿಗಾ ವಹಿಸಲು ಸೂಚಿಸಿದ್ದಾರೆ.2010ರಲ್ಲಿ ವರದಿಯಾದ ಬಿಹಾರ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಸಂಜೀವ್ ಹೆಸರು ಕೇಳಿಬಂದಿದ್ದು, ಆತನ ಮಗ ಇದೇ ಆರೋಪದಲ್ಲಿ ಈಗಾಗಲೇ ಜೈಲು ಸೆರಿದ್ದಾನೆ.

Share this article