ಜೈಪುರ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಾವು ಭಾರತದಲ್ಲಿ ಯಾವುದೇ ಮನೆ ಹೊಂದಿಲ್ಲ, ತಮ್ಮ ಬಳಿ ಯಾವುದೇ ವಾಹನ ಕೂಡಾ ಇಲ್ಲ. ಆದರೆ ಇಟಲಿಯಲ್ಲಿ ಪೂರ್ವಜರಿಂದ ಬಂದ ಒಂದು ಮನೆಯಿದೆ.
ತಮ್ಮ ಒಟ್ಟು ಆಸ್ತಿ 12.53 ಕೋಟಿ ರು.ನಷ್ಟಿದೆ ಎಂದು ಘೋಷಿಸಿಕೊಂಡಿದ್ದಾರೆ.ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ, ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಎಲ್ಲಾ ಮಾಹಿತಿ ನೀಡಿದ್ದಾರೆ.
ಏನೇನು ಆಸ್ತಿ?
ಇಟಲಿಯಲ್ಲಿ ನನ್ನ ತಂದೆಯಿಂದ ಬಂದ 27 ಲಕ್ಷ ರೂ. ಮೌಲ್ಯದ ಮನೆ ಇದೆ. ಅದನ್ನು ಹೊರತುಪಡಿಸಿದರೆ ಭಾರತದಲ್ಲಿ ಯಾವುದೇ ಮನೆ, ವಾಹನ ಇಲ್ಲ.
1.07 ಕೋಟಿ ರು. ಮೌಲ್ಯದ 88 ಕೆ.ಜಿ ಬೆಳ್ಳಿ, 49.95 ಲಕ್ಷ ರು. ಮೌಲ್ಯದ 1.267 ಕೆ.ಜಿ. ಚಿನ್ನ, ನವದೆಹಲಿಯ ದೇರಾಮಂಡಿ ಗ್ರಾಮದಲ್ಲಿ 2529.28 ಚದರ ಮೀಟರ್ ವಿಸ್ತೀರ್ಣದ 5.88 ಕೋಟಿ ರು. ಬೆಲೆಬಾಳುವ ಭೂಮಿ ಇದೆ ಎಂದು ಹೇಳಿಕೊಂಡಿದ್ದಾರೆ.
72 ಲಕ್ಷ ರು. ಏರಿಕೆ: 2019ರ ಲೋಕಸಭಾ ಚುನಾವಣೆ ಸಮಯಕ್ಕೆ ಹೋಲಿಸಿದೆ 2024ರಲ್ಲಿ ಸೋನಿಯಾ ಆಸ್ತಿಯಲ್ಲಿ 72 ಲಕ್ಷ ರು. ಏರಿಕೆ ಕಂಡುಬಂದಿದೆ.
ಆಗ ಸೋನಿಯಾ ತಮ್ಮ ಬಳಿ 11.82 ಕೋಟಿ ರು. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇನ್ನು 2014ರಲ್ಲಿ ಸೋನಿಯಾ 9.29 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು.