ದಾಳಿಯ ಮಾಹಿತಿ ಕೊಟ್ಟ ಸೋಫಿಯಾ ಬೆಳಗಾವಿ ಸೊಸೆ!

Published : May 09, 2025, 04:10 AM IST
Who is Colonel Sofia Qureshi

ಸಾರಾಂಶ

ಮೂವರು ಕನ್ನಡಿಗರು ಸೇರಿ 26 ಜನರನ್ನು ಬಲಿ ಪಡೆದ ಪಹಲ್ಗಾಂ ನರಮೇಧಕ್ಕೆ ಪತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಮರುದಿನವೇ ಕನ್ನಡಿಗರು ಭರ್ಜರಿ ಹಮ್ಮೆ ಪಡುವಂತಹ ಸಂಗತಿಯೊಂದು ಹೊರಬಿದ್ದಿದೆ.

  ಬೆಳಗಾವಿ : ಮೂವರು ಕನ್ನಡಿಗರು ಸೇರಿ 26 ಜನರನ್ನು ಬಲಿ ಪಡೆದ ಪಹಲ್ಗಾಂ ನರಮೇಧಕ್ಕೆ ಪತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಮರುದಿನವೇ ಕನ್ನಡಿಗರು ಭರ್ಜರಿ ಹಮ್ಮೆ ಪಡುವಂತಹ ಸಂಗತಿಯೊಂದು ಹೊರಬಿದ್ದಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಎಳೆ ಎಳೆಯಾಗಿ ಮಾಹಿತಿ ನೀಡಿ ಗಮನ ಸೆಳೆದಿದ್ದ ಕರ್ನಲ್ ಸೋಫಿಯಾ ಖುರೇಷಿ ಕುಂದಾ ನಗರಿ ಬೆಳಗಾವಿ ಜಿಲ್ಲೆಯ ಸೊಸೆ.

ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಕರ್ನಲ್‌ ತಾಜುದ್ದೀನ್‌ ಬಾಗೇವಾಡಿ ಅವರ ಪತ್ನಿ ಸೋಫಿಯಾ ಖುರೇಶಿ, ಕಳೆದ ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ಭಾರತೀಯ ಸೈನಿಕರು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿದ್ದನ್ನು ಮಾಧ್ಯಮದೆದುರು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದರು.

ಸೋಫಿಯಾ ಮೂಲತಃ ಗುಜರಾತ್‌ನ ಬರೋಡಾದವರು. ಸದ್ಯ ಸೋಫಿಯಾ ಜಮ್ಮುವಿನಲ್ಲಿ ಕರ್ನಲ್‌ ಆಗಿದ್ದರೆ, ಪತಿ ತಾಜುದ್ದೀನ್‌ ಬಾಗೇವಾಡಿ ಝಾನ್ಸಿನಲ್ಲಿ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಕರ್ನಲ್‌ ತಾಜುದ್ದೀನ್‌ ಬಾಗೇವಾಡಿ ಮತ್ತು ಸೋಫಿಯಾ ಖುರೇಷಿ ಪರಸ್ಪರ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದರು. ಸೋಫಿಯಾ ಅವರು ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊತ್ತಿದ್ದಾರೆ.

ಸೇನಾ ಹಿನ್ನೆಲೆ:

ಸೋಫಿಯಾ ಸೇನೆಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಸೋಫಿಯಾ ಅವರ ತಾತ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಮುತ್ತಜ್ಜಿ ರಾಣಿ ಲಕ್ಷ್ಮೀಭಾಯಿ ಅವರ ಜೊತೆಗಿದ್ದರಂತೆ.ಶೈಕ್ಷಣಿಕ ಹಿನ್ನೆಲೆ:

ಜೈವಿಕ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಖುರೇಷಿ, 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮೂಲಕ ನಿಯೋಜಿತಗೊಂಡು, ಭಾರತೀಯ ಸೇನೆಯ ಪ್ರಮುಖ ಶಾಖೆಯಾದ ಕೋರ್ ಆಫ್ ಸಿಗ್ನಲ್ಸ್‌ಗೆ ಸೇರಿದರು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಮನೆಯಲ್ಲಿ ಸಂಭ್ರಮ:

ಸೋಫಿಯಾ ಕೊಣ್ಣೂರಿನವರು ಎಂದು ಗೊತ್ತಾಗುತ್ತಿದ್ದಂತೆಯೇ ಪಟ್ಟಣದ ಜನರು ಸೇರಿ ಅಕ್ಕಪಕ್ಕದ ಊರಿನ ಜನರು ಅವರ ಮನೆಗೆ ಭೇಟಿ ನೀಡಿದ್ದಾರೆ. ಸೋಫಿಯಾ ಅವರ ಮಾವ ಗೌಸ್‌ ಬಾಗೇವಾಡಿ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು. ಭಾರತದ ಪರ ಘೋಷಣೆ ಕೂಗಿದರು. ಸೋಫಿಯಾ ನಮ್ಮೂರಿನ ಸೊಸೆ ಎನ್ನುವುದು ನಮಗೆ ಹೆಮ್ಮೆ ಮೂಡಿಸಿದೆ ಎಂದು ಗ್ರಾಮಸ್ಥರು ಸಂಭ್ರಮಿಸಿದರು.

ಕರ್ನಲ್‌ ಸೋಫಿಯಾ

ಸೋಫಿಯಾ ಖುರೇಷಿ ಹುಟ್ಟೂರು ಗುಜರಾತ್‌ನ ಬರೋಡಾ. ಹಾಲಿ ಜಮ್ಮುವಿನಲ್ಲಿ ಸೇವೆ

ತಂದೆ, ಅಜ್ಜ ನಿವೃತ್ತ ಯೋಧರು. ಮುತ್ತಜ್ಜಿ ಝಾನ್ಸಿ ರಾಣಿ ಲಕ್ಷ್ಮೀಭಾಯಿ ಜತೆಗಿದ್ದವರು

2006ರಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಭಾಗವಾಗಿ ಕಾಂಗೋದಲ್ಲಿ ಸೇವೆ

2015ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸೋಫಿಯಾ- ತಾಜುದ್ದೀನ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ