27 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿದ ದಕ್ಷಿಣ ಆಫ್ರಿಕಾ

Published : Jun 15, 2025, 07:08 AM IST
south africa team wtc final

ಸಾರಾಂಶ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕಿರೀಟ ಗೆದ್ದ ದಕ್ಷಿಣ ಆಫ್ರಿಕಾ । ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ ಜಯಭೇರಿ282 ರನ್‌ ಕಠಿಣ ಗುರಿ ಪಡೆದಿದ್ದ ತಂಡವನ್ನು ಗೆಲ್ಲಿಸಿದ ಮಾರ್ಕ್‌ರಮ್‌ । ಸತತ 2ನೇ ಟೆಸ್ಟ್‌ ಕಪ್‌ ಗೆಲ್ಲುವ ಆಸೀಸ್‌ ಕನಸು ಭಗ್ನ

ಲಂಡನ್‌: ದಕ್ಷಿಣ ಆಫ್ರಿಕಾ ತಂಡ ಕೊನೆಗೂ ತನ್ನ ಚೋಕರ್ಸ್‌ ಹಣೆಪಟ್ಟಿ ಕಳಚಿಕೊಂಡಿದೆ. ಐಸಿಸಿ ಟೂರ್ನಿಗಳ ಫೈನಲ್‌, ಸೆಮಿಫೈನಲ್‌ಗಳಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಳ್ಳುತ್ತಿದ್ದ ಹರಿಣ ಪಡೆ ಈ ಬಾರಿ ಮೈಕೊಡವಿ ಎದ್ದು ನಿಂತಿದ್ದು, 2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.

ಶನಿವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕೊನೆಗೊಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ ಗೆಲುವು ಸಾಧಿಸಿತು. 282 ರನ್‌ಗಳ ದೊಡ್ಡ ಗುರಿ ಪಡೆದಿದ್ದ ತಂಡ, ಅಭೂತಪೂರ್ವ ಹೋರಾಟ ಪ್ರದರ್ಶಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಟ್ರೋಫಿ ಮುಡಿಗೇರಿಸಿಕೊಂಡಿತು. ಏಡನ್‌ ಮಾರ್ಕ್‌ರಮ್‌ರ ಸಾಹಸಿಕ ಶತಕದ ನೆರವಿನಿಂದ ತಂಡ 83.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಅಧಿಕಾರಯುತ ಗೆಲುವು: ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್‌ ಕಲೆಹಾಕಿದ್ದ ಆಸ್ಟ್ರೇಲಿಯಾ ತಂಡ ಬಳಿಕ ದ.ಆಫ್ರಿಕಾವನ್ನು 138 ರನ್‌ಗೆ ನಿಯಂತ್ರಿಸಿ 74 ರನ್‌ಗಳ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 73 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಆಸೀಸ್, ಬಾಲಂಗೋಚಿಗಳ ಹೋರಾಟದಿಂದಾಗಿ 207 ರನ್‌ ಕಲೆಹಾಕಿತ್ತು. ಈ ಮೂಲಕ ದ.ಆಫ್ರಿಕಾ ಗೆಲುವಿಗೆ ಕಠಿಣ ಗುರಿ ನೀಡಿತ್ತು.

ಆದರೆ 3ನೇ ದಿನ ದಿಟ್ಟ ಹೋರಾಟ ಪ್ರದರ್ಶಿಸಿದ ದ.ಆಫ್ರಿಕಾ, 2 ವಿಕೆಟ್‌ಗೆ 213 ರನ್‌ ಗಳಿಸಿತ್ತು. ಕೊನೆ 2 ದಿನಗಳಲ್ಲಿ ತಂಡಕ್ಕೆ 69 ರನ್‌ ಅಗತ್ಯವಿತ್ತು. ಮಾರ್ಕ್‌ರಮ್‌ ಹಾಗೂ ನಾಯಕ ತೆಂಬಾ ಬವುಮಾ ಕ್ರೀಸ್‌ ಕಾಯ್ದುಕೊಂಡಿದ್ದರು. ಪಂದ್ಯದ 4ನೇ ದಿನವಾದ ಶನಿವಾರ ಆರಂಭದಲ್ಲೇ ಬವುಮಾ ವಿಕೆಟ್‌ ಉರುಳಿತು. ಅವರು 66 ರನ್‌ ಗಳಿಸಿದ್ದಾಗ ಕಮಿನ್ಸ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಕೇರಿಗೆ ಕ್ಯಾಚ್‌ ನೀಡಿದರು. ಬಳಿಕ ಬಂದ ಟ್ರಿಸ್ಟನ್‌ ಸ್ಟಬ್ಸ್‌ 8 ರನ್‌ಗೆ ಔಟಾದರು. ಆದರೆ ಮಾರ್ಕ್‌ರಮ್‌ ಹೋರಾಟ ಬಿಡಲಿಲ್ಲ. ವಿಕೆಟ್‌ ಉರುಳುತ್ತಿದ್ದರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಅವರು, ಆಸೀಸ್‌ ಬೌಲರ್‌ಗಳ ಬೆಂಡೆತ್ತಿದರು. ಅವಿಸ್ಮರಣೀಯ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ ಅವರು, ಗೆಲುವಿಗೆ 6 ರನ್‌ ಬೇಕಿದ್ದಾಗ ಔಟಾದರು. 207 ಎಸೆತಗಳಲ್ಲಿ 136 ರನ್‌ ಸಿಡಿಸಿ ಮಾರ್ಕ್‌ರಮ್‌ ನಿರ್ಗಮಿಸಿದಾಗ, ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸಲ್ಲಿಸಿತು. ಕೈಲ್‌ ವೆರೈನ್‌ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದರು. ಬೆಡಿಂಗ್‌ಹ್ಯಾಮ್‌ ಔಟಾಗದೆ 21 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 212/10 ಮತ್ತು 2ನೇ ಇನ್ನಿಂಗ್ಸ್‌ 207/10, ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ 138/10 ಮತ್ತು 2ನೇ ಇನ್ನಿಂಗ್ಸ್‌ 282/5 (ಮಾರ್ಕ್‌ರಮ್‌ 136, ಬವುಮಾ 66, ಬೆಡಿಂಗ್‌ಹ್ಯಾಮ್‌ 21, ಸ್ಟಾರ್ಕ್‌ 3-66)

ಪಂದ್ಯಶ್ರೇಷ್ಠ: ಏಡನ್‌ ಮಾರ್ಕ್‌ರಮ್‌.

ಕೊನೆಗೂ ಚೋಕರ್ಸ್‌ ಹಣೆಪಟ್ಟಿ

ಕಳಚಿ ಟ್ರೋಫಿ ಗೆದ್ದ ದ.ಆಫ್ರಿಕಾ!

ದ.ಆಫ್ರಿಕಾ ತಂಡವನ್ನು ಕ್ರಿಕೆಟ್‌ನಲ್ಲಿ ಚೋಕರ್ಸ್‌ ಎಂದೇ ಕರೆಯಲಾಗುತ್ತದೆ. ಇದಕ್ಕೆ ಕಾರಣ ತಂಡ ಐಸಿಸಿ ಟೂರ್ನಿಗಳ ಮಹತ್ವದ ಪಂದ್ಯಗಳಲ್ಲಿ, ಗೆಲುವಿನ ಸನಿಹದಲ್ಲಿದ್ದರೂ ಸೋತು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಅದೃಷ್ಟ ತಂಡದ ಪರ ಇತ್ತು. ಪಟ್ಟು ಬಿಡದ ಹೋರಾಟದಿಂದಾಗಿ ಸೋಲಿನ ಸನಿಹದಿಂದ ಮೇಲೆದ್ದು ಟ್ರೋಫಿ ಗೆದ್ದಿದೆ. ಇದಕ್ಕೂ ಮುನ್ನ ತಂಡ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌, ಟಿ20 ವಿಶ್ವಕಪ್‌ನಲ್ಲಿ 1 ಫೈನಲ್‌, 2 ಬಾರಿ ಸೆಮಿಫೈನಲ್‌, ಚಾಂಪಿಯನ್ಸ್‌ ಟ್ರೋಫಿಯಲ್ಲಿ 5 ಬಾರಿ ಸೆಮಿಫೈನಲ್‌ನಲ್ಲಿ ಸೋತಿತ್ತು. ಈ ಪೈಕಿ, 2024ರಲ್ಲಿ ಭಾರತ ವಿರುದ್ಧ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸುಲಭದಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿ ಸೋತಿತ್ತು.

ದ.ಆಫ್ರಿಕಾ ಮಡಿಲಿಗೆ

2ನೇ ಐಸಿಸಿ ಟ್ರೋಫಿ

ದ.ಆಫ್ರಿಕಾ ತಂಡ ಕಳೆದ 27 ವರ್ಷಗಳಿಂದ ಎದುರಿಸುತ್ತಿದ್ದ ಐಸಿಸಿ ಟ್ರೋಫಿ ಬರ ನೀಗಿಸಿದೆ. 1998ರಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ತಂಡ, ಆ ಬಳಿಕ ಮತ್ತೊಂದು ಟ್ರೋಫಿ ಗೆಲ್ಲಲು ಬರೋಬ್ಬರಿ 27 ವರ್ಷ ಕಾಯಬೇಕಾಯಿತು. ಆದರೆ ತಂಡ ಈ ವರೆಗೂ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌ ಗೆದ್ದಿಲ್ಲ.

₹31 ಕೋಟಿ

ಚಾಂಪಿಯನ್‌ ದ.ಆಫ್ರಿಕಾ ತಂಡ ₹31 ಕೋಟಿ ನಗದು ಬಹುಮಾನ ಪಡೆಯಿತು.

₹18 ಕೋಟಿ

ರನ್ನರ್‌-ಅಪ್‌ ಆಸ್ಟ್ರೇಲಿಯಾಕ್ಕೆ ₹18 ಕೋಟಿ ನಗದು ಬಹುಮಾನ ಲಭಿಸಿತು.

15 ವರ್ಷಗಳ ಬಳಿಕ ಐಸಿಸಿ

ಫೈನಲ್‌ ಸೋತ ಆಸ್ಟ್ರೇಲಿಯಾ

ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದೇ ಇತರ ತಂಡಗಳಿಗೆ ದೊಡ್ಡ ಸವಾಲು. ಆಸೀಸ್‌ ಕಳೆದ 15 ವರ್ಷಗಳಲ್ಲೇ ಮೊದಲ ಬಾರಿ ಐಸಿಸಿ ಫೈನಲ್‌ ಸೋತಿತು. 2010ರಲ್ಲಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೋತಿದ್ದ ತಂಡ, ಬಳಿಕ 4 ಐಸಿಸಿ ಟೂರ್ನಿಯ ಫೈನಲ್‌ನಲ್ಲೂ ಗೆದ್ದಿತ್ತು. 2015, 2023ರ ಏಕದಿನ ವಿಶ್ವಕಪ್‌, 2021ರ ಟಿ20 ವಿಶ್ವಕಪ್‌, 2021-23ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಕಿರೀಟ ಜಯಿಸಿತ್ತು.

14 ಐಸಿಸಿ ಫೈನಲ್‌ಗಳಲ್ಲಿ

ಆಸೀಸ್‌ ಸೋತಿದ್ದು 4ರಲ್ಲಿ!

ಆಸ್ಟ್ರೇಲಿಯಾ ತಂಡ ತಾನಾಡಿದ 14 ಐಸಿಸಿ ಟೂರ್ನಿಗಳ ಫೈನಲ್‌ಗಳ ಪೈಕಿ ಕೇವಲ 4ರಲ್ಲಿ ಮಾತ್ರ ಸೋತಿದೆ. ಈ ಹಿಂದಿನ 13 ಫೈನಲ್‌ಗಳಲ್ಲಿ 10 ಬಾರಿ ಟ್ರೋಫಿ ಗೆದ್ದಿತ್ತು. 6 ಬಾರಿ ಏಕದಿನ ವಿಶ್ವಕಪ್, 1 ಟಿ20 ವಿಶ್ವಕಪ್, 2 ಬಾರಿ ಚಾಂಪಿಯನ್ಸ್ ಟ್ರೋಫಿ ಹಾಗೂ 1 ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತ್ತು. 1975, 1996ರ ಏಕದಿನ ವಿಶ್ವಕಪ್‌ ಫೈನಲ್‌, 2010ರ ಟಿ20 ವಿಶ್ವಕಪ್‌ ಫೈನಲ್‌ ಹಾಗೂ ಈ ಬಾರಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಳಲ್ಲಿ ತಂಡ ಸೋತಿದೆ.

ಕೊನೆಗೂ ಫೈನಲ್‌ ಪಂದ್ಯ

ಸೋತ ಹೇಜಲ್‌ವುಡ್‌!

ಆಸ್ಟ್ರೇಲಿಯಾ ವೇಗದ ಬೌಲರ್‌ ಜೋಶ್‌ ಹೇಜಲ್‌ವುಡ್‌ ತಮ್ಮ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಒಮ್ಮೆಯೂ ಫೈನಲ್‌ನಲ್ಲಿ ಸೋತಿರಲಿಲ್ಲ. ಈ ಬಾರಿ ಮೊದಲ ಸೋಲು ಎದುರಾಗಿದೆ. ಇದಕ್ಕೂ ಮುನ್ನ 9 ಟೂರ್ನಿಗಳ ಫೈನಲ್‌ನಲ್ಲಿ ಗೆದ್ದಿದ್ದರು. ಅಂಡರ್‌-19 ವಿಶ್ವಕಪ್‌, ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌, 2 ಬಾರಿ ಐಪಿಎಲ್‌, ಆಸ್ಟ್ರೇಲಿಯಾದ ಶೆಫೀಲ್ಡ್‌ ಶೀಲ್ಡ್‌, ಬಿಗ್‌ಬ್ಯಾಶ್‌ ಲೀಗ್‌ನ ಫೈನಲ್‌ಗಳಲ್ಲಿ ಹೇಜಲ್‌ವುಡ್‌ ಆಡಿದಾಗ ಅವರ ತಂಡ ಸೋತಿರಲಿಲ್ಲ.

ನಾಯಕನಾಗಿ ಟೆಸ್ಟ್‌ನಲ್ಲಿ

ಸೋತೇ ಇಲ್ಲ ಬವುಮಾ!

2023ರಲ್ಲಿ ಡೀನ್‌ ಎಲ್ಗರ್‌ರಿಂದ ತೆರವಾದ ಟೆಸ್ಟ್‌ ತಂಡದ ನಾಯಕನ ಸ್ಥಾನಕ್ಕೆ ತೆಂಬಾ ಬವುಮಾ ಆಯ್ಕೆಯಾಗಿದ್ದರು. ಆ ಬಳಿಕ ಬವುಮಾ ನಾಯಕತ್ವದಲ್ಲಿ ದ.ಆಫ್ರಿಕಾ ಆಡಿದ ಒಂದೂ ಟೆಸ್ಟ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ. ಬವುಮಾ ನಾಯಕತ್ವದಲ್ಲಿ ದ.ಆಫ್ರಿಕಾ 10 ಟೆಸ್ಟ್‌ ಆಡಿದೆ. 9ರಲ್ಲಿ ಗೆದ್ದಿದ್ದರೆ, 1 ಪಂದ್ಯ ಡ್ರಾಗೊಂಡಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವಿಜೇತರು

ವರ್ಷ ಚಾಂಪಿಯನ್‌ ರನ್ನರ್‌-ಅಪ್‌ ಫಲಿತಾಂಶ

2019-21 ನ್ಯೂಜಿಲೆಂಡ್‌ ಭಾರತ 8 ವಿಕೆಟ್‌ ಗೆಲುವು

2021-23 ಆಸ್ಟ್ರೇಲಿಯಾ ಭಾರತ 209 ರನ್‌ ಜಯ

2023-25 ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ 5 ವಿಕೆಟ್‌ ಗೆಲುವು

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ