ನವದೆಹಲಿ: ದೆಹಲಿ ರೈಲ್ವೆ ನಿಲ್ದಾಣದಲ್ಲಿ 18 ಮಂದಿಯನ್ನು ಬಲಿಪಡೆದ ಹೃದಯ ವಿದ್ರಾವಕ ಕಾಲ್ತುಳಿತ ಘಟನೆಗೆ ಕಾರಣವಾಗಿದ್ದು ಕೇವಲ ಸಣ್ಣದೊಂದು ಗೊಂದಲ. ಜೊತೆಗೆ ಕುಂಭಮೇಳದ ಕಡೆಗೆ ಹೊರಟವರಿಗೆ ಯಮಲೋಕದ ದಾರಿಯಾಗಿದ್ದು ರೈಲ್ವೆ ನಿಲ್ದಾಣದ 42 ಮೆಟ್ಟಿಲುಗಳು.ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಮತ್ತು ಪ್ರಯಾಗ್‌ರಾಜ್ ಸ್ಪೆಷಲ್ ಟ್ರೇನ್‌ಗಳ ಕುರಿತು ಉಂಟಾದ ಗೊಂದಲದಿಂದಾಗಿ ಫ್ಲ್ಯಾಟ್‌ಫಾರ್ಮ್ 14ರಲ್ಲಿ ನಿಂತಿದ್ದ ಸಾವಿರಾರು ಜನರು ಏಕಾಏಕಿ ಫ್ಲ್ಯಾಟ್‌ಫಾರ್ಮ್ 12ರತ್ತ ಧಾವಿಸಿದರು.
ಹೀಗೆ ಅವರೆಲ್ಲಾ ಪಕ್ಕದ ಫ್ಲ್ಯಾಟ್‌ಫಾರ್ಮ್‌ಗೆ ತೆರಳಲು 42 ಮೆಟ್ಟಿಲು ಏರಿ ಮತ್ತೆ 42 ಮೆಟ್ಟಿಲು ಇಳಿಯಬೇಕಿತ್ತು. ಈ ವೇಳೆ ಕಿರಿದಾದ ಮೆಟ್ಟಿಲುಗಳಲ್ಲಿ ಭಾರೀ ಜನಸಂದಣಿ ಸೃಷ್ಟಿಯಾಯಿತು. ಮೇಲೂ ಹೋಗಲಾಗದೆ, ಕೆಳಗೂ ಇಳಿಯಲಾಗದೆ ಅನೇಕರು ಮೆಟ್ಟಿಲುಗಳಲ್ಲೇ ಸಿಕ್ಕಿಹಾಕಿಕೊಂಡರು. ಭಾರೀ ನೂಕಾಟ-ತಳ್ಳಾಟದಿಂದ ಅನೇಕರು ನಿಯಂತ್ರಣ ಕಳೆದುಕೊಂಡು ಕುಸಿದುಬೀಳಲಾರಂಭಿಸಿದರು.
ಅಯ್ಯೋ ನಿಲ್ಲಪ್ಪಾ, ನಿಲ್ಲಪ್ಪಾ.. ಜನ ಇಲ್ಲಿ ಸಾಯ್ತಿದ್ದಾರೆ ಎಂದು ಕಾಲ್ತುಳಿತದಿಂದ ಸ್ವಲ್ಪದರಲ್ಲೇ ಬಚಾವಾದ ವ್ಯಕ್ತಿಯೊಬ್ಬ ಕೂಗುತ್ತಲೇ ಇದ್ದ. ಆದರೆ ಆ ಕೂಗು ಯಾರಿಗೂ ಕೇಳಲೇ ಇಲ್ಲ. ಬಿದ್ದವರನ್ನೂ ತುಳಿದುಕೊಂಡೇ ಮುನ್ನುಗ್ಗಲು ಯತ್ನಿಸುತ್ತಿದ್ದರು. ಹೀಗೆ ಬಿದ್ದವರಲ್ಲಿ ಮಹಿಳೆಯರು ಮತ್ತು ಹಿರಿಯರೇ ಜಾಸ್ತಿ ಸಂಖ್ಯೆಯಲ್ಲಿದ್ದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಹೀಗೆ ಮೆಟ್ಟಿಲು ಏರಿಕೊಂಡು ಇನ್ನೊಂದು ಕಡೆ ಇಳಿಯುವ ವೇಳೆ ಮೊದಲಿಗೆ ಕೆಲವರು ಉರುಳಿಬಿದ್ದಿದ್ದಾರೆ. ಅವರ ಮೇಲೆ ಇನ್ನಷ್ಟು ಜನರು ಉರುಳಿಬಿದ್ದ ಕಾರಣ ಭಾರೀ ಗದ್ದಲ, ಕಿರುಚಾಟ ಆರಂಭವಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿ ಕಾಲ್ತುಳಿತಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಾಲ್ತುಳಿತ ಸಂಭವಿಸಿದ ಮೆಟ್ಟಿಲುಗಳು ಬಳಿ ಎಲ್ಲೆಡೆ ಚಪ್ಪಲಿ, ಶೂ, ಬಟ್ಟೆ, ಜನರಿಗೆ ಸೇರಿದ ಪೂಜಾ ಸಾಮಗ್ರಿಗಳು ಕಂಡುಬಂದಿದೆ.
ಕಾಲ್ತುಳಿತಕ್ಕೆ ಹಲವು ಕಾರಣಗಳು?
ನವದೆಹಲಿ: ಶನಿವಾರ ಇಲ್ಲಿ 18 ಜನರನ್ನು ಬಲಿಪಡೆದ ಕಾಲ್ತುಳಿತ ಘಟನೆಗೆ ನಾನಾ ಕಾರಣಗಳನ್ನು ನೀಡಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳು, ರೈಲ್ವೆ ಸಿಬ್ಬಂದಿ, ಸ್ಥಳೀಯ ವರ್ತಕರು, ಕೂಲಿಗಳು ಹಲವರು ಹಲವು ಕಾರಣಗಳನ್ನು ನೀಡಿದ್ದಾರೆ.
- ಪ್ರಯಾಗ್‌ರಾಜ್‌ಗೆ ರಾತ್ರಿ 4 ರೈಲುಗಳ ಪ್ರಯಾಣವಿತ್ತು. ಈ ವೇಳೆ ಪ್ರತಿ ಗಂಟೆಗೆ ಒಂದೂವರೆ ಸಾವಿರದಂತೆ ಸಾಮಾನ್ಯ ಟಿಕೆಟ್‌ಗಳನ್ನು ನಿಲ್ದಾಣದಲ್ಲಿ ವಿತರಿಸಲಾಗಿತ್ತು. ಆದರೆ ರೈಲಿನಲ್ಲಿ ಸಾಮಾನ್ಯ ಬೋಗಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಸೀಟು ಸೀಗದೆ ನಿಲ್ದಾಣದಲ್ಲಿ ಮತ್ತು ರೈಲಿನೊಳಗೆ ನೂಕುನುಗ್ಗಲಾಗಿದೆ.
- ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್, ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್, ಪ್ರಯಾಗ್‌ರಾಜ್ ಸ್ಪೆಷಲ್ ಟ್ರೇನ್‌ಗಳು ಶನಿವಾರ ರಾತ್ರಿ ಪ್ರಯಾಗ್‌ರಾಜ್‌ಗೆ ತೆರಳಬೇಕಿತ್ತು. ಈ ಪೈಕಿ ಮೊದಲ ಮೂರು ರೈಲುಗಳ ಆಗಮನ ವಿಳಂಬದಿಂದ ನಿಲ್ದಾಣದಲ್ಲಿ ಭಾರೀ ಜನಸಂದಣಿ ಸೇರಿತ್ತು.- ರಾತ್ರಿ 9.30ರ ವೇಳೆ ಪ್ರಯಾಗ್‌ರಾಜ್ ಸ್ಪೆಷಲ್ ಟ್ರೇನ್ ಫ್ಲ್ಯಾಟ್‌ಫಾರ್12ಕ್ಕೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಘೋಷಣೆ. ಆದರೆ ಇದೇ ಹೊತ್ತಿನಲ್ಲಿ ಫ್ಲ್ಯಾಟ್‌ಫಾರ್ಮ್ 14ರಲ್ಲಿ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿಗೆ ಕಾದಿದ್ದ ಸಾವಿರಾರು ಪ್ರಯಾಣಿಕರು. ರೈಲ್ವೆ ಅಧಿಕಾರಿಗಳ ಘೋಷಣೆ ಸರಿಯಾಗಿ ಕೇಳಿಸಿಕೊಳ್ಳದೇ ಫ್ಲ್ಯಾಟ್‌ಫಾರ್ಮ್ ಬದಲಾಗಿದೆ ಎಂದು 14ರಿಂದ 12ರ ಕಡೆಗೆ ದೌಡಾಯಿಸಿದ ಕಾರಣ ನೂಕುನುಗ್ಗಲಾಗಿ ಕಾಲ್ತುಳಿತ ಸಂಭವಿಸಿದೆ.
- ಫ್ಲ್ಯಾಟ್‌ಫಾರ್ಮ್ 14ರಿಂದ ಪಕ್ಕದ್ದಲ್ಲಿದ್ದ ಫ್ಲ್ಯಾಟ್‌ಫಾರ್ಮ್ 16ಕ್ಕೆ ಹೋಗಲು 42 ಮೆಟ್ಟಿಲುಗಳನ್ನು ಹತ್ತಿ ಬಳಿಕ 25 ಅಡಿ ಅಗಲದ ಮೇಲು ಸೇತುವೆ ಮೂಲಕ ಸಾಗಬೇಕಿತ್ತು. ಹೀಗೆ ಪ್ರಯಾಣಿಕರು ಫ್ಲ್ಯಾಟ್‌ಫಾರ್ಮ್ 14ರಿಂದ 16ರ ದೌಡಾಯಿಸಿ 16ರ ಬಳಿ ಮೆಟ್ಟಿಲು ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಕೆಳಗಿನಿಂದಲೂ ಜನ ಮೇಲೆ ಹತ್ತಲು ಯತ್ನಿಸಿದಾಗ ಕೆಲವರು ಉರುಳಿಬಿದ್ದಿದ್ದಾರೆ. ಈ ವೇಳೆ ಆಯ ತಪ್ಪಿ ಒಬ್ಬರ ಮೇಲೊಬ್ಬರು ಬಿದ್ದು ಉಸಿರು ಕಟ್ಟಿ 18 ಜನರು ಸಾವನ್ನಪ್ಪಿದ್ದಾರೆ.
ಶವವಾದ ಮಗಳ ಹೊತ್ತು ಹಣಕ್ಕೆ ಕೋರಿದ ಅಪ್ಪನ ಆಕ್ರಂದನ
ನವದೆಹಲಿ: ಎಲ್ಲೆಲ್ಲೂ ಜನರ ದೌಡು, ಅತ್ತಿಂದಿತ್ತ ಸಾಗಲು ಹರಸಾಹಸ, ತಮ್ಮವರು ಕಾಣೆಯಾದ ಆತಂಕ, ಬಂಧುಮಿತ್ರರ ಸಾವಿನ ಶೋಕ, ಇದರ ನಡುವೆಯೇ ನೊಂದವರ ನೋವಿಗೆ ಧ್ವನಿಯಾದ ಸ್ಥಳೀಯರು, ಕೂಲಿಯಾಳುಗಳು....
ಇದು 18 ಜನರನ್ನು ಬಲಿ ಪಡೆದ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಂಡುಬಂದ ದೃಶ್ಯಗಳು.ಶನಿವಾರ ರಾತ್ರಿ ಕಾಲ್ತುಳಿತದ ನಡೆದ ವೇಳೆ ಸ್ಥಳದಲ್ಲಿದ್ದ ರೈಲ್ವೆ ಕೂಲಿಯಾಳು ಮೊಹಮ್ಮದ್ ಹಾಶಿಂ ಕರುಣಾಜನಕ ಕಥೆಯನ್ನು ಹೇಳಿದ್ದಾರೆ. ‘ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಿರುಚಾಟ ಕೇಳಿಸಿತು. ಎಲ್ಲಾ ಕೂಲಿಗಳು ಅತ್ತ ಧಾವಿಸಿದೆವು. ದಿಕ್ಕಾಪಾಲಾಗಿ ಓಡುತ್ತಿದ್ದ ಜನರ ನಡುವೆ ನೆಲದಲ್ಲಿ ಬಿದ್ದಿದ್ದ 8-10 ಮಕ್ಕಳನ್ನು ಅಲ್ಲಿಂದ ಹೊರಕರೆತಂದೆವು. ಒಬ್ಬ ಮಹಿಳೆ ತನ್ನ 4 ವರ್ಷದ ಮಗಳು ಅಸುನೀಗಿದಳೆಂದು ಅಳುತ್ತಿದ್ದಳು. ಅವರಿಬ್ಬರನ್ನೂ ಅಲ್ಲಿಂದಾಚೆ ಕರೆತಂದೆ. 2 ನಿಮಿಷಗಳ ನಂತರ ಮಗು ಉಸಿರಾಡತೊಡಗಿದಾಗ ತಾಯಿಯ ಖುಷಿಗೆ ಪಾರವೇ ಇರಲಿಲ್ಲ. ’ ಎಂದರು.
ಇನ್ನೋರ್ವ ಹಮಾಲಿ ಜಿತೇಶ್ ಮೀನಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, ‘ಕಾಲ್ತುಳಿತ ಉಂಟಾದಾಗ ಒಬ್ಬಾತ ತನ್ನ ಮಗಳ ಶವವನ್ನೆತ್ತಿಕೊಂಡು ಹೊರಬಂದು, ತುಂಬಿದ ಕಂಗಳೊಂದಿಗೆ, ‘ನನ್ನ ಬಳಿ ಹಣವಿಲ್ಲ’ ಎಂದರು. ಕೂಡಲೇ ಕೂಲಿಯಾಳುಗಳೆಲ್ಲಾ ಸೇರಿಕೊಂಡು ಒಂದಿಷ್ಟು ಹಣ ಸಂಗ್ರಹಿಸಿದೆವು. ಜೊತೆಗೆ, ಅವರಿಗಾಗಿ ಆಟೋ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ಅಷ್ಟರಲ್ಲಾಗಲೇ ಅವರು ತಮ್ಮ ಚಪ್ಪಲಿ, ಮೊಬೈಲ್ ಕಳೆದುಕೊಂಡಿದ್ದರು. ಜೊತೆಗೆ, ಪತ್ನಿಯೂ ಕಾಣೆಯಾಗಿದ್ದರು’ ಎಂದು ಹೇಳಿದ್ದಾರೆ.
ಪ್ರಯಾಣಿಕರ ವಿಷಯಕ್ಕೆ ಬಂದರೆ, ಉತ್ತರಪ್ರದೇಶದವರಾದ ಗುಪ್ತೇಶ್ವರ್ ಯಾದವ್(58) ಕಂಡಕಂಡವರಿಗೆ ತಮ್ಮ ಮೊಬೈಲ್ ತೋರಿಸುಯತ್ತಾ ಹೆಂಡತಿಯ ಹುಡುಕಾಟದಲ್ಲಿ ತೊಡಗಿದ್ದುದು ಕಂಡುಬಂದಿತು. ಸಹೋದರ ಹಾಗೂ ಮಡದಿಯೊಂದಿಗೆ ಕುಂಭಕ್ಕೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದ ಅವರು ಪ್ಲಾಟ್‌ಫಾರ್ಮ್ ಬದಲಿಸುವ ವೇಳೆ ಉಂಟಾದ ನೂಕಾಟದಿಂದಾಗಿ, ಹಿಡಿದಿದ್ದ ಹೆಂಡತಿಯ ಕೈ ಬಿಟ್ಟಿದ್ದಾರೆ. ಆಗಿಂದ ಆಕೆಗಾಗಿ ಹುಡುಕುತ್ತಿರುವ ಯಾದವ್, ಗಾಯಾಳುಗಳನ್ನು ದಾಖಲಿಸಲಾದ ಆಸ್ಪತ್ರೆಗಳಿಗೂ ತೆರಳಿ ಹೆಂಡತಿ ಅಲ್ಲಿಯಾದರೂ ಕಾಣಬಹುದೇ ಎಂದು ಹುಡುಕುತ್ತಿದ್ದಾರೆ. ಇದು ಯಾದವ್ ಒಬ್ಬರ ಕತೆಯಲ್ಲ. ಹೀಗೆ ಕಳೆದುಹೋದ ಸಂಗಾತಿ, ಮಕ್ಕಳು, ಒಡಹುಟ್ಟಿದವರ ಫೋಟೋ ಹಿಡಿದು ಹೊರಟವರಿಗೆ ಆಸ್ಪತ್ರೆಗಳು ಹುಡುಕಲು ಬಿಡುತ್ತಿಲ್ಲ. ಜೊತೆಗೆ, ಎಲ್ಲಾ ಶವಗಳನ್ನು ಅವರವರ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾಗಿ ಹೇಳುತ್ತಿದ್ದಾರೆ ಎಂಬ ಅಳಲೂ ಕೇಳಿಬರುತ್ತಿದೆ.
18 ಜನರ ಪೈಕಿ 5 ಜನರು ಉಸಿರುಗಟ್ಟಿ ಸಾವು: ವೈದ್ಯರು
ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 18 ಮಂದಿಯ ಪೈಕಿ 5 ಜನ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರ್‌ಎಂಎಲ್ ಆಸ್ಪತ್ರೆ ತಿಳಿಸಿದೆ. ಘಟನೆಯ ಸಂತ್ರಸ್ತರನ್ನು ದಾಖಲಿಸಲಾಗಿದ್ದ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ 4 ಮಹಿಳೆ ಹಾಗೂ 1 ಪುರುಷ ಸೇರಿ 5 ಶವಗಳನ್ನು ಆರ್‌ಎಂಎಲ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿತ್ತು. ಅವುಗಳ ಶವಪರೀಕ್ಷೆ ನಡೆಸಿದ ಆಸ್ಪತ್ರೆ, ಆಘಾತಕಾರಿ ಉಸಿರುಗಟ್ಟುವಿಕೆಯಿಂದಾಗಿ ಅವರೆಲ್ಲಾ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ: ಖರ್ಗೆ
ನವದೆಹಲಿ: ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ತುಂಬಿದ್ದ ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವವಿಸಿದ ಭೀಕರ ಕಾಲ್ತುಳಿತದ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ಇದು ರೈಲ್ವೆ ಇಲಾಖೆ ವೈಫಲ್ಯ ಹಾಗೂ ಸರ್ಕಾರದ ಸಂವೇದನಾರಹಿತ ಮನೋಭಾವಕ್ಕೆ ಸಾಕ್ಷಿ ಎಂದು ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಮೃತರ ಸಂಖ್ಯೆ ಮುಚ್ಚಿಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಾಚಿಕೆಗೇಡು ಹಾಗೂ ಖಂಡನಾರ್ಹ. ಎಷ್ಟು ಜನ ನಿಖರವಾಗಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಬಯಲು ಮಾಡಬೇಕು ಹಾಗೂ ಕಾಣೆಯಾದವರ ಗುರುತು ಪತ್ತೆ ಮಾಡಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ‘ಇದು ರೈಲ್ವೆ ಇಲಾಖೆಯ ವೈಫಲ್ಯ. ಕುಂಭಮೇಳಕ್ಕೆ ತೆರಳುವವರಿಗಾಗಿ ಮೊದಲೇ ಉತ್ತಮ ವ್ಯವಸ್ಥೆ ಮಾಡಬೇಕಿತ್ತು. ಯಾರ ಪ್ರಾಣಕ್ಕೂ ಚ್ಯುತಿ ಬಾರದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.