ನಿರುದ್ಯೋಗ ಸಮಸ್ಯೆಯ ದ್ಯೋತಕ ಎಂಬ ರೀತಿ ಘಟನೆ ಮುಂಬೈನಲ್ಲಿ : 600 ಹುದ್ದೆ ಸಂದರ್ಶನಕ್ಕೆ ಬಂದ 25 ಸಾವಿರ ಜನ!

KannadaprabhaNewsNetwork |  
Published : Jul 18, 2024, 01:42 AM ISTUpdated : Jul 18, 2024, 05:05 AM IST
ಮುಂಬೈ | Kannada Prabha

ಸಾರಾಂಶ

ದೇಶದಲ್ಲಿನ ನಿರುದ್ಯೋಗ ಸಮಸ್ಯೆಯ ದ್ಯೋತಕ ಎಂಬ ರೀತಿಯ ಘಟನೆ ಮುಂಬೈನಲ್ಲಿ ಬುಧವಾರ ನಡೆದಿದೆ. ಏರ್‌ ಇಂಡಿಯಾದ ಏರ್‌ಪೋರ್ಟ್‌ ಸೇವಾ ಲಿಮಿಟೆಡ್‌ ಏರ್ಪಡಿಸಿದ್ದ 600 ಹುದ್ದೆಗಳ ನೇಮಕಾತಿಯ ನೇರ ಸಂದರ್ಶನಕ್ಕೆ 25 ಸಾವಿರ ಜನರು ಬಂದ ಪರಿಣಾಮ ಏರ್‌ಪೋರ್ಟ್‌ನಲ್ಲಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ.

ಮುಂಬೈ: ದೇಶದಲ್ಲಿನ ನಿರುದ್ಯೋಗ ಸಮಸ್ಯೆಯ ದ್ಯೋತಕ ಎಂಬ ರೀತಿಯ ಘಟನೆ ಮುಂಬೈನಲ್ಲಿ ಬುಧವಾರ ನಡೆದಿದೆ. ಏರ್‌ ಇಂಡಿಯಾದ ಏರ್‌ಪೋರ್ಟ್‌ ಸೇವಾ ಲಿಮಿಟೆಡ್‌ ಏರ್ಪಡಿಸಿದ್ದ 600 ಹುದ್ದೆಗಳ ನೇಮಕಾತಿಯ ನೇರ ಸಂದರ್ಶನಕ್ಕೆ 25 ಸಾವಿರ ಜನರು ಬಂದ ಪರಿಣಾಮ ಏರ್‌ಪೋರ್ಟ್‌ನಲ್ಲಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. 

ವಾಕ್‌ ಇನ್‌ ಇಂಟರ್‌ವ್ಯೂ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಅರ್ಜಿ ಸಮೇತ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಈ ಪ್ರಮಾಣದಲ್ಲಿ ಆಕಾಂಕ್ಷಿಗಳು ಕಚೇರಿಯತ್ತ ನುಗ್ಗಿದ ಹಿನ್ನೆಲೆಯಲ್ಲಿ ಕೆಲ ಕಾಲ ಕಾಲ್ತುಳಿತದ ಆತಂಕವೂ ಸೃಷ್ಟಿಯಾಗಿತ್ತು. ಕೊನೆಗೆ ಪರಿಸ್ಥಿತಿ ನಿರ್ವಹಣೆ ಮಾಡಲಾಗದೇ, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಿ ತೆರಳುವಂತೆ ಸೂಚಿಸಲಾಯಿತು.ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ ಕುರಿತು ಪ್ರತಿಕ್ರಿಯೆ ನಿಡಿರುವ ಮುಂಬೈ ಮಧ್ಯ ಸಂಸದೆ, ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್‌, ‘ಯುವಕರಿಗೆ ಉದ್ಯೋಗ ಬೇಕಿದೆಯೇ ಹೊರತೂ ಪೊಳ್ಳು ಭರವಸೆಗಳು ಮತ್ತು ನಕಲಿ ಅಂಕಿಸಂಖ್ಯೆಗಳಲ್ಲ. 

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಯಾವಾಗ ದೇಶದ ಯುವ ಸಮುದಾಯದ ಭವಿಷ್ಯದ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದ್ದಾರೆ.ಇತ್ತೀಚೆಗಷ್ಟೇ ಗುಜರಾತ್‌ನ ಭರೂಚ್‌ನಲ್ಲೂ 10 ಹುದ್ದೆಗಳಿಗೆ 1800 ಜನರು ಅರ್ಜಿ ಸಲ್ಲಿಸಲು ಆಗಮಿಸಿದಾಗಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಆ ವಿಡಿಯೋ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದರು.==

ಹರ್ಯಾಣ ರಾಜ್ಯದ ವಿವಿಧ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ.10 ಮೀಸಲಾತಿ

ಚಂಡೀಗಢ: ಅಗ್ನಿಪಥ (ಅಗ್ನಿವೀರ) ಯೋಜನೆಯನ್ನು ವಿಪಕ್ಷಗಳು ವಿರೋಧಿಸಿರುವ ನಡುವೆ ಹರ್ಯಾಣದ ಬಿಜೆಪಿ ಸರ್ಕಾರ ಅಗ್ನಿವೀರರಿಗೆ ರಾಜ್ಯ ಪೊಲೀಸ್‌ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ಶೇ. 10ರಷ್ಟು ಮೀಸಲು ನಿಗದಿಪಡಿಸಿದೆ.ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಈ ಮೀಸಲಾತಿಯನ್ನು ಬುಧವಾರ ಘೋಷಿಸಿದ್ದು, ಕಾನ್‌ಸ್ಟೇಬಲ್‌, ಗಣಿಗಾರಿಕೆ ಭದ್ರತಾ ಸಿಬ್ಬಂದಿ, ಫಾರೆಸ್ಟ್‌ ಗಾರ್ಡ್‌, ಜೈಲು ವಾರ್ಡನ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ.10 ಮೀಸಲಾತಿ ನೀಡಲಾಗುವುದು ಎಂದರು.ಈ ಯೋಜನೆ ಬಗ್ಗೆ ಕಾಂಗ್ರೆಸ್‌ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು. 

ಖಾಸಗಿಯಲ್ಲೂ ಉದ್ಯೋಗ ಮೀಸಲು: ಕೇಂದ್ರ ಸಚಿವ ಅಠಾವಳೆ ಒತ್ತಾಯ

ನವದೆಹಲಿ: ಕರ್ನಾಟಕ ಸರ್ಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಕಾಯ್ದೆ ಜಾರಿಗೆ ಮುಂದಾಗಿರುವ ಹೊತ್ತಿನಲ್ಲೇ, ‘ಖಾಸಗಿ ವಲಯದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೂ ಮೀಸಲು ನೀಡುವುದು ಅಗತ್ಯ’ ಎಂದು ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಒತ್ತಾಯ ಮಾಡಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಖಾಸಗಿ ವಲಯದಲ್ಲಿ ಉದ್ಯೋಗ ಮಾಡಲು ಎಸ್‌ಸಿ, ಎಸ್ಟಿ, ಒಬಿಸಿ ಸಮುದಾಯದ ಜನರು ಆಸಕ್ತರಾಗಿದ್ದಾರೆ. ಆದರೆ ಮೀಸಲು ಸೌಲಭ್ಯ ಇಲ್ಲದ ಕಾರಣ ಅವರೆಲ್ಲಾ ಅಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ವಲಯದ ಕಂಪನಿಗಳು ಖಾಸಗೀಕರಣವಾಗಬಹುದು. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗಿ ವಲಯದಲ್ಲೂ ದಲಿತರುಗೆ ಹಾಗೂ ಹಿಂದುಳಿದ ಸಮುದಾಯ ವರ್ಗಗಳಿಗೆ ಮೀಸಲು ನೀಡಲು ಮುಂದಾಗಬೇಕು’ ಎಂದು ಆಗ್ರಹಿಸಿದರು.ಆದರೆ ಹಾಗಂತ ತಾವು ಸಾಮಾನ್ಯ ವರ್ಗದ ಉದ್ಯೋಗಾಕಾಂಕ್ಷಿಗಳ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ