ಬೆಂಗಳೂರು : ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರಿಂದಲೇ ಅಸಮಾಧಾನ, ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಎರಡನೇ ದಿನವಾದ ಮಂಗಳವಾರವೂ ವಿವಿಧ ಸಚಿವರೊಂದಿಗೆ ಒನ್ ಟು ಒನ್ ಸಭೆ ನಡೆಸಿ ಸಚಿವರಿಂದ ವಿವರಣೆ ಪಡೆದರು.
ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಕೆಎಸ್‌ಐಸಿ ಮುಖ್ಯಸ್ಥೆ ಖನಿಜಾ ಫಾತಿಮಾ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರನ್ನೂ ಪ್ರತ್ಯೇಕವಾಗಿ ಕರೆಸಿಕೊಂಡ ಉಸ್ತುವಾರಿ, ಇಲಾಖಾವಾರು ಕಾರ್ಯವೈಖರಿ ಜೊತೆಗೆ ಶಾಸಕರುಗಳಿಂದ ಬಂದಿರುವ ದೂರುಗಳ ಬಗ್ಗೆ ವಿವರಣೆ ಪಡೆದರು.
ಸುರ್ಜೇವಾಲಾ ಅವರು ರಾಜ್ಯದಲ್ಲೇ ಬೀಡುಬಿಟ್ಟು ಆರೇಳು ದಿನಗಳ ಕಾಲ ಶಾಸಕರ ಸಭೆ ನಡೆಸಿ ಅಹವಾಲು ಆಲಿಸಿ ಹೈಕಮಾಂಡ್‌ಗೆ ವರದಿ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ದೆಹಲಿಗೆ ಕರೆಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಸಿ ಸಿಎಂ ಬದಲಾವಣೆ, ಅಧಿಕಾರ ಹಂಚಿಕೆ ವಿಚಾರಗಳಿಗೆ ಫುಲ್‌ಸ್ಟಾಪ್ ಇಡಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯಕ್ಕೆ ವಾಪಸಾದ ಸುರ್ಜೇವಾಲಾ ಅವರು ಸೋಮವಾರದಿಂದ ದಿಢೀರ್ ಸಚಿವರೊಂದಿಗೆ ಸಭೆ ಆರಂಭಿಸಿ ಮೊದಲ ದಿನ ಸಚಿವರಾದ ಬೈರತಿ ಸುರೇಶ್, ಜಮೀರ್ ಅಹಮದ್ ಮತ್ತು ರಹೀಂ ಖಾನ್ ಅವರೊಂದಿಗೆ ಸಭೆ ನಡೆಸಿ ವಿವರಣೆ ಪಡೆದಿದ್ದರು. ಮಂಗಳವಾರ ಇನ್ನೂ 11 ಸಚಿವರು, ಮೂವರು ನಿಗಮ ಮಂಡಳಿ ಅಧ್ಯಕ್ಷರೊಂದಿಗೆ ಮುಖಾಮುಖಿ ಸಭೆ ನಡೆಸಿ, ಇಲಾಖಾ ಕಾರ್ಯವೈಖರಿ ಹಾಗೂ ಶಾಸಕರ ದೂರುಗಳ ಬಗ್ಗೆ ವಿವರಣೆ ಪಡೆದರು.
ಈ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ವಿಪಕ್ಷದ ಶಾಸಕರ ಬಿಲ್‌ಗಳು ಬಿಡುಗಡೆಯಾದರೂ ಸ್ವಪಕ್ಷೀಯ ಶಾಸಕರ ಬಿಲ್‌ಗಳನ್ನು ಕ್ಲಿಯರ್ ಮಾಡಲಾಗುತ್ತಿಲ್ಲ ಎಂಬ ಕೆಲ ಶಾಸಕರ ಆರೋಪದ ಬಗ್ಗೆ ಸುರ್ಜೇವಾಲಾ ಸಚಿವ ಸತೀಶ್ ಜಾರಹೊಳಿ ಅವರಿಗೆ ಪ್ರಶ್ನಿಸಿದ್ದು, ಶಾಸಕರನ್ನು ವಿಶ್ವಾಸಕ್ಕೆ ಪಡೆದು ನಡೆಯುವಂತೆ ಸಲಹೆ ನೀಡಿದರು.
ಸಚಿವ ಮಧುಬಂಗಾರಪ್ಪ ವಿರುದ್ಧ ಕೂಡ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕಾರ್ಯಕ್ರಮಗಳಿಗೆ ಆಹ್ವಾನಿಸದೆ ಅಗೌರವ ತೋರುತ್ತಿರುವ ಆರೋಪ ಹಿನ್ನೆಲೆಯಲ್ಲಿ ಸುರ್ಜೇವಾಲಾ ಕಿವಿಮಾತು ಹೇಳಿದರು. ಅದೇ ರೀತಿ ಸಂತೋಷ್ ಲಾಡ್ ಮತ್ತು ಬೋಸರಾಜು ಅವರ ವಿರುದ್ಧವೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅವರಿಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ನಿರ್ದೇಶನ ನೀಡಿದರು. ಇದಕ್ಕೆ ಸಚಿವರು ತಮ್ಮ ನಡೆ ತಿದ್ದಿಕೊಳ್ಳುವುದಾಗಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಶಾಸಕಾಂಗ ಸಭೆಯಲ್ಲಿ ಎಲ್ಲ ಸಚಿವರೂ ಲಭ್ಯವಿದ್ದು, ಶಾಸಕರ ಅಹವಾಲು ಕೇಳಬೇಕು. ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಯಾವುದೇ ಯೋಜನೆ, ವಿಚಾರ, ಅಹವಾಲುಗಳೊಂದಿಗೆ ತಮ್ಮ ಬಳಿ ಬಂದಾಗ ಮೊದಲು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಅಹವಾಲುಗಳನ್ನು ಸ್ವೀಕರಿಸಿ. ನಂತರ ಕಾಲಮಿತಿಯೊಳಗೆ ಅವುಗಳಿಗೆ ಪರಿಹಾರ ಕಲ್ಪಿಸುವ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ. ಶಾಸಕರ ಪತ್ರ, ಶಿಫಾರಸುಗಳಿಗೆ ಸ್ಪಂದಿಸಿ. ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ, ಅನುದಾನದ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ಪಡೆಯಬೇಕು. ಅಧಿಕಾರಿಗಳು ಶಾಸಕರನ್ನು ಗೌರವಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು ಎಂದು ತಿಳಿದು ಬಂದಿದೆ.
ಇದು ಮೌಲ್ಯಮಾಪನದ ಸಭೆ ಅಲ್ಲ: ಸಚಿವರು
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಸಚಿವರೊಂದಿಗಿನ ಸಭೆಯಲ್ಲಿ ಇಲಾಖೆಯ ಕಾರ್ಯಕ್ರಮಗಳು, ಅವುಗಳ ಪ್ರಗತಿ ಕುರಿತು ವಿವರಣೆ ಪಡೆಯುತ್ತಿದ್ದಾರೆ. ಇದನ್ನು ಸಚಿವರ ಇಲಾಖಾ ಕಾರ್ಯವೈಖರಿಯ ಮೌಲ್ಯಮಾಪನ ಇಲ್ಲ ಎಂದು ಸಚಿವರಾದ ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಒನ್ ಟು ಒನ್ ಸಭೆ ಬಳಿಕ ಸುದ್ದಿಗಾರರೊಂದಿಗೆ ಎಲ್ಲ ಸಚಿವರೂ ಪ್ರತ್ಯೇಕವಾಗಿ ಮಾತನಾಡಿದರು.
ಸತೀಶ್ ಜಾರಕಿಹೊಳಿ ಮಾತನಾಡಿ, ಉಸ್ತುವಾರಿಗಳು ನಡೆಸುತ್ತಿರುವುದು ಸಚಿವರ ಮೌಲ್ಯಮಾಪನ ಅಂತಲ್ಲ, ಶಾಸಕರಿಂದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕರೆದಿರುವ ಸಭೆ. ನಮ್ಮ ತಪ್ಪುಗಳನ್ನು ಹೇಳಿದರೆ ತಾನೆ ಗೊತ್ತಾಗೋದು. ಕೆಲವರು ನಮ್ಮನ್ನೇ ಭೇಟಿಯಾಗಿ ಹೇಳುತ್ತಾರೆ, ಇನ್ನು ಕೆಲವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ರೀತಿ ಶಾಸಕರಿಂದ ಕೇಳಿ ಬಂದ ಆರೋಪ, ದೂರುಗಳನ್ನು ಮೊದಲ ಹಂತದಲ್ಲೇ ತಡೆಯಬೇಕಲ್ಲ. ಕ್ಯಾನ್ಸರ್ ಎರಡು, ಮೂರನೇ ಹಂತಕ್ಕೆ ಹೋದರೆ ಗುಣ ಆಗುವುದು ಕಷ್ಟ. ಅದಕ್ಕೆ ಸಭೆ ಕರೆದಿದ್ದಾರೆ. ನನ್ನ ಇಲಾಖೆಯಲ್ಲಿ ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ, ಯೋಜನೆಗಳನ್ನು ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದೇನೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ಪಕ್ಷದ ರಾಜ್ಯ ಉಸ್ತುವಾರಿ ಅವರು ಅವರು ನಮ್ಮ ಇಲಾಖೆಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಕಿ ಇರುವ ಹಳೆಯ ಕಾರ್ಯಕ್ರಮಗಳು, ಹೊಸ ಯೋಜನೆಗಳ ಪ್ರಗತಿ ಬಗ್ಗೆ ವಿಚಾರಿಸಿದರು. ಎಲ್ಲವುಗಳ ಬಗ್ಗೆ ದಾಖಲೆ ಸಹಿತ ವಿವರಣೆ ನೀಡಿದ್ದೇನೆ. ಇದನ್ನು ಮೌಲ್ಯಮಾಪನ ಅಂತ ಹೇಳಲು ಆಗುವುದಿಲ್ಲ. ನನ್ನ ಕೆಲಸ ಸುರ್ಜೇವಾಲಾ ಅವರಿಗೆ ತೃಪ್ತಿ ತಂದಿದೆ ಎಂದರು.
ಸಂತೋಷ್ ಲಾಡ್ ಮಾತನಾಡಿ, ನಮ್ಮ ಇಲಾಖೆ ವಿಚಾರವಾಗಿ ಕೆಲ ಶಾಸಕರು ಡಿಮ್ಯಾಂಡ್ ಮಾಡಿದ ವಿಚಾರ ಚರ್ಚೆಯಾಯಿತು. ನಾನು ಸಚಿವನಾದ ಬಳಿಕ ಎರಡು ವರ್ಷದ ಸಾಧನೆ ಕುರಿತು ವರದಿ ಒಪ್ಪಿಸಿದ್ದೇನೆ ಎಂದರು.
ನಿನ್ನೆ 11 ಸಚಿವರು 3 ನಿಗಮ ಮಂಡಳಿ ಅಧ್ಯಕ್ಷರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಭೆ
ಈ ವೇಳೆ ಶಾಸಕರು ದೂರಿನ ಸುರಿಮಳೆಗೈದಿರುವ ಬಗ್ಗೆ ಸಚಿವರಿಂದ ಮಾಹಿತಿ ಕೇಳಿದ ರಾಜ್ಯ ಉಸ್ತುವಾರಿ
ಸ್ವಪಕ್ಷೀಯರ ಬಿಲ್ ಕ್ಲಿಯರ್ ಮಾಡದೇ ಇರುವ ಬಗ್ಗೆಯೂ ಸಚಿವರಿಗೆ ಪ್ರಶ್ನೆ. ಶಾಸಕರ ಗೌರವಿಸುವಂತೆ ಸಲಹೆ
ಇದರ ಜೊತೆಗೆ ಆಯಾ ಸಚಿವರ ಇಲಾಖುವಾರು ಸಾಧನೆಗಳ, ಕೈಗೊಂಡ ಯೋಜನೆ ಬಗ್ಗೆಯೂ ಮಾಹಿತಿ
ಸುರ್ಜೇವಾಲಾ ಮಾತಿಗೆ ಒಪ್ಪಿ, ಮುಂದಿನ ದಿನಗಳಲ್ಲಿ ತಪ್ಪು ತಿದ್ದಿಕೊಳ್ಳುವ ಭರವಸೆ ನೀಡಿದ ಹಲವು ಸಚಿವರು