ಇನ್ನು ಕೇಂದ್ರದ ಅಕ್ಕಿ ರಾಜ್ಯಗಳಿಗೆ ನೇರ ಮಾರಾಟ : ಇ-ಹರಾಜು ಪದ್ಧತಿ ರದ್ದು- ಆಗಸ್ಟ್‌ 1ರಿಂದಲೇ ಜಾರಿ

KannadaprabhaNewsNetwork | Updated : Aug 02 2024, 07:42 AM IST

ಸಾರಾಂಶ

ಮಹತ್ವದ ನಡೆಯೊಂದರಲ್ಲಿ ಕೇಂದ್ರೀಯ ಅಕ್ಕಿ ಖರೀದಿಗೆ ಇದ್ದ ಇ-ಹರಾಜು ಪದ್ಧತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ರಾಜ್ಯ ಸರ್ಕಾರಗಳು ಭಾರತೀಯ ಆಹಾರ ನಿಗಮಕ್ಕೆ ಕ್ವಿಂಟಾಲ್‌ಗೆ 2800 ರು. ಹಣವನ್ನು ಪಾವತಿಸಿ ನೇರವಾಗಿ ಅಕ್ಕಿಯನ್ನು ಖರೀದಿಸಬಹುದು. ಈ ನಿಯಮ ಆಗಸ್ಟ್‌ 1ರಿಂದಲೇ ಜಾರಿಗೆ ಬಂದಿದೆ.

ನವದೆಹಲಿ: ಮಹತ್ವದ ನಡೆಯೊಂದರಲ್ಲಿ ಕೇಂದ್ರೀಯ ಅಕ್ಕಿ ಖರೀದಿಗೆ ಇದ್ದ ಇ-ಹರಾಜು ಪದ್ಧತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ರಾಜ್ಯ ಸರ್ಕಾರಗಳು ಭಾರತೀಯ ಆಹಾರ ನಿಗಮಕ್ಕೆ ಕ್ವಿಂಟಾಲ್‌ಗೆ 2800 ರು. ಹಣವನ್ನು ಪಾವತಿಸಿ ನೇರವಾಗಿ ಅಕ್ಕಿಯನ್ನು ಖರೀದಿಸಬಹುದು. ಈ ನಿಯಮ ಆಗಸ್ಟ್‌ 1ರಿಂದಲೇ ಜಾರಿಗೆ ಬಂದಿದೆ.

ಕೇಂದ್ರದ ಈ ನಡೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಏಕೆಂದರೆ ಹರಾಜಿನಲ್ಲಿ ಅಕ್ಕಿ ಖರೀದಿಸುವ ಕ್ರಮವೇ, ಕರ್ನಾಟಕದಲ್ಲಿ ತನ್ನ ಪಾಲಿನ 5 ಕೇಜಿ ಅನ್ನಭಾಗ್ಯ ಉಚಿತ ಅಕ್ಕಿ ನೀಡುವ ಸಿದ್ದರಾಮಯ್ಯ ಸರ್ಕಾರದ ಯತ್ನಕ್ಕೆ ಹಿನ್ನಡೆ ಉಂಟು ಮಾಡಿತ್ತು. ಈಗ ಇ-ಹರಾಜು ರದ್ದಾಗಿ ನೇರ ಖರೀದಿಗೆ ಅವಕಾಶ ಸಿಕ್ಕಿರುವ ಕಾರಣ ರಾಜ್ಯ ಸರ್ಕಾರ ನೇರವಾಗಿ ಕೇಜಿಗೆ 28 ರು. ನೀಡಿ ಕೇಂದ್ರದಿಂದ ಅಕ್ಕಿ ಖರೀದಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ, ‘ರಾಜ್ಯಗಳು ನೇರವಾಗಿ ಭಾರತೀಯ ಆಹಾರ ನಿಗಮಕ್ಕೆ ಕ್ವಿಂಟಾಲ್‌ಗೆ 2800 ರು. ಹಣ ನೀಡಿ ಅಕ್ಕಿ ಪಡೆಯಬಹುದು. ಆನ್‌ಲೈನ್ ಹರಾಜು ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕಂದಿಲ್ಲ. ನಿಗಮದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಬಹುದು’ ಎಂದರು.

ಕೇಂದ್ರ ಸರ್ಕಾರದ ಬಳಿ ಈಗ ಸಾಕಷ್ಟು ಅಕ್ಕಿ ದಾಸ್ತಾನಿದೆ. ಹೆಚ್ಚುವರಿ ಅಕ್ಕಿ ದಾಸ್ತಾನು ಕಡಿಮೆ ಮಾಡಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರದ ಅಧಿಕೃತ ಪ್ರಕಟಣೆ ತಿಳಿಸಿದೆ.ಕರ್ನಾಟಕ ಸರ್ಕಾರ ಕಳೆದ ವರ್ಷ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿತ್ತು. ಆದರೆ, ಹೆಚ್ಚುವರಿ ಅಕ್ಕಿ ದಾಸ್ತಾನುವಿಲ್ಲ ಎನ್ನುವ ಕಾರಣ ನೀಡಿ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಹಾಗೂ ಇ-ಹರಾಜಲ್ಲಿ ಪಾಲ್ಗೊಂಡು ಖರೀದಿಸುವಂತೆ ಹೇಳಿತ್ತು. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.

Share this article