ಲೋಕಸಭಾ ಕ್ಷೇತ್ರ ವಿಂಗಡಣೆಯಾದ್ರೆಕರ್ನಾಟಕಕ್ಕೆ 2 ಸ್ಥಾನ ನಷ್ಟ: ಕಾಂಗ್ರೆಸ್‌

KannadaprabhaNewsNetwork | Published : Mar 12, 2025 12:50 AM

ಸಾರಾಂಶ

ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಚಿಂತನೆಗೆ ಡಿಎಂಕೆ ಬಳಿಕ ಇದೀಗ ಕಾಂಗ್ರೆಸ್‌ನಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯಾ ನಿಯಂತ್ರಣಾ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿ ಒಟ್ಟು 9 ರಾಜ್ಯಗಳಲ್ಲಿ ಒಂದರಿಂದ ಎಂಟರಷ್ಟು ಲೋಕಸಭಾ ಕ್ಷೇತ್ರಗಳು ಕಡಿತವಾಗಲಿವೆ ಎಂದು ಹೇಳಿದೆ.

ನವದೆಹಲಿ: ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಚಿಂತನೆಗೆ ಡಿಎಂಕೆ ಬಳಿಕ ಇದೀಗ ಕಾಂಗ್ರೆಸ್‌ನಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯಾ ನಿಯಂತ್ರಣಾ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿ ಒಟ್ಟು 9 ರಾಜ್ಯಗಳಲ್ಲಿ ಒಂದರಿಂದ ಎಂಟರಷ್ಟು ಲೋಕಸಭಾ ಕ್ಷೇತ್ರಗಳು ಕಡಿತವಾಗಲಿವೆ ಎಂದು ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರು, ತಮಿಳುನಾಡು, ಕೇರಳ, ಆಂಧ್ರ-ತೆಲಂಗಾಣ ತಲಾ 8. ಪಶ್ಚಿಮ ಬಂಗಾಳ-4, ಒಡಿಶಾ 3, ಕರ್ನಾಟಕ-2, ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ಉತ್ತರಾಖಂಡ ತಲಾ ಒಂದು ಸ್ಥಾನ ಕಳೆದುಕೊಳ್ಳಲಿದೆ. ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ಉತ್ತರಪ್ರದೇಶ-11, ಬಿಹಾರ-10, ರಾಜಸ್ಥಾನ-6, ಮಧ್ಯಪ್ರದೇಶ-4, ಜಾರ್ಖಂಡ್‌, ಹರ್ಯಾಣ, ಗುಜರಾತ್‌, ದೆಹಲಿ, ಛತ್ತೀಸ್‌ಗಢ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ತಲಾ ಒಂದರಷ್ಟು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಜೈರಾಂ ರಮೇಶ್‌ ಅವರು ತಮ್ಮ ವಾದಕ್ಕೆ 2001 ಮತ್ತು 2011ರ ಜನಗಣತಿ ಆಧಾರಿತ ಮಿಲನ್‌ ವೈಷ್ಣವಿ ಮ್ತು ಜಮೈ ಹಿನ್‌ಸ್ಟಂನ್‌ ಅವರ ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದಾರೆ. ಒಂದು ವೇಳೆ 2026ರ ಜನಗಣತಿಯನ್ನು ತೆಗೆದುಕೊಂಡರೆ ಲೋಕಸಭಾ ಕ್ಷೇತ್ರಗಳ ಹಂಚಿಕೆ ಹೇಗೆ ಬದಲಾಗುತ್ತದೆ ಎಂದು ಆ ವಿಶ್ಲೇಷಣೆಯಲ್ಲಿ ವಿವರಿಸಲಾಗಿದೆ.

ಕುಟುಂಬ ಯೋಜನೆಯನ್ನು ಆರಂಭದಲ್ಲೇ ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ರಾಷ್ಟ್ರದ ಉದ್ದೇಶಕ್ಕಾಗಿ ಕುಟುಂಬ ಯೋಜನೆ ಜಾರಿಗೆ ತಂದ ರಾಜ್ಯಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಜೈರಾಂ ರಮೇಶ್‌ ಹೇಳಿಕೊಂಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಕಳೆದ ಶನಿವಾರವಷ್ಟೇ ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್‌, ಒಡಿಶಾದ ಸಿಎಂಗಳು ಮತ್ತು ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದು ಜಂಟಿ ಕ್ರಿಯಾ ಸಮಿತಿ ರಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಲು ಕೈಜೋಡಿಸುವಂತೆ ಮನವಿ ಮಾಡಿದ್ದರು.

Share this article