ಮುಂಬೈ: ಇತ್ತೀಚೆಗಷ್ಟೇ ಷೇರುಪೇಟೆ ನಿಯಂತ್ರಣ ಸಂಸ್ಥೆ ಸೆಬಿ ಅಧ್ಯಕ್ಷ ಹುದ್ದೆಯಿಂದ ನಿವೃತ್ತಿಯಾದ ಮಾಧವಿ ಬುಚ್ ಹಾಗೂ ಇತರೆ ಐವರ ವಿರುದ್ಧ ಷೇರು ಮಾರುಕಟ್ಟೆ ವಂಚನೆ ಹಾಗೂ ನಿಯಮಗಳ ಉಲ್ಲಂಘನೆ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿದೆ.
ಹೀಗಾಗಿ ಕೆಲ ತಿಂಗಳ ಹಿಂದಷ್ಟೇ ಇತರೆ ಪ್ರಕರಣಗಳಲ್ಲಿ ಸ್ವತಃ ಕೇಂದ್ರ ಸರ್ಕಾರದಿಂದ ಕ್ಲೀನ್‌ಚಿಟ್ ಪಡೆದಿದ್ದ ಮಾಧವಿ ಬುಚ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ. ನಿಯಮ ಪಾಲನೆ ಮಾಡದ ಹೊರತಾಗಿಯೂ ಕಂಪನಿಯೊಂದನ್ನು ಷೇರುಪೇಟೆಯಲ್ಲಿ ನೋಂದಣಿ ಮಾಡಲು ಅಕ್ರಮವಾಗಿ ಅವಕಾಶ ಮಾಡಿಕೊಟ್ಟ ಆರೋಪ ಮಾಧವಿ ಮತ್ತು ಇತರೆ ಐವರ ವಿರುದ್ಧ ಕೇಳಿಬಂದಿದೆ.ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿಯಂತ್ರಣಾ ಕ್ರಮಗಳ ಪಾಲನೆಯಲ್ಲಿ ಲೋಪವಾಗಿರುವುದು ಮತ್ತು ಒಳಸಂಚುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಕಂಡುಬರುತ್ತಿವೆ. ಹೀಗಾಗಿ ಈ ಪ್ರಕರಣದ ಕುರಿತು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅಗತ್ಯವಾಗಿದೆ’ ಎಂದು ವಿಶೇಷ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾ। ಶಶಿಕಾಂತ್ ಎಕನಾಥರಾವ್ ಬಾಂಗಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಬುಚ್ ಅವರು ಅದಾನಿ ಸಮೂಹದ ವಿರುದ್ಧದ ತನಿಖೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಈ ಮೊದಲು ಹಿಂಡನ್‌ಬರ್ಗ್ ಸಂಸ್ಥೆ ಆರೋಪಿಸಿತ್ತು. ಅದರ ಬೆನ್ನಲ್ಲೇ ಸೆಬಿ ಅಧಿಕಾರಿಗಳು ಶಾಸನಬದ್ಧ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ, ಮಾನದಂಡಗಳನ್ನು ಪೂರೈಸದ ಕಂಪನಿಯ ಲಿಸ್ಟಿಂಗ್‌ಗೆ ಅನುವು ಮಾಡಿಕೊಡುತ್ತಿದ್ದರು ಎಂದು ದೂರುಗಳು ಸಲ್ಲಿಕೆಯಾಗಿದ್ದವು. ಆದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣಕಾಸು ಸಚಿವಾಲಯ ಬುಚ್ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು.
ಯಾರ್‍ಯಾರ ವಿರುದ್ಧ ಎಫ್‌ಐಆರ್?:ಮಾಧವಿ ಬುಚ್ ಹೊರತುಪಡಿಸಿ, ಬಾಂಬೆ ಸ್ಟಾಕ್ ವಿನಿಮಯ (ಬಿಎಸ್‌ಇ)ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರರಾಮನ್ ರಾಮಮೂರ್ತಿ, ಅದರ ಮಾಜಿ ಅಧ್ಯಕ್ಷ ಪ್ರಮೋದ್ ಅಗರ್ವಾಲ್, ಸೆಬಿಯ ಸದಸ್ಯರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ್, ಕಮಲೇಶ್ ಚಂದ್ರ ವರ್ಷ್ನೇ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚಿಸಿದೆ.