ತಾಯಿಯಿಂದ ಪ್ರಧಾನಿ ಮೋದಿಗೆ ಬೈಗುಳ : ಬಿಹಾರ ಕಾಂಗ್ರೆಸ್‌ನಿಂದ ಎಐ ವಿಡಿಯೋ

KannadaprabhaNewsNetwork |  
Published : Sep 13, 2025, 02:04 AM IST
ಎಐ ವಿಡಿಯೋ | Kannada Prabha

ಸಾರಾಂಶ

  ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಬಗ್ಗೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ನಾಯಕರು ಕೀಳು ಹೇಳಿಕೆ ನೀಡಿದ ವಿವಾದದ ಬೆನ್ನಲ್ಲೇ, ಮೋದಿ ಅವರನ್ನು ಅವರ ತಾಯಿ ಹೀರಾಬೆನ್‌ ಬೈಯ್ಯುತ್ತಿರುವ ರೀತಿಯ ಎಐನಿಂದ ರೂಪಿಸಿದ ವಿಡಿಯೋವೊಂದನ್ನು ಬಿಹಾರ ಕಾಂಗ್ರೆಸ್‌ ಘಟಕ ಬಿಡುಗಡೆ ಮಾಡಿದೆ.

ನವದೆಹಲಿ: ಇತ್ತೀಚೆಗೆ ನಡೆದ ಕಾಂಗ್ರೆಸ್‌ನ ಮತಚೋರಿ ಪಾದಯಾತ್ರೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಬಗ್ಗೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ನಾಯಕರು ಕೀಳು ಹೇಳಿಕೆ ನೀಡಿದ ವಿವಾದದ ಬೆನ್ನಲ್ಲೇ, ಮೋದಿ ಅವರನ್ನು ಅವರ ತಾಯಿ ಹೀರಾಬೆನ್‌ ಬೈಯ್ಯುತ್ತಿರುವ ರೀತಿಯ ಎಐನಿಂದ ರೂಪಿಸಿದ ವಿಡಿಯೋವೊಂದನ್ನು ಬಿಹಾರ ಕಾಂಗ್ರೆಸ್‌ ಘಟಕ ಬಿಡುಗಡೆ ಮಾಡಿದೆ.

ವಿಡಿಯೋ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೇಶದ ಕೋಟ್ಯಂತರ ತಾಯಂದಿರ ಅಣಕ ಎಂದು ಕಿಡಿಕಾರಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ತಾಯಿ ಮಗನಿಗೆ ಬುದ್ದಿ ಹೇಳೇದು ಅಣಕವಾ ಎಂದು ಪ್ರಶ್ನಿಸಿದೆ.

ವಿಡಿಯೋದಲ್ಲೇನಿದೆ?:

ಎಐ ಬಳಸಿ ಸೃಷ್ಟಿಸಿದ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು, ‘ಇಂದಿನ ಮತಚೋರಿ ಮುಗಿಯಿತು’ ಎನ್ನುತ್ತಾ ಮಲಗಲು ಹೋಗುತ್ತಾರೆ. ಆಗ ಕನಸಲ್ಲಿ ಕಾಣಿಸಿಕೊಳ್ಳುವ ಅವರ ತಾಯಿ ಹೀರಾಬೆನ್‌ ಮೋದಿ, ‘ಮಗನೇ, ಮೊದಲು ನೋಟ್‌ಬಂದಿ ಮಾಡಿ ನೀನು ನನ್ನನ್ನು ಉದ್ದುದ್ದ ಸಾಲುಗಳಲ್ಲಿ ನಿಲ್ಲಿಸಿದೆ. ಬಳಿಕ ನನ್ನ ಕಾಲು ತೊಳೆಯುತ್ತಿರುವಂತೆ ತೋರಿಸಿಕೊಂಡು ರೀಲ್‌ ಮಾಡಿದೆ. ಈಗ ಬಿಹಾರದಲ್ಲಿ ನನ್ನ ಹೆಸರು ಹೇಳಿಕೊಂಡು ಅವಮಾನ ಮಾಡಿ ರಾಜಕೀಯ ಮಾಡುತ್ತಿದ್ದೀಯಾ. ಇನ್ನೆಷ್ಟು ಕೆಳಮಟ್ಟಕ್ಕೆ ಇಳಿಯುತ್ತೀಯ’ ಎಂದು ಬಯ್ಯುತ್ತಾರೆ.

ಬಿಜೆಪಿ ಕಿಡಿ:

ಈ ಎಐ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಮೊದಲು ಬಿಹಾರ ಪ್ರಧಾನಿಯವರ ತಾಯಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಅವಮಾನಿಸಿತು. ಈಗ ಮತಕ್ಕಾಗಿ ಅವರನ್ನು ಬಳಸಿಕೊಂಡು ಎಐ ವಿಡಿಯೋ ಮಾಡುತ್ತಿದೆ. ಇದನ್ನು ದೇಶ, ಬಿಹಾರ ಸಹಿಸವು. ಇದಕ್ಕೆ ಕಾಂಗ್ರೆಸ್‌ ಬಿಹಾರ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗುವುದು’ ಎಂದು ಟೀಕಿಸಿದ್ದಾರೆ.

ಇನ್ನೋರ್ವ ನಾಯಕ ಅರವಿಂದ್‌ ಕುಮಾರ್‌ ಸಿಂಗ್‌ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ ದೇಶದ ಕೋಟ್ಯಂತರ ತಾಯಂದಿರ ಭಾವನೆಗಳನ್ನು ಅಣಕವಾಡಿದೆ’ ಎಂದಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ.

ಇದರಲ್ಲಿ ತಪ್ಪಿಲ್ಲ-ಕೈ:

ಬಿಜೆಪಿಗರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, ‘ಇದರಲ್ಲಿ ಅವಮಾನಕರವಾಗಿರುವ ಒಂದೇಒಂದು ಪದ ಅಥವಾ ನಡೆ ತೋರಿಸಿ. ಮಕ್ಕಳಿಗೆ ಬುದ್ಧಿ ಹೇಳಿ ತಿದ್ದುವುದು ಹೆತ್ತವರ ಕರ್ತವ್ಯ. ವಿಡಿಯೋದಲ್ಲಿ ಹೀರಾಬೆನ್‌ ಕೂಡ ಅದನ್ನೇ ಮಾಡಿದ್ದಾರೆ. ಇದನ್ನೇ ಅವಮಾನವೆಂದುಕೊಂಡರೆ ಅದು ನಿಮ್ಮ ಸಮಸ್ಯೆ’ ಎಂದು ಸಮಝಾಯಿಷಿ ನೀಡಿದ್ದಾರೆ.

ಜತೆಗೆ, ‘ಪ್ರಧಾನಿ ಮೋದಿ ಇವೆಲ್ಲವನ್ನೂ ಸ್ವೀಕರಿಸಲು ಸಿದ್ಧರಿರಬೇಕು. ನನ್ನನ್ನು ಮುಟ್ಟಬಾರಡು ಎಂದರೆ ಆಗದು. ಬಿಜೆಪಿಯವರೇಕೆ ಎಲ್ಲದರಲ್ಲೂ ತಪ್ಪು ಹುಡುಕಿ ಸಹಾನುಭೂತಿ ಪಡೆಯಲು ಯತ್ನಿಸುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ.

PREV
Read more Articles on

Recommended Stories

ಬೆಂಗಳೂರು : ಕೆರೆ ಜಾಗದಲ್ಲಿ ಕಟ್ಟಿದ್ದ 20 ಮನೆ ನೆಲಸಮ
ಬೆಳ್ಳಿ ಬೆಲೆ ₹ 1.35 ಲಕ್ಷ, ಚಿನ್ನದ ಬೆಲೆ ಕೈ ಸುಡುತ್ತೆ !