ಮಾಲೆ: ಭಾರತದೊಂದಿಗೆ ಮಾಲ್ಡೀವ್ಸ್ ಹೊಂದಿರುವ 34.5 ಸಾವಿರ ಕೋಟಿ ರು. ಸಾಲ ಮರುಪಾವತಿಗೆ ಕೊಂಚ ವಿನಾಯಿತಿ ನೀಡಬೇಕು ಎಂದು ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯುಜು ಅಭಿಪ್ರಾಯ ವ್ಯಕ್ತಪಡಿಸಿರುವ ಬೆನ್ನಲ್ಲೇ ಭಾರತದೊಂದಿಗೆ ಮೊಂಡುತನ ಬಿಟ್ಟು ಮಾತುಕತೆ ನಡೆಸುವಂತೆ ಭಾರತ ಪರವಾಗಿದ್ದ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಆಗ್ರಹಿಸಿದ್ದಾರೆ. ಈ ಕುರಿತು ಅಲ್ಲಿನ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ಮೊಹಮ್ಮದ್ ಮುಯಿಜು ಅವರು ಭಾರತ ಎಂದೆಂದಿಗೂ ನಮ್ಮ ಮಿತ್ರ ರಾಷ್ಟ್ರವಾಗಿದ್ದು, ನಾವು ತೆಗೆದುಕೊಂಡಿರುವ 34.5 ಸಾವಿರ ಕೋಟಿ ರು. ಸಾಲವನ್ನು(8 ಬಿಲಿಯನ್ ಮಾಲ್ಡೀವಿಯನ್ ರುಫಿಯಾ) ಮರುಪಾವತಿ ಮಾಡುವಲ್ಲಿ ಕೊಂಚ ವಿನಾಯಿತಿ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತುಸು ಹದಗೆಟ್ಟಿರುವುದು ನಿಜವಾದರೂ ನಾವು ಚೀನಾದಿಂದ 1 ಲಕ್ಷ ಕೋಟಿ ರು. ಸಾಲ (18 ಬಿಲಿಯನ್ ರುಫಿಯಾ) ಪಡೆದಿದ್ದೇವೆ ಎನ್ನುವುದನ್ನು ಮರೆಯಬಾರದು. ಈ ಹಿನ್ನೆಲೆಯಲ್ಲಿ ಭಾರತದ ಜೊತೆ ಮೊಂಡುವಾದ ಮಾಡುವುದನ್ನು ಬಿಟ್ಟು ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಮೊಹಮ್ಮದ್ ಮುಯಿಜು ಮನಸ್ಸು ಮಾಡಬೇಕು. ಅದರ ಅಗತ್ಯತೆ ಅವರಿಗೆ ಈಗ ಅರ್ಥವಾಗಿರುವಂತೆ ತೋರುತ್ತಿದೆ’ ಎಂದು ತಿಳಿಸಿದರು. ಮೊಹಮ್ಮದ್ ಮುಯಿಜು ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಒಂದಿಲ್ಲೊಂದು ರೀತಿಯಲ್ಲಿ ಭಾರತ ವಿರೋಧಿ ನಿಲುವು ತಳೆಯುತ್ತಾ ಬಂದಿದ್ದಾರೆ. ಅವರು ಮೊದಲಿಗೆ ಭಾರತದ 88 ಸೈನಿಕರನ್ನು ಹಿಂಪಡೆಯುವಂತೆ ಆದೇಶಿಸಿದರು. ಇದಕ್ಕೆ ಪ್ರತಿಯಾಗಿ ಪ್ರವಾಸೋದ್ಯಮವನ್ನೇ ಪ್ರಮುಖ ಉದ್ಯಮವಾಗಿ ಪರಿಗಣಿಸಿರುವ ಮಾಲ್ಡೀವ್ಸ್‌ಗೆ ಭಾರತ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನದ ಮೂಲಕ ತಿರುಗೇಟು ಕೊಟ್ಟು ಅವರ ಆರ್ಥಿಕ ಪರಿಸ್ತಿತಿ ಅಧಃಪತನಕ್ಕಿಳಿಯುವಂತೆ ಮಾಡಿದೆ. ಈಗ ಮೊಹಮ್ಮದ್ ಮುಯಿಜು ಭಾರತವು ತಮ್ಮ ಸಾಲಮನ್ನಾ ಮಾಡಬೇಕೆಂದು ಸ್ಥಳೀಯ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.