ಪಿಟಿಐ ನವದೆಹಲಿ
ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಅದರ ನೇತೃತ್ವದ ಕರ್ನಾಟಕ ಸರ್ಕಾರವನ್ನು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನುದಾನದ ಹೆಸರಲ್ಲಿ ದೇಶವನ್ನು ಉತ್ತರ- ದಕ್ಷಿಣ ಎಂದು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಜಾಹೀರಾತು ಕೂಡ ನೀಡುತ್ತಿದೆ. ಇಂತಹ ಕ್ರಮಗಳು ದೇಶದ ಭವಿಷ್ಯವನ್ನೇ ಹಾಳು ಮಾಡುತ್ತವೆ ಎಂದು ಹರಿಹಾಯ್ದಿದ್ದಾರೆ.
‘ನಮ್ಮ ತೆರಿಗೆ, ನಮ್ಮ ಹಣ’ ಎಂಬ ಭಾಷೆಯನ್ನು ಬಳಸಲಾಗುತ್ತಿದೆ. ಇದೆಂತಹ ಭಾಷೆ? ದೇಶವನ್ನು ಒಡೆಯಲು ಇಂತಹ ಭಾವನೆಗಳನ್ನು ವ್ಯಕ್ತಪಡಿಸಬೇಡಿ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಇಡೀ ದೇಶವನ್ನು ಜತೆಯಾಗಿ ಒಯ್ಯಲು ಪ್ರಯತ್ನಿಸಿ ಎಂದು ಸಲಹೆ ಮಾಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ದೇಶದ ಯಾವುದೋ ಒಂದು ಭಾಗದಲ್ಲಿ ಲಸಿಕೆ ತಯಾರಾದರೆ, ಅದನ್ನು ಬೇರೆ ಭಾಗಕ್ಕೆ ಕೊಡಬೇಡಿ ಎಂದು ಯಾರಾದರೂ ಹೇಳಿದರೆ? ಇದೆಂತಹ ಚಿಂತನೆ.
ರಾಷ್ಟ್ರೀಯ ಪಕ್ಷವೊಂದರಿಂದ ಇಂತಹ ಭಾಷೆ ಬರುತ್ತಿರುವುದು ಭಾರಿ ನೋವು ಉಂಟು ಮಾಡುತ್ತಿದೆ. ಇದು ಅತ್ಯಂತ ಬೇಸರದ ಸಂಗತಿ ಎಂದರು.ದೇಶ ಎಂಬುದು ನಮಗೆ ಒಂದು ತುಂಡು ಇಲ್ಲ. ಅದೊಂದು ರೀತಿ ಮಾನವರ ದೇಹ ಇದ್ದಂತೆ.
ಒಂದು ವೇಳೆ ದೇಹದ ಯಾವುದಾದರೂ ಭಾಗಕ್ಕೆ ನೋವಾದರೆ, ‘ಕಾಲಿಗೆ ಮುಳ್ಳು ಚುಚ್ಚಿದೆ, ಅದಕ್ಕೂ ನನಗೂ ಸಂಬಂಧವಿಲ್ಲ’ ಎಂದು ಕೈ ಹೇಳುವುದಿಲ್ಲ. ಹಾಗೆಯೇ ದೇಶದ ಯಾವುದಾದರೂ ಭಾಗದಲ್ಲಿ ನೋವಾದರೆ, ಪ್ರತಿಯೊಬ್ಬರೂ ಅದನ್ನು ಅನುಭವಿಸಬೇಕು ಎಂದು ಹೇಳಿದರು.
ದೇಹದ ಯಾವುದಾದರೂ ಅಂಗ ಕೆಲಸ ಮಾಡದಿದ್ದರೆ, ಇಡೀ ದೇಹವನ್ನೇ ವಿಕಲ ಎನ್ನಲಾಗುತ್ತದೆ. ಹಾಗೆಯೇ ದೇಶದ ಯಾವುದಾದರೂ ಒಂದು ಭಾಗ ಅಭಿವೃದ್ಧಿವಂಚಿತವಾದರೆ, ಇಡೀ ದೇಶ ದೇಶ ಅಭಿವೃದ್ಧಿಯಾದಂತೆ ಆಗುವುದಿಲ್ಲ. ಹೀಗಾಗಿ ದೇಶವನ್ನು ಒಂದು ಎಂದು ನೋಡಬೇಕೆ ಹೊರತು ಪ್ರತ್ಯೇಕ ಭಾಗವಾಗಿ ಅಲ್ಲ ಎಂದರು.
ಹಿಮಾಲಯದಲ್ಲಿ ಹುಟ್ಟಿ ಹರಿಯುವ ನದಿಗಳ ನೀರನ್ನು ಬೇರೆಯವರ ಜತೆ ಹಂಚಿಕೊಳ್ಳುವುದಿಲ್ಲ ಎಂದು ಯಾರಾದರೂ ಹೇಳಿದರೆ ಏನು ಕತೆ? ದೇಶಕ್ಕೆ ಏನಾಗುತ್ತದೆ? ಇದು ಯಾವಾಗ ನಿಲ್ಲುತ್ತದೆ? ಕಲ್ಲಿದ್ದಲು ಹೊಂದಿರುವ ರಾಜ್ಯಗಳು ಅದನ್ನು ಯಾರ ಜತೆಗೂ ಹಂಚಿಕೊಳ್ಳುವುದಿಲ್ಲ ಎಂದು ಹೇಳಿಬಿಟ್ಟರೆ, ದೇಶ ನಡೆಯುವುದು ಹೇಗೆ? ಈಶಾನ್ಯ ರಾಜ್ಯಗಳು ದೇಶದ ಇತರ ಭಾಗಗಳ ಜತೆ ಆಮ್ಲಜನಕ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರೆ ಏನಾಗುತ್ತದೆ ಎಂದು ಉದಾಹರಣೆ ಸಮೇತ ವಿವರಿಸಿದರು.