ಉತ್ತರಾಖಂಡದ ಉಪಚುನಾವಣಾ ಪ್ರಕ್ರಿಯೆ : ನಿರ್ಜನ ಗ್ರಾಮದಲ್ಲಿ 17 ಗಂಟೆ ಸಿಕ್ಕಿಬಿದ್ದ ಸಿಇಸಿ ರಾಜೀವ್‌

KannadaprabhaNewsNetwork |  
Published : Oct 19, 2024, 12:36 AM ISTUpdated : Oct 19, 2024, 05:07 AM IST
ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌  | Kannada Prabha

ಸಾರಾಂಶ

ಉತ್ತರಾಖಂಡದ ಉಪಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಹೋಗಿದ್ದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ 12000 ಅಡಿ ಎತ್ತರದ ನಿರ್ಜನ, ಮೈಕೊರೆವ ಚಳಿಯ ಪ್ರದೇಶದಲ್ಲಿ 17 ಗಂಟೆ ಸಿಕ್ಕಿಬಿದ್ದ ಘಟನೆ ಬುಧವಾರ ನಡೆದಿದೆ.

ಡೆಹ್ರಾಡೂನ್‌/ ಪಿತ್ತೋರಗಢ: ಉತ್ತರಾಖಂಡದ ಉಪಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಹೋಗಿದ್ದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ 12000 ಅಡಿ ಎತ್ತರದ ನಿರ್ಜನ, ಮೈಕೊರೆವ ಚಳಿಯ ಪ್ರದೇಶದಲ್ಲಿ 17 ಗಂಟೆ ಸಿಕ್ಕಿಬಿದ್ದ ಘಟನೆ ಬುಧವಾರ ನಡೆದಿದೆ. ಅದೃಷ್ಟವಶಾತ್‌ ಅದೇ ಪ್ರದೇಶದಲ್ಲಿ ಚಾರಣ ನಡೆಸುತ್ತಿದ್ದ ಇಬ್ಬರು ಬೆಂಗಳೂರಿಗರು ರಾಜೀವ್‌ ಕುಮಾರ್‌, ಕಾಪ್ಟರ್‌ನ ಪೈಲಟ್‌ ಸೇರಿದಂತೆ ಇತರೆ ಕೆಲ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.

ಏನಿದು ಪ್ರಕರಣ?:ಉತ್ತರಾಖಂಡದ ಮಿಲಾಂನಲ್ಲಿ ನಿಗದಿಯಾಗಿದ್ದ ಚುನಾವಣೆ ಸಿದ್ಧತೆ ಪರೀಕ್ಷಿಸಲು ರಾಜೀವ್‌ ಕುಮಾರ್‌, ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವಿಜಯ್‌ ಕುಮಾರ್ ಜೋಗ್‌ದಂಡೆ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಕೈಗೊಂಡಿದ್ದರು. ಆದರೆ ಹವಾಮಾನ ವೈಪರೀತ್ಯ ಕಾರಣ ರಲಾಂ ಎಂಬ ನಿರ್ಜನ ಗ್ರಾಮದಲ್ಲಿ ಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿತ್ತು.

ಈ ಸಮಯದಲ್ಲಿ ಚಳಿ ಹೆಚ್ಚಿರುವ ಕಾರಣ ರಾಲಂ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು, ಕಣಿವೆ ಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಗ್ರಾಮದಲ್ಲಿ ಯಾರೂ ಸಿಗದೇ, ಅಧಿಕಾರಿಗಳು ಮೈಕೊರೆ ಚಳಿಯಲ್ಲಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು.

ಈ ನಡುವೆ ಅದೇ ಗ್ರಾಮದ ಬಳಿ ಚಾರಣ ಕೈಗೊಂಡಿದ್ದ ಬೆಂಗಳೂರಿನ ಇಬ್ಬರು ಚಾರಣಿಗರು ಸಂಜೆ 5 ಗಂಟೆ ವೇಳೆಗೆ ಸಿಇಸಿ ಮತ್ತು ಇತರರನ್ನು ನೋಡಿ ಗುರುತಿಸಿದ್ದಾರೆ. ಜೊತೆಗೆ ತಕ್ಷಣಕ್ಕೆ ತಮ್ಮ ಬಳಿ ಇದ್ದ ಇನ್‌ಸ್ಟಂಟ್‌ ನೂಡಲ್ಸ್‌ ಮತ್ತು ಒಣಹಣ್ಣುಗಳನ್ನು ನೀಡಿ ರಕ್ಷಿಸಿದ್ದಾರೆ. ಬಳಿಕ ಸಮೀಪದಲ್ಲೇ ಇದ್ದ ಖಾಲಿ ಮನೆಯೊಂದಕ್ಕೆ ತೆರಳಿ, ಅಲ್ಲಿ ಬೆಂಕಿ ಹಾಕಿ ಚಳಿಯಿಂದ ಬಚಾವ್‌ ಆಗಲು ನೆರವು ನೀಡಿದ್ದಾರೆ.

ಈ ವಿಷಯ ಸಮೀಪದ ಗ್ರಾಮಸ್ಥರಿಗೆ ತಿಳಿದು ಅವರು ರಾತ್ರಿ 1 ಗಂಟೆಗೆ ಸಿಇಸಿ ಇದ್ದ ಸ್ಥಳಕ್ಕೆ ಬಂದು ಆಹಾರ ನೀಡಿದ್ದಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿಗಳ ಮೂಲಕ ವಿಷಯ ತಿಳಿದ ಇಂಡೋ ಟಿಬೆಟಿಯನ್‌ ಗಡಿ ಪೊಲೀಸರು ಗುರುವಾರ ಬೆಳಗ್ಗೆ 5 ಗಂಟೆಗೆ ಘಟನಾ ಸ್ಥಳಕ್ಕೆ ಧಾವಿಸಿ ಸಿಇಸಿ ಹಾಗೂ ಇತರೆ ಸಿಬ್ಬಂದಿಗಳನ್ನು ರಕ್ಷಿಸಿ ಕರೆದೊಯ್ದಿದ್ದಾರೆ.

PREV

Recommended Stories

ಕಾಶ್ಮೀರದ ರಾಜ್ಯ ಸ್ಥಾನಮಾನ ಇಂದು ವಾಪಸ್‌: ಭಾರೀ ವದಂತಿ
₹30000 ಕೋಟಿಗಾಗಿ ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಹ*: ದೂರು