ಡಿಎಂಕೆ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಮಗೆ ತಾವೇ ಚಾಟಿಯಿಂದ ಹೊಡೆದುಕೊಂಡು ಶುಕ್ರವಾರ ಪ್ರತಿಭಟಿಸಿದ್ದಾರೆ.
ಕೊಯಮತ್ತೂರು : ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಡಿ.3ರಂದು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಪೊಲೀಸರು ನಿಭಾಯಿಸುತ್ತಿರುವ ರೀತಿ ಹಾಗೂ ಡಿಎಂಕೆ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಮಗೆ ತಾವೇ ಚಾಟಿಯಿಂದ ಹೊಡೆದುಕೊಂಡು ಶುಕ್ರವಾರ ಪ್ರತಿಭಟಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಸಂಬಂಧ ದಾಖಲಾದ ಎಫ್‌ಐಆರ್ ಅನ್ನು ಪೊಲೀಸರು ಸೋರಿಕೆ ಮಾಡಿದ್ದಾರೆ ಹಾಗೂ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿದ ಅಣ್ಣಾಮಲೈ, ತಮ್ಮ ನಿವಾಸದ ಎದುರು ಹಸಿರು ಪಂಚೆ ಹಾಗೂ ಶಲ್ಯ ಉಟ್ಟು, ಕೈಯ್ಯಲ್ಲಿ ಚಾಟಿ ಹಿಡಿದು 8 ಸಲ ತಮಗೆ ತಾವೇ ಥಳಿಸಿಕೊಂಡಿದ್ದಾರೆ. ಈ ವೇಳೆ ಅವರ ಹಿಂದಿದ್ದ ಕೆಲ ಬಿಜೆಪಿ ನಾಯಕರು ಅತ್ಯಾಚಾರವನ್ನು ಖಂಡಿಸುವ ಬರಹಗಳನ್ನು ಪ್ರದರ್ಶಿಸಿದ್ದಾರೆ.
ಇದು ಅನ್ಯಾಯ ವಿರೋಧಿಸುವ ವಿಧಾನ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅನ್ಯಾಯವನ್ನು ವಿರೋಧಿಸುವ ರೀತಿಯಾಗಿದೆ. ಸಾಮಾನ್ಯ ಜನರಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಅಣ್ಣಾ ವಿವಿಯ ಅತ್ಯಾಚಾರ ಪ್ರಕರಣ ಅದರ ಒಂದು ಭಾಗವಷ್ಟೇ’ ಎಂದರು.
ಬಳಿಕ ಎಫ್‌ಐಆರ್ ಸೋರಿಕೆ ಬಗ್ಗೆ ಮಾತನಾಡಿದ ಅವರು, ‘ಪೊಲೀಸರು ಹೇಳುತ್ತಿರುವಂತೆ ತಾಂತ್ರಿಕ ಸಮಸ್ಯೆಯಿಂದ ಅದು ಸೋರಿಕೆಯಾಗಿಲ್ಲ. ಬದಲಿಗೆ ಉದ್ದೇಶಪೂರ್ವ ಅದನ್ನು ಬಹಿರಂಪಡಿಸಲಾಗಿದೆ’ ಎಂದು ಆರೋಪಿಸಿದರು.
ಈ ಮೊದಲು, ಡಿಎಂಕೆ ಸರ್ಕಾರ ಅಧಿಕಾರದಿಂದ ತೆಗೆದುಹಾಕುವ ವರೆಗೆ ತಾವು ಪಾದರಕ್ಷೆ ಧರಿಸುವುದಿಲ್ಲ ಎಂದು ಹಾಗೂ 48 ದಿನ ಉಪವಾಸ ವ್ರತ ಮಾಡುವೆ ಎಂದು ಅಣ್ಣಾಮಲೈ ಘೋಷಿಸಿದ್ದರು.
ಡಿಎಂಕೆ ವ್ಯಂಗ್ಯ:
ಅಣ್ಣಾಮಲೈ ಚಾಟಿಯೇಟು ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿರುವ ಡಿಎಂಕೆ ವಕ್ತಾರೆ ಭಾರತಿ, ‘ತಮಿಳ್ನಾಡು ರಾಜಕೀಯ ಇತಿಹಾಸದಲ್ಲಿ ಇಂಥ ಪ್ರತಿಭಟನೆ ನೋಡಿಲ್ಲ. ಸಿಎಂ ಆಗಬೇಕು ಎಂದರೆ ಚಾಟಿಯಿದ ಹೊಡೆದುಕೊಳ್ಳಿ ಎಂದು ಅಣ್ಣಾಮಲೈಗೆ ಯಾರೋ ಜ್ಯೋತಿಷಿ ಹೇಳಿರಬೇಕು. ಅದಕ್ಕೇ ಅವರು ಹೊಡೆದುಕೊಂಡಿದ್ದಾರೆ. ಅವರಿಗೆ ಮಹಿಳೆಯರ ಬಗ್ಗೆ ಅಷ್ಟುಕಾಳಜಿ ಇದ್ದರೆ ಮಣಿಪುರ ಹತ್ಯಾಕಾಂಡ ನಡೆಯುವಾಗ ಏಕೆ ಚಾಟಿಯಿಂದ ಹೊಡೆದುಕೊಳ್ಳಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.