ಕರ್ನಾಟಕದ ರಾಜ್ಯಪಾಲರಾಗಿ ಹರ್‍ಯಾಣ ಬಿಜೆಪಿ ನಾಯಕಿ ನೇಮಕ - ಗೆಹಲೋತ್‌ ಬದಲು ಸುಧಾ ಗೌರ್‍ನರ್‌

KannadaprabhaNewsNetwork |  
Published : Oct 13, 2026, 03:00 AM IST
Sudha

ಸಾರಾಂಶ

ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಹರ್ಯಾಣ ಮೂಲದ ಬಿಜೆಪಿ ನಾಯಕಿ, ಐಐಟಿಯ ಚಿನ್ನದ ಪದಕ ವಿಜೇತ, ಹುತಾತ್ಮ ಕಾರ್ಗಿಲ್‌ ಯೋಧನ ಪತ್ನಿ ಸುಧಾ ಯಾದವ್‌ ಅವರನ್ನು ನೇಮಿಸಲಾಗಿದೆ.ಹಾಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ನೇಮಕ

ನವದೆಹಲಿ: ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಹರ್ಯಾಣ ಮೂಲದ ಬಿಜೆಪಿ ನಾಯಕಿ, ಐಐಟಿಯ ಚಿನ್ನದ ಪದಕ ವಿಜೇತ, ಹುತಾತ್ಮ ಕಾರ್ಗಿಲ್‌ ಯೋಧನ ಪತ್ನಿ ಸುಧಾ ಯಾದವ್‌ ಅವರನ್ನು ನೇಮಿಸಲಾಗಿದೆ.

ಹಾಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ಜೊತೆಗೆ ತಮಿಳುನಾಡು, ಕೇರಳ, ಒಡಿಶಾ, ಉತ್ತರಾಖಂಡ ಮತ್ತು ಸಿಕ್ಕಿಂಗೂ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ.

ಮೋದಿ ಆರಿಸಿದ್ದ ನಾಯಕಿ:

ಸುಧಾ ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ಮುಖೇನ ರಾಜಕೀಯಕ್ಕೆ ಬಂದವರು. 1999ರಲ್ಲಿ ಮೋದಿ ಹರ್ಯಾಣದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ವೇಳೆ ಸುಧಾ ಅವರನ್ನು ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಚೊಚ್ಚಲ ಚುನಾವಣೆಯಲ್ಲಿಯೇ ಜಯಿಸಿದ ಸುಧಾ 1999 ರಿಂದ 2004ರ ತನಕ ಮಹೇಂದ್ರಗಢ ಕ್ಷೇತ್ರದ ಬಿಜೆಪಿ ಸಂಸದೆಯಾಗಿದ್ದರು. ಆದರೆ 2004, 2009ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಹಲವು ಹುದ್ದೆ:

ಒಂದು ಬಾರಿ ಸಂಸದೆಯಾಗಿ ಹೊಣೆ ನಿರ್ವಹಿಸಿದ ಅನುಭವ ಹೊಂದಿರುವ ಸುಧಾ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ, ಕೇಂದ್ರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದ ಜತೆಗೆ ಸಾಮಾಜಿಕ ಸೇವೆ, ಶಿಕ್ಷಣ ತಜ್ಞೆಯಾಗಿಯೂ ಗುರುತಿಸಿಕೊಂಡಿದ್ದಾರೆ.

ಸಂಸದೀಯ ಮಂಡಳಿ ಹಿರಿಮೆ:

ಬಿಜೆಪಿ ಅತ್ಯುನ್ನತ ನೀತಿ ನಿರ್ಧಾರ ಮಂಡಳಿಯಾದ ಸಂಸದೀಯ ಮಂಡಳಿಗೆ ಆಯ್ಕೆಯಾದ 2ನೇ ಮಹಿಳೆ ಎಂಬ ಹಿರಿಮೆಯೂ ಸುಧಾ ಅವರಿಗಿದೆ. ಇವರಿಗಿಂತ ಮೊದಲಿಗೆ ಈ ಸ್ಥಾನ ಅಲಂಕರಿಸಿದ್ದವರೆಂದರೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌.

ಐಐಟಿ ಚಿನ್ನದ ಪದಕ ವಿಜೇತೆ:

ಹರ್ಯಾಣದ ರೇವಾರಿ ಮೂಲದ ಸುಧಾ ಯಾದವ್‌, ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರದಲ್ಲಿ ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ಪಿಎಚ್‌ಡಿ ಪದವೀಧರೆ.

ಕಾರ್ಗಿಲ್‌ ಹುತಾತ್ಮನ ಮಡದಿ:

ಸುಧಾ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು ಗಡಿ ಭದ್ರತಾ ಪಡೆಯ ಉಪ ಕಮಾಂಡೆಂಟ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. 1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿ, ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಗೆ ಬಲಿಯಾಗಿದ್ದರು. ಇವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತು. ಸುಧಾ ಅವರಿಗೆ ಇಬ್ಬರು ಮಕ್ಕಳು.

2ನೇ ಮಹಿಳಾ ರಾಜ್ಯಪಾಲೆ:ಸುಧಾ ಯಾದವ್‌, ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ವಿ.ಎಸ್‌. ರಮಾದೇವಿ ಅವರು 1999ರ ಡಿ.2 ರಂದು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ 5 ವರ್ಷದ ಅವಧಿ ಪೂರ್ಣಕ್ಕೂ ಮುನ್ನವೇ 2002ರ ಮೇ 20 ರಂದು ಅವರ ಅಧಿಕಾರವಧಿ ಕೊನೆಗೊಂಡಿತು. ಹೀಗಾಗಿ 24 ವರ್ಷಗಳ ಬಳಿಕ ಮಹಿಳೆಯೊಬ್ಬರು ಕರ್ನಾಟಕದಲ್ಲಿ ರಾಜ್ಯಪಾಲರ ಹುದ್ದೆಗೇರಿದಂತಾಗಿದೆ.

ಇತರೆ ರಾಜ್ಯಗಳಿಗೂ ನೇಮಕ: ತಮಿಳುನಾಡು, ಕೇರಳ ಎರಡೂ ರಾಜ್ಯಗಳಿಗೆ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಅವರನ್ನು ಸದ್ಯ ಕೇರಳ ಗೌರ್ನರ್‌ ಆಗಿ ಮುಂದುವರೆಸಲಾಗಿದೆ. ತಮಿಳುನಾಡಿಗೆ ಈ ಹಿಂದೆ ಸಿಕ್ಕಿಂ ರಾಜ್ಯಪಾಲರಾಗಿದ್ದ ಪ್ರಕಾಶ್‌ ಮಾಥೂರ್‌ ಅವರ ನೇಮಕವಾಗಿದೆ. ಉಳಿದಂತೆ ಒಡಿಶಾಗೆ ಬ್ರಜ್‌ ಮೋಹನ್‌, ಉತ್ತರಾಖಂಡಕ್ಕೆ ಧಲ್‌ ಸಿಂಗ್‌ ಬಿಸೆನ್‌, ಸಿಕ್ಕಿಂಗೆ ದುಷ್ಯಂತ್‌ ಗೌತಮ್‌ ಅವರ ನೇಮಕವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೆಹಲಿ ಸರ್ಕಾರ, ಪೊಲೀಸರಿಗೆ ಸುಪ್ರೀಂ ಕಡಿವಾಣ
ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ