ಆತ್ಮಾಹುತಿ ದಾಳಿ ಹುತಾತ್ಮತೆಗೆ ದಾರಿ : ಉಗ್ರ ಡಾ। ನಬಿ ವಿಡಿಯೋ

KannadaprabhaNewsNetwork |  
Published : Nov 19, 2025, 02:00 AM ISTUpdated : Nov 19, 2025, 04:40 AM IST
Nabi

ಸಾರಾಂಶ

ಐತಿಹಾಸಿಕ ಕೆಂಪು ಕೋಟೆಯ ಬಳಿ ಕಾರಿನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಉಗ್ರ ಡಾ। ಉಮರ್‌ ನಬಿ, ಆತ್ಮಾಹುತಿ ದಾಳಿಯನ್ನು ಸಮರ್ಥಿಸಿ ಬಿಡುಗಡೆ ಮಾಡಿದ್ದ ವಿಡಿಯೋ ಈಗ ಬಹಿರಂಗವಾಗಿದೆ. ‘ಆತ್ಮಾಹುತಿ ದಾಳಿಯು ಹುತಾತ್ಮತೆಯನ್ನು ಸಾಧಿಸಲು ಇಸ್ಲಾಂನಲ್ಲಿ ಇರುವ ಮಾರ್ಗ’ ಎಂದು ಆತ ಹೇಳಿದ್ದಾನೆ.

 ನವದೆಹಲಿ: ಐತಿಹಾಸಿಕ ಕೆಂಪು ಕೋಟೆಯ ಬಳಿ ಕಾರಿನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಉಗ್ರ ಡಾ। ಉಮರ್‌ ನಬಿ, ಆತ್ಮಾಹುತಿ ದಾಳಿಯನ್ನು ಸಮರ್ಥಿಸಿ ಬಿಡುಗಡೆ ಮಾಡಿದ್ದ ವಿಡಿಯೋ ಈಗ ಬಹಿರಂಗವಾಗಿದೆ. ‘ಆತ್ಮಾಹುತಿ ದಾಳಿಯು ಹುತಾತ್ಮತೆಯನ್ನು ಸಾಧಿಸಲು ಇಸ್ಲಾಂನಲ್ಲಿ ಇರುವ ಮಾರ್ಗ’ ಎಂದು ಆತ ಹೇಳಿದ್ದಾನೆ.

ಆತನ ಮೊಬೈಲಿಂದ ವಿಡಿಯೋ ರಿಟ್ರೀವ್‌ ಮಾಡಲಾಗಿದ್ದು, ಇದರಲ್ಲಿ ಆತ ಶಾಂತವಾಗಿ ಕುಳಿತು ಸ್ಪಷ್ಟ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾನೆ.

‘ಆತ್ಮಾಹುತಿ ದಾಳಿ ಎಂಬ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಸಲಿಗೆ ಅದು ಇಸ್ಲಾಂ ಧರ್ಮದ ಪ್ರಕಾರ ಹುತಾತ್ಮರಾಗಲು ಇರುವ ಮಾರ್ಗ. ಆದರೀಗ ಅದರ ಬಗ್ಗೆ ಹಲವು ವಿರೋಧಾಭಾಸಗಳು ಮತ್ತು ವಾದಗಳು ಹುಟ್ಟಿಕೊಂಡಿವೆ. ಆತ್ಮಾಹುತಿಯ ಮೂಲಕ ಹುತಾತ್ಮನಾಗುವ ಕಾರ್ಯಾಚರಣೆಯಲ್ಲಿ ತೊಡಗಿರುವವನು, ತಾನು ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ಸಾಯುತ್ತೇನೆಂದು ಭಾವಿಸಿರುತ್ತಾನೆ. ಆದರೆ ಸಾವನ್ನು ಊಹಿಸಲಾಗದು. ಯಾರೂ ಎಲ್ಲಿ ಯಾವಾಗ ಸಾಯುತ್ತೇನೆ ಎಂಬುದನ್ನು ಊಹಿಸಲು ಆಗದು. ಅದು ವಿಧಿಲಿಖಿತ’ ಎಂದು ಸಮರ್ಥಿಸಿಕೊಂಡಿದ್ದಾನೆ.

ಇದು ದೆಹಲಿ ಸ್ಫೋಟ ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದ್ದು, ಆತ ಮಾಡಿದ್ದು ಆತ್ಮಾಹುತಿ ದಾಳಿ ಎಂಬ ವಾದಕ್ಕೆ ಪುಷ್ಟಿ ನೀಡಿದೆ. ಅಲ್ಲದೆ, ಉಗ್ರರಾಗುವಂತೆ ಯುವಕರ ಬ್ರೈನ್‌ವಾಶ್‌ ಹೇಗೆ ಮಾಡಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಇತ್ತೀಚೆಗಷ್ಟೇ ಬಂಧಿತನಾಗಿದ್ದ ದಾನಿಶ್‌ ಎಂಬಾತ, ‘ನನಗೂ ಆತ್ಮಾಹುತಿ ದಾಳಿಕೋರನಾಗುವಂತೆ ಸ್ವತಃ ನಬಿ ಬ್ರೈನ್‌ವಾಷ್‌ ಮಾಡಿದ್ದ. ಆದರೆ ಇಸ್ಲಾಂ ಪ್ರಕಾರ ಅದು ಪಾಪ ಎಂದು ನಾನು ನಿರಾಕರಿಸಿದೆ’ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದ.  

ಮುಸ್ಲಿಂ ಸಂಘಟನೆ ವಿರೋಧ:

ಆತ್ಮಾಹುತಿ ದಾಳಿಯ ಬಗ್ಗೆ ಉಗ್ರ ಉಮರ್‌ನ ವ್ಯಾಖ್ಯಾನವನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ವಿರೋಧಿಸಿದ್ದಾರೆ. ಜತೆಗೆ, ‘ಇಸ್ಲಾಂನ ಮೂಲಭೂತ ನಂಬಿಕೆಗಳಿಗೆ ವಿರುದ್ಧವಾಗಿದೆ. ಇದು ಹರಾಂ’ ಎಂದು ಸ್ಪಷ್ಟನೆ ನೀಡಿದ್ದರು.

ಗುಜರಾತಿನಲ್ಲಿ ಬಂಧಿತ ಆಗಿದ್ದ ಉಗ್ರನಿಗೆ ಜೈಲಲ್ಲಿ ಥಳಿತ

ಅಹಮದಾಬಾದ್‌: ರೈಸಿನ್‌ ರಾಸಾಯನಿಕ ಬಳಸಿ ಕೆಮಿಕಲ್‌ ಬಾಂಬ್‌ ತಯಾರಿಸಿ ದೇಶದಲ್ಲಿ ಸಮೂಹ ವಿನಾಶಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಕಳೆದ ವಾರ ಗುಜರಾತಿನಲ್ಲಿ ಬಂಧಿತನಾಗಿದ್ದ ಉಗ್ರ ವೈದ್ಯ ಅಹ್ಮದ್‌ ಮೊಹಿಯುದ್ದಿನ್‌ ಸೈಯದ್‌ನನ್ನು ಸಾಬರಮತಿ ಜೈಲಿನಲ್ಲಿ ಸಹ ಕೈದಿಗಳು ಥಳಿಸಿದ್ದಾರೆ.ಮೂವರು ವಿಚಾರಣಾಧೀನ ಕೈದಿಗಳೊಂದಿಗೆ ಅಹ್ಮದ್‌ ಗಲಾಟೆ ಮಾಡಿಕೊಂಡಿದ್ದಾನೆ. ಈ ವೇಳೆ ಸಹ ಕೈದಿಗಳು ಉಗ್ರನಿಗೆ ಥಳಿಸಿದ್ದಾರೆ. ಆತ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಕ್ಯಾಷ್‌ ಕೊಟ್ಟು ಬ್ರೆಜಾ ಕಾರು ಖರೀದಿಸಿದ್ದ ಡಾ. ಶಾಹೀನ್‌, ಮುಜಮ್ಮಿಲ್‌

ನವದೆಹಲಿ: ದಿಲ್ಲಿ ಸ್ಫೋಟದ ರೂವಾರಿಗಳಾದ ಉಗ್ರ ಡಾ. ಶಾಹೀನ್‌ ಮತ್ತು ಡಾ. ಮುಜಮ್ಮಿಲ್‌ ಶಕೀಲ್‌, ಮಾರುತಿ ಸುಜುಕಿ ಬ್ರಿಜಾ ಕಾರು ಖರೀದಿಗೆ ಚೆಕ್‌, ಕಾರ್ಡ್‌ ಬಳಸದೆ, ಕೇವಲ ನಗದು ಕೊಟ್ಟು ಖರೀದಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ಕಾರು ಬಾಂಬ್‌ ತಯಾರಿ ಮತ್ತು ಸರಬರಾಜಿಗೆ ಬಳಸುತ್ತಿದ್ದ 32 ಕಾರುಗಳಲ್ಲಿ ಒಂದಾಗಿದೆ ಎನ್ನಲಾಗಿದೆ.ಈ ಸಂಬಂಧ ಶಾಹೀನ್‌ ಮತ್ತು ಮುಜಮ್ಮಿಲ್‌ ಕಾರು ಖರೀದಿಸುತ್ತಿದ್ದ ಸಿಟಿಟೀವಿ ದೃಶ್ಯಗಳು ಬಹಿರಂಗವಾಗಿದ್ದು, ಸೆ.25ರಂದು ಕಾರಿನ ಒಟ್ಟು ಮೌಲ್ಯದಷ್ಟು ಹಣ ಸಹ ನಗದು ರೂಪದಲ್ಲಿಯೇ ಕೊಟ್ಟು ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಮುಖಾಂತರ ಹಣಕಾಸು ಮೂಲಗಳನ್ನು ಮುಚ್ಚಿಡುವ ಯತ್ನಿಸಿದ್ದರು ಎನ್ನಲಾಗಿದೆ.

ಬ್ರೆಜಾ ಕಾರಿಗೆ ಅವುಗಳ ವಿವಿಧ ಮಾದರಿ ಆಧರಿಸಿ ದೆಹಲಿಯಲ್ಲಿ 8ರಿಂದ 13 ಲಕ್ಷ ರು.ವರೆಗೆ ಬೆಲೆಯಿದೆ.

ಟೆರರ್ ಡಾಕ್ಟರ್‌ಗಳು ಇದ್ದ ಅಲ್‌ ಫಲಾ ವಿವಿ ಚೇರ್ಮನ್‌ ಬಂಧನ 

ನವದೆಹಲಿ: ದೆಹಲಿ ಸ್ಫೋಟ ನಡೆಸಿದ ಟೆರರ್‌ ಡಾಕ್ಟರ್‌ಗಳು ಕೆಲಸ ಮಾಡುತ್ತಿದ್ದ ಹರ್ಯಾಣದ ಅಲ್‌ ಫಲಾ ವೈದ್ಯಕೀಯ ವಿಶ್ವವಿದ್ಯಾಲಯದ ಚೇರ್ಮನ್‌ ಜಾವೇದ್ ಅಹ್ಮದ್ ಸಿದ್ದಿಕಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಎನ್‌ಐಎ ಮತ್ತು ದೆಹಲಿ ಪೊಲೀಸರು ದಾಖಲಿಸಿಕೊಂಡ ಎಫ್‌ಐಆರ್‌ ಆಧರಿಸಿ, ಇ.ಡಿ. ಅಧಿಕಾರಿಗಳು ಮಂಗಳವಾರ ಬೆಳಗ್ಗೆ 5.15ರಿಂದ 25ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಅದರಲ್ಲಿ ಹರ್ಯಾಣದ ಅಲ್‌ ಫಲಾ ವಿವಿ, ದೆಹಲಿಯಲ್ಲಿನ ವಿವಿಧ ಟ್ರಸ್ಟಿಗಳ ನಿವಾಸಗಳೂ ಸೇರಿವೆ. ನಕಲಿ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣಕಾಸು ಚಟುವಟಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ವಸತಿ ಸೌಕರ್ಯದಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ದಾಳಿ ಮಾಡಿದ ಇ.ಡಿ. ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ಮುಖ್ಯಸ್ಥ ಜಾವೇದ್‌ನನ್ನು ಸಹ ಬಂಧಿಸಿದೆ.

‘ಬಾಂಬ್‌ ತಯಾರಿಕಾ’ ವರದಿಗಳ ಮೇಲೆ ಕೇಂದ್ರ ಗರಂ 

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ದೃಶ್ಯಗಳನ್ನು ಪ್ರಸಾರ ಮಾಡುವುದರ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಎಲ್ಲಾ ಖಾಸಗಿ ಟೀವು ವಾಹಿನಿಗಳಿಗೆ ಸಲಹೆ ನೀಡಿದೆ.ದೆಹಲಿಯ ಕೆಂಪು ಕೋಟೆ ಬಳಿ ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ ನಂತರ, ಕೆಲವು ದೂರದರ್ಶನ ವಾಹಿನಿಗಳು ಸ್ಫೋಟಕಗಳನ್ನು ತಯಾರಿಸುವುದು ಹೇಗೆ ಎಂಬ ವರದಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ.

PREV
Read more Articles on

Recommended Stories

ಮತ್ತೆ ಮೋದಿ ಬಗ್ಗೆ ತರೂರ್‌ ಪ್ರಶಂಸೆ : ಕಾಂಗ್ರೆಸ್‌ ಕೆಂಗಣ್ಣು ಸಂಭವ
ಶಬರಿಮಲೇಲಿ ಅವ್ಯವಸ್ಥೆ ಭಕ್ತರ ಭಾರೀ ಪರದಾಟ