ಸಮರ್ಥಿಸುವ ಸಾಕ್ಷ್ಯ ಒದಗಿಸುವಲ್ಲಿ ತನಿಖಾಧಿಕಾರಿಗಳು ವಿಫಲ ಅಲಹಾಬಾದ್: ನಿಠಾರಿ ಕೊಲೆ ಕೇಸ್‌ನ ಆರೋಪಿಗಳಾದ ಮೊನಿಂದರ್ ಸಿಂಗ್ ಪಂದೇರ್ ಹಾಗೂ ಸುರೇಂದ್ರ ಕೋಲಿ ಅವರ ಮೆಲಿನ ಆರೋಪ ಸಾಬೀತುಪಡಿಸುವಲ್ಲಿ ತನಿಖಾ ತಂಡದ ವೈಫಲ್ಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾಕ್ಷ್ಯ ಸಂಗ್ರಹಣೆ ವೇಳೆ ಕನಿಷ್ಠ ಮಾನದಂಡಗಳನ್ನೂ ನಿರ್ಲಜ್ಜವಾಗಿ ಉಲ್ಲಂಘಿಸಲಾಗಿದೆ. ಇದು ಸಾರ್ವಜನಿಕರು ವ್ಯವಸ್ಥೆ ಬಗ್ಗೆ ಇಟ್ಟಿರುವ ವಿಶ್ವಾಸಕ್ಕೆ ದ್ರೋಹವಲ್ಲದೇ ಮತ್ತೇನೂ ಅಲ್ಲ ಎಂದು ನ್ಯಾಯಪೀಠ ಕಿಡಿಕಾರಿದೆ. ಸಂತ್ರಸ್ತರ ನಾಪತ್ತೆ, ಹತ್ಯೆಯನ್ನು ತನಿಖೆ ನಡೆಸಿದ ರೀತಿ ತೀವ್ರ ಬೇಸರ ತರಿಸಿದೆ. ಇಡೀ ಪ್ರಕರಣವನ್ನು ಕೇವಲ ಸುರೇಂದ್ರ ಕೋಲಿಯ ಸಾಕ್ಷ್ಯ ಆಧರಿಸಿ ಮುನ್ನಡೆಸಲಾಗಿದೆ. ಆತನ ಹೇಳಿಕೆ ಆಧರಿಸಿ ವಶಪಡಿಸಿಕೊಳ್ಳಲಾದ ಸಾಕ್ಷ್ಯಗಳ ಕುರಿತು ತನಿಖಾ ವರದಿಯಲ್ಲಿ ಸೂಕ್ತ ಪ್ರಸ್ತಾಪವನ್ನೇ ಮಾಡಿಲ್ಲ. ಬಂಧನ, ಸಾಕ್ಷ್ಯ ಸಂಗ್ರಹ, ತಪ್ಪೊಪ್ಪಿಕೆ ಹೇಳಿಕೆ ದಾಖಲು ಹೀಗೆ ಪ್ರತಿ ವಿಷಯದಲ್ಲೂ ತನಿಖಾಧಿಕಾರಿಗಳು ಉದಾಸೀನ ತೋರಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಪಂದೇರ್ ಮನೆಯಿಂದ ಹೊರಗೆ ಮಾತ್ರವೇ ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ಅಂಗಾಂಗ ಕಳ್ಳತನ ಕೋನದ ಬಗ್ಗೆ ಉನ್ನತ ಮಟ್ಟದ ಸಮಿತಿ ಪ್ರಸ್ತಾಪಿಸಿದ್ದರೂ ಆ ಬಗ್ಗೆಯೂ ತನಿಖೆ ನಡೆಸಿಲ್ಲ ಎಂದು ಕೋರ್ಟ್ ಕಿಡಿಕಾರಿದೆ.