ನವದೆಹಲಿ: ಕರಾವಳಿ ಕಾವಲು ಪಡೆಯಲ್ಲಿ ಮಹಿಳಾ ಸಿಬ್ಬಂದಿಗೆ ಕಾಯಂ ಹುದ್ದೆ ನೀಡಲು ಹಿಂದು ಮುಂದು ನೋಡುತ್ತಿದ್ದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಮಹಿಳೆಯರಿಗೆ ಕಾಯಂ ಹುದ್ದೆ (ಪರ್ಮನಂಟ್ ಕಮಿಷನ್) ನೀಡುವಂತೆ ಸೂಚಿಸಿದೆ.
‘ಈ ಯುಗದಲ್ಲೂ ಮಹಿಳೆಯರ ಕಡೆಗೆ ತಾರತಮ್ಯದ ನೀತಿ ಸರಿಯಲ್ಲ. ಸೇನೆ ಮತ್ತು ನೌಕಾಪಡೆಯಲ್ಲಿ ಮಹಿಳೆಯರಿಗೆ ಕಾಯಂ ಹುದ್ದೆ ನೀಡಿದ ಮೇಲೆ ಕರಾವಳಿ ಕಾವಲು ಪಡೆಯಲ್ಲಿ ನೀಡಲು ಮೀನಮೇಷ ಏಕೆ?’ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಾಲಯ, ‘ಒಂದು ವೇಳೆ ನೀವು ಕಾಯ್ದೆ ಜಾರಿ ಮಾಡದೇ ಇದಲ್ಲಿ ನಾವೇ ಮಾಡುತ್ತೇವೆ’ ಎಂದು ಎಚ್ಚರಿಸಿದೆ.
ಏನಿದು ಪ್ರಕರಣ?
ಕರಾವಳಿ ಕಾವಲು ಪಡೆಯಲ್ಲಿ ಮಹಿಳೆಯರಿಗೆ ಕಾಯಂ ಹುದ್ದೆ (ಪರ್ಮನಂಟ್ ಕಮಿಷನ್) ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವ ಬಗ್ಗೆ ಪ್ರಿಯಾಂಕಾ ತ್ಯಾಗಿ ಎಂಬ ಕರಾವಳಿ ನೌಕಾಪಡೆಯ ಅಧಿಕಾರಿ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಕದ ಬಡಿದಿದ್ದರು.
ಪೆ.19ರಂದು ಇದೇ ಪ್ರಕರಣದ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ‘ಸೇನೆ ಮತ್ತು ನೌಕಾಪಡೆಗಳೇ ಬೇರೆ. ಕರಾವಳಿ ಪಡೆಯೇ ಬೇರೆ.
ಇಲ್ಲಿ ಮಹಿಳೆಯರಿಗೆ ಕಾಯಂ ಹುದ್ದೆ ನೀಡಲಾಗದು’ ಎಂದಿದ್ದರು.ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ‘ಕರಾವಳಿ ಕಾವಲು ಪಡೆಯಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಏಕೆ? ಕರಾವಳಿ ಕಾವಲು ಪಡೆಗೆ ಮಹಿಳೆಯರ ಇರುವಿಕೆಯನ್ನು ನೀವೇಕೆ ವಿರೋಧಿಸುತ್ತಿದ್ದೀರಿ? ಮಹಿಳೆಯರು ಗಡಿ ಕಾಯಬಲ್ಲರು ಎಂದಾದಲ್ಲಿ ಬೀಚ್‌ಗಳನ್ನೂ ಕಾಯಬಲ್ಲದು.
ನೀವು ನಾರಿ ಶಕ್ತಿಯ ಬಗ್ಗೆ ಮಾತನಾಡುತ್ತೀರಿ, ಹಾಗಿದ್ದರೆ ಅದನ್ನು ಇಲ್ಲಿ ತೋರಿಸಿ’ ಎಂದು ಕಿಡಿಕಾರಿದ್ದರು.‘ಜೊತೆಗೆ, ಕರಾವಳಿ ಕಾವಲು ಪಡೆಗೆ ಮಹಿಳೆಯರನ್ನೂ ವಿರೋಧಿಸುವ ಮೂಲಕ ಪುರುಷಪ್ರಧಾನ ಮನಸ್ಥಿತಿಯನ್ನು ತೋರಿಸುತ್ತಿದ್ದೀರಿ.
ನೌಕಾಪಡೆಯಲ್ಲೇ ಮಹಿಳೆಯರು ಇದ್ದ ಮೇಲೆ ಕರಾವಳಿ ಕಾವಲು ಪಡೆಗೆ ಸೇರ್ಪಡೆಗೆ ತೊಂದರೆ ಏನು? ಮಹಿಳೆಯರು ಈ ಪಡೆಯ ಭಾಗವಾಗಲು ಆಗದು ಎಂಬ ದಿನಗಳೆಲ್ಲಾ ಹೋದವು.
ಈ ಕುರಿತು ನೀವು ಕಾಯ್ದೆ ಜಾರಿ ಮಾಡದೇ ಹೋದಲ್ಲಿ ನಾವು ಮಾಡುತ್ತೇವೆ’ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿ ಪ್ರಕರಣದ ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿತು.
ಈ ಹಿಂದೆ, ಸೇನಾಪಡೆಗಳಲ್ಲಿ ಮಹಿಳೆಯರಿಗೆ ಕಾಯಂ ಹುದ್ದೆ ನೀಡಲು ಅವರಿಗಿರುವ ದೈಹಿಕ ಸಾಮರ್ಥ್ಯದ ಇತಿಮಿತಿಗಳು ಮತ್ತು ಸಾಮಾಜಿಕ ಕಟ್ಟುಪಾಡು ಅಡ್ಡಿಯಾಗಿವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿದ್ದ ಸುಪ್ರೀಂಕೋರ್ಟ್, ಇಂಥ ವಾದಗಳು ಸಮಾನತೆಯ ತತ್ವನ್ನು ಉಲ್ಲಂಘಿಸುತ್ತವೆ ಮತ್ತು ತಾರತಮ್ಯ ನೀತಿಯಾಗಿದೆ ಎಂದು ಹೇಳಿತ್ತು.
ಅಲ್ಲದೆ ಮಹಿಳೆಯರಿಗೂ ಕಾಯಂ ಹುದ್ದೆ ನೀಡಬೇಕು ಎಂದು 2020ರಲ್ಲಿ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ 2021ರಲ್ಲಿ ಸುಪ್ರೀಂಕೋರ್ಟ್ ಸೂಚನೆ ಅನ್ವಯ ಕೇಂದ್ರ ಸರ್ಕಾರ ಮಹಿಳೆಯರಿಗೂ ಸೇನೆಯಲ್ಲಿ ಕಾಯಂ ಹುದ್ದೆ ನೀಡಿತ್ತು.ಪರ್ಮನೆಂಟ್ ಕಮಿಷನ್, ಶಾರ್ಟ್ ಸರ್ವೀಸ್
ಸೇನೆಗೆ ಸೇರುವವರಿಗೆ ಎರಡು ರೀತಿಯ ಅವಕಾಶಗಳಿರುತ್ತವೆ. ಪರ್ಮನೆಂಟ್ ಕಮಿಷನ್ ಮೂಲಕ ನೇಮಕಗೊಂಡವರು 60 ವರ್ಷದವರೆಗೆ ಸೇನೆಯಲ್ಲಿ ಮುಂದುವರೆಯಬಹುದು. ಅವರಿಗೆ ವಿವಿಧ ಪದೋನ್ನತಿ ಅವಕಾಶವಿರುತ್ತದೆ. ಶಾರ್ಟ್ ಸವೀಸ್ ಆಯ್ಕೆ ಮಾಡಿಕೊಂಡವರು 10 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬಹುದು.
ಬಳಿಕ ಅದನ್ನು ಮತ್ತೆ ಗರಿಷ್ಠ 4 ವರ್ಷ ವಿಸ್ತರಿಸಿಕೊಳ್ಳಬಹುದು. ಅದಾದ ಬಳಿಕ ನಿವೃತ್ತಿ ಹೊಂದಬಹುದು ಅಥವಾ ಪರ್ಮನೆಂಟ್ ಕಮಿಷನ್ ಆಯ್ಕೆ ಮಾಡಿಕೊಳ್ಳಬಹುದು.
ಮೊದಲಿಗೆ ಈ ಪರ್ಮನೆಂಟ್ ಅವಕಾಶ ಪುರುಷರಿಗೆ ಮಾತ್ರ ಇತ್ತು. ಸುಪ್ರೀಂಕೋರ್ಟ್ ಆದೇಶದ ಬಳಿಕ 2021ರಲ್ಲಿ ಈ ಸೌಲಭ್ಯವನ್ನು ಸೇನೆಯ ಮಹಿಳೆಯರಿಗೂ ವಿಸ್ತರಿಸಲಾಯಿತು. ಆದರೆ ಕರಾವಳಿ ಕಾವಲು ಪಡೆ ಮಾತ್ರ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್ ನೀಡಲು ನಿರಾಕರಿಸಿತ್ತು.
ಏನಿದು ವಿವಾದ?
ಪ್ರಿಯಾಂಕಾ ತ್ಯಾಗಿ ಎಂಬ ಎಸ್‌ಎಸ್‌ಎ (ಶಾರ್ಟ್ ಸರ್ವೀಸ್ ಅಪಾಯಿಂಟ್‌ಮೆಂಟ್) ಅಧಿಕಾರಿ ಕಳೆದ ಡಿಸೆಂಬರ್‌ನಲ್ಲಿ ಕರಾವಳಿ ಕಾವಲು ಪಡೆಯಲ್ಲಿ ತಮ್ಮ 14 ವರ್ಷಗಳ ಸೇವೆ ಮುಕ್ತಾಯಗೊಳಿಸಿದ್ದರು.
ಬಳಿಕ ಅವರಿಗೆ ಪರ್ಮನೆಂಟ್ ಕಮಿಷನ್ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.