1991ರ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ : ಮಂದಿರ, ಮಸೀದಿ ಸರ್ವೇಗೆ ಸುಪ್ರೀಂ ತಡೆ

KannadaprabhaNewsNetwork |  
Published : Dec 13, 2024, 12:48 AM ISTUpdated : Dec 13, 2024, 04:23 AM IST
1991ರ ಪೂಜಾ ಸ್ಥಳ ಕಾಯ್ದೆ | Kannada Prabha

ಸಾರಾಂಶ

1991ರ ಪೂಜಾ ಸ್ಥಳ ಕಾಯ್ದೆಯ ಕೆಲವು ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌, ಮಸೀದಿ ಸೇರಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಧಾರ್ಮಿಕ ಸ್ಥಳಗಳ ಸಮೀಕ್ಷೆಗಳಿಗೆ ತಾನು ಮುಂದಿನ ಆದೇಶ ನೀಡುವವರೆಗೂ ಗುರುವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ

 ನವದೆಹಲಿ : 1991ರ ಪೂಜಾ ಸ್ಥಳ ಕಾಯ್ದೆಯ ಕೆಲವು ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌, ಮಸೀದಿ ಸೇರಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಧಾರ್ಮಿಕ ಸ್ಥಳಗಳ ಸಮೀಕ್ಷೆಗಳಿಗೆ ತಾನು ಮುಂದಿನ ಆದೇಶ ನೀಡುವವರೆಗೂ ಗುರುವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ

ಅಲ್ಲದೆ, ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ 4 ವಾರ ಹಾಗೂ ಕೇಂದ್ರದ ಅನಿಸಿಕೆಗೆ ಪ್ರತಿಕ್ರಿಯೆ ನೀಡಲು ಉಳಿದ ಪಕ್ಷಗಾರರಿಗೆ ಆ ನಂತರದ 4 ವಾರಗಳ ಕಾಲಾವಕಾಶವನ್ನು ಅದು ನೀಡಿದೆ.

‘ಪೂಜಾ ಸ್ಥಳ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸುವ ತನಕ ಯಾವುದೇ ನಿರ್ಧಾರಕ್ಕೆ ಬರಲಾಗದು’ ಎಂದು ಪ್ರಕರಣದ ವಿಚಾರಣೆಗೆ ರಚನೆಯಾಗಿರುವ ಮುಖ್ಯ ನ್ಯಾ। ರಾಜೀವ್‌ ಖನ್ನಾ, ಸಂಜಯ್‌ ಕುಮಾರ್‌, ಕೆ.ವಿ. ವಿಶ್ವನಾಥನ್‌ ಅವರ ಪೀಠ ಹೇಳಿದೆ.

ಇದೇ ವೇಳೆ, ‘ಬಾಕಿ ಇರುವ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್‌ನ ಶಾಹಿ ಜಾಮಾ ಮಸೀದಿ, ಅಜ್ಮೇರ್‌ ದರ್ಗಾ ಪ್ರಕರಣಗಳ ಕುರಿತು ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶ ನೀಡಬಾರದು. ಹೊಸ ಪ್ರಕರಣಗಳನ್ನು ನೊಂದಾಯಿಸಿ ವಿಚಾರಣೆ ನಡೆಸಬಾರದು’ ಎಂದು ಕೆಳ ಹಂತದ ನ್ಯಾಯಾಲಯಗಳಿಗೆ ಸೂಚಿಸಲಾಗಿದೆ.

ಆಗ ಉಳಿದ ಪ್ರಕರಣಗಳಿಗೆ ತಡೆ ನೀಡುವುದನ್ನು ಹಿಂದೂ ಪರ ವಕೀಲರು ವಿರೋಧಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಸುಪ್ರೀಂ ಕೋರ್ಟು ವಿಚಾರಣೆ ನಡೆಸುತ್ತಿರುವ ಕಾರಣ ಉಳಿದ ಕೇಸುಗಳಿಗೂ ತಡೆ ನೀಡುವುದು ಸಹಜ’ ಎಂದು ಸಮರ್ಥಿಸಿಕೊಂಡಿತು.

ಸುಪ್ರೀಂ ಕೋರ್ಟ್‌ ಹೊರಡಿಸಿರುವ ಈ ಆದೇಶವನ್ನು ಮುಸ್ಲಿಂ ಪಕ್ಷಗಾರರು ಸ್ವಾಗತಿಸಿದ್ದಾರೆ.

ಸುಪ್ರೀಂನಲ್ಲಿ ವಿಚಾರಣೆಯಾಗಲಿರುವ 18 ಅರ್ಜಿಗಳ ಪೈಕಿ ಒಂದನ್ನು ಬಿಜೆಪಿ ನಾಯಕ ಸುಬ್ರಹ್ಮಣಿಯನ್‌ ಸ್ವಾಮಿ ಹಾಗೂ ಇನ್ನೊಂದನ್ನು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದು, ಮುಖ್ಯ ಅರ್ಜಿಯನ್ನು 4 ವರ್ಷಗಳ ಹಿಂದೆಯೇ ಸಲ್ಲಿಸಲಾಗಿತ್ತು. ಇದರೊಂದಿಗೆ, ಸ್ವಾತಂತ್ರ್ಯಾನಂತರ ಧಾರ್ಮಿಕ ಸ್ಥಳಗಳನ್ನು ಮರುವಶಪಡಿಸಿಕೊಳ್ಳುವ ಅಥವಾ ಅವುಗಳ ರೂಪವನ್ನು ಬದಲಿಸಲು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ತಡೆಯಲೂ ಕಾಯ್ದೆ ಜಾರಿಗೆ ತರುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈಗ ಈ ಅರ್ಜಿಗಳ ವಿಚಾರಣೆಯೂ ನಡಯಲಿದೆ. ಇವುಗಳನ್ನು ಎನ್‌ಸಿಪಿ (ಶರದ್‌ ಬಣ) ಜಿತೇಂದ್ರ ಅಗರ್ವಾಲ್‌, ಆರ್‌ಜೆಡಿಯ ಮನೋಜ್‌ ಕುಮಾರ್‌ ಝಾ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಹಾಗೂ ಸಂಸದರು ಸಲ್ಲಿಸಿದ್ದಾರೆ.

ಮೂಲ ಅರ್ಜಿಯಲ್ಲಿ ಏನಿದೆ?:

‘1947ರ ಆ.15ರಂದು ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳಗಳ ಮೂಲಸ್ವರೂಪನ್ನು (ಅಯೋಧ್ಯೆ ಹೊರತುಪಡಿಸಿ) ಬದಲಿಸಬಾರದು ಎಂದು 1991ರ ಪೂಜಾ ಸ್ಥಳ ಕಾಯ್ದೆ ಹೇಳುತ್ತದೆ. ಆದರೆ ಈ ಕಾಯ್ದೆಯಿಂದ ಸ್ವರೂಪ ಬದಲಿಸಲು ಕೋರಿ ಅರ್ಜಿಗಳನ್ನು ಸಲ್ಲಿಸಲು ಆಗುತ್ತಿಲ್ಲ. ಇದರಿಂದ ಪೂಜಾ ಸ್ಥಳಗಳ ಮೇಲೆ ಹಕ್ಕು ಸಾಧಿಸಲು ಆಗುತ್ತಿಲ್ಲ ಹಾಗೂ ನ್ಯಾಯ ಕೇಳುವ ಹಕ್ಕಿಗೆ ಧಕ್ಕೆ ಬರುತ್ತಿದೆ. ಹೀಗಾಗಿ ಕಾಯ್ದೆಯಲ್ಲಿ ಬದಲಾವಣೆ ಮಾಡಬೇಕು’ ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಸೇರಿ ಹಲವರು ಅರ್ಜಿ ಸಲ್ಲಿಸಿದ್ದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ