ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಪೋಷಕರು ಬಿಡಬೇಕು
ಕೋಚಿಂಗ್ ಸೆಂಟರ್ ಮೇಲೆ ನ್ಯಾಯಾಂಗ ನಿಯಂತ್ರಣ ಹೇರಲಾಗದು: ನ್ಯಾಯಪೀಠನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇಂಥ ಘಟನೆಗೆ ಮಕ್ಕಳ ಮೇಲೆ ಪೋಷಕರು ಹೇರುವ ಒತ್ತಡವೇ ಕಾರಣ ಎಂದು ಟೀಕಿಸಿದೆ. ಅಲ್ಲದೆ ‘ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಮೇಲೆ ಕಡಿವಾಣ ಹಾಕುವುದು ನ್ಯಾಯಾಂಗದ ಕೆಲಸವಲ್ಲ. ಸರ್ಕಾರಗಳೇ ಈ ಬಗ್ಗೆ ಗಮನ ಹಸಿಸಬೇಕು’ ಎಂದು ಸ್ಪಷ್ಟಪಡಿಸಿದೆ.‘ದೇಶಾದ್ಯಂತ ಅಣಬೆ ರೀತಿಯಲ್ಲಿ ತಲೆ ಏಳುತ್ತಿರುವ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಮೇಲೆ ಕಡಿವಾಣ ಹೇರಬೇಕು. ಕಡಿವಾಣ ಹೇರದ ಕಾರಣ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮುಂಬೈ ಮೂಲದ ಅನಿರುದ್ಧ ನಾರಾಯಣ ಮಲ್ಪಾನಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ, ‘ಇದು ಸುಲಭದ ಮಾತಲ್ಲ. ಮಕ್ಕಳಿಗಿಂತ ಇಲ್ಲಿ ಪೋಷಕರ ಒತ್ತಡವೇ ಇಂಥ ಬೆಳವಣಿಗೆಗೆ ಕಾರಣವಾಗುತ್ತಿದೆ. ಹೀಗಾಗಿ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರುವುದನ್ನು ಬಿಡಬೇಕು’ ಎಂದು ಪೋಷಕರಿಗೆ ಕಿವಿಮಾತು ಹೇಳಿತು.ಇದೇ ವೇಳೆ ‘ನಾವ್ಯಾರೂ ಕೋಚಿಂಗ್ ಸೆಂಟರ್‌ಗಳು ಇರಬೇಕು ಎಂದು ಬಯಸುವುದಿಲ್ಲ, ಆದರೆ ಶಾಲೆಗಳ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ. ವಿದ್ಯಾರ್ಥಿಗಳ ನಡುವೆ ತೀವ್ರ ಸ್ಪರ್ಧೆ, ಅವರನ್ನು ಅನಿವಾರ್ಯವಾಗಿ ಕೋಚಿಂಗ್ ಸೆಂಟರ್ ಸೇರುವಂತೆ ಮಾಡುತ್ತಿದೆ. ಆದರೆ ಈ ವಿಷಯದಲ್ಲಿ ನಾವು ಅಸಹಾಯಕರು. ಕೋಚಿಂಗ್ ಸೆಂಟರ್‌ಗಳ ಮೇಲೆ ನ್ಯಾಯಾಂಗ ನಿರ್ಬಂಧ ಹೇರಲಾಗದು. ಬೇಕಿದ್ದರೆ ಅರ್ಜಿದಾರರು, ತಮ್ಮ ಅರ್ಜಿಯಲ್ಲಿನ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಬಹುದು’ ಎಂದು ಹೇಳಿತು. ಬಳಿಕ ಸೂಕ್ತ ವೇದಿಕೆಯ ಮುಂದೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಮನವಿ ಮಾಡಿದ ಮಲ್ಪಾನಿ ಅವರಿಗೆ ಅರ್ಜಿ ಹಿಂದಕ್ಕೆ ಪಡೆಯಲು ಅವಕಾಶ ಮಾಡಿಕೊಟ್ಟಿತು.ಅರ್ಜಿಯಲ್ಲಿ ಏನು ಮನವಿ?:ದೇಶಾದ್ಯಂತ ಕೋಚಿಂಗ್ ಸೆಂಟರ್‌ಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. 14ರ ವಯೋಮಾನದ ಬಾಲಕರು ಇಂಥ ಕೋಚಿಂಗ್ ಫ್ಯಾಕ್ಟರಿಗೆ ಸೇರುವ ಬೆಳವಣಿಗೆ ಕಂಡುಬರುತ್ತಿದೆ. ಮನೆಯಲ್ಲಿ ಪೋಷಕರ ಆರೈಕೆಯಲ್ಲಿದ್ದ ಮಕ್ಕಳು ಏಕಾಏಕಿ ಇಂಥ ವಾತಾವರಣಕ್ಕೆ ತೆರಳಿದ ಬಳಿಕ ಕಠಿಣ ತರಬೇತಿಗೆ ಗುರಿಯಾಗುತ್ತಾರೆ. ಜೊತೆಗೆ ಇಂಥ ಸೆಂಟರ್‌ಗಳ ವಾತಾವರಣವೂ ಸೂಕ್ತವಾಗಿರುವುದಿಲ್ಲ. ಮಾನಸಿಕವಾಗಿ ಇದನ್ನು ಎದುರಿಸುವ ಶಕ್ತಿ ಹೊಂದಿರದ ಮಕ್ಕಳು ಒತ್ತಡ ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2020ರ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ ಅನ್ವಯ ದೇಶದ ಶೇ.8.2ರ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸೆಂಟರ್‌ಗಳ ಮೇಲೆ ಯಾವುದೇ ನಿಗಾ ಮತ್ತು ಕಡಿವಾಣ ಇಲ್ಲದಾಗಿದೆ. ಹೀಗಾಗಿ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.