ರಾಜಕೀಯ ಪಕ್ಷಗಳ ಉಚಿತ ಘೋಷಣೆ ಚಾಳಿಗೆ ಚಾಟಿ - ಜನರಿಗೆ ದುಡಿವ ಮನಸ್ಸೇ ಇಲ್ಲ: ಸುಪ್ರೀಂ ಕೋರ್ಟ್‌

Published : Feb 13, 2025, 06:55 AM IST
supreme court on triple talaq

ಸಾರಾಂಶ

ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡುತ್ತಿರುವ ಉಚಿತ ಕೊಡುಗೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಇಂಥ ಯೋಜನೆಗಳಿಂದಾಗಿ ಜನರಿಗೆ ಕೆಲಸ ಮಾಡಲು ಮನಸ್ಸೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.

ನವದೆಹಲಿ: ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡುತ್ತಿರುವ ಉಚಿತ ಕೊಡುಗೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಇಂಥ ಯೋಜನೆಗಳಿಂದಾಗಿ ಜನರಿಗೆ ಕೆಲಸ ಮಾಡಲು ಮನಸ್ಸೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.

ಜೊತೆಗೆ, ‘ಹೀಗೆ ಮಾಡುವುದರಿಂದ, ಜನರನ್ನು ಮುಖ್ಯವಾಹಿನಿಗೆ ತಂದು ರಾಷ್ಟ್ರಾಭಿವೃದ್ಧಿಗೆ ಕೊಡುಗೆ ನೀಡಲು ಸಶಕ್ತರಾಗಿಸುವ ಬದಲು, ಪರಾವಲಂಬಿಗಳನ್ನಾಗಿ ಮಾಡುತ್ತಿಲ್ಲವೇ?’ ಎಂದು ಸರ್ಕಾರಗಳನ್ನು ಖಾರವಾಗಿ ಪ್ರಶ್ನಿಸಿದೆ.

ನಗರ ಪ್ರದೇಶಗಳಲ್ಲಿ ನಿರಾಶ್ರಿತರ ಆಶ್ರಯದ ಹಕ್ಕಿನ ಕುರಿತಾದ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ, ನ್ಯಾ। ಬಿ.ಆರ್‌. ಗವಾಯ್‌ ಹಾಗೂ ನ್ಯಾ.ಅಗಸ್ಟಿನ್‌ ಜಾರ್ಜ್‌ ಮಸೀಹ್‌ ಅವರನ್ನೊಳಗೊಂಡ ಪೀಠ, ‘ಚುನಾವಣೆಗೆ ಮುನ್ನ ಘೋಷಿಸಿದ ಉಚಿತ ಪಡಿತರ ಹಾಗೂ ‘ಲಡ್ಕಿ ಬಹಿನ್‌’ (ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ ಮಹಾರಾಷ್ಟ್ರ ಸ್ಕೀಂ) ರೀತಿಯ ಯೋಜನೆಗಳಿಂದಾಗಿ ಜನರಿಗೆ ಕೆಲಸ ಮಾಡದೆಯೇ ಪಡಿತರ ಮತ್ತು ಹಣ ಸಿಗುವಂತಾಗಿದೆ. ಹೀಗಾಗಿ ಜನರೀಗ ಕೆಲಸ ಮಾಡುವುದಕ್ಕೇ ಹಿಂಜರಿಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದೆ.

ಇದೇ ವೇಳೆ, ‘ಮಹಿಳೆಯರು ಮತ್ತು ಬಡವರ ಕುರಿತಾದ ಸರ್ಕಾರಗಳ ಕಳಕಳಿಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ ಹೀಗೆ ಜನರಿಗೆ ಉಚಿತವಾಗಿ ಪಡಿತರ ಮತ್ತು ಹಣ ನೀಡುವ ಬದಲು ಅವರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆತಂದು ದೇಶದ ಅಭಿವೃದ್ಧಿಗೆ ಅವರನ್ನೂ ಪಾಲುದಾರರನ್ನಾಗಿ ಮಾಡಲು ಅನುಮತಿ ನೀಡಬಹುದಲ್ಲವೇ?’ ಎಂದು ನ್ಯಾಯಪೀಠ ಪ್ರಶ್ನಿಸಿತು.

ಈ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌, ‘ಕೆಲಸ ಸಿಗುವಂತಿದ್ದರೆ ದೇಶದಲ್ಲಿ ಯಾರೂ ದುಡಿಯುವುದರಿಂದ ಹಿಂದೆ ಸರಿಯುವುದಿಲ್ಲ’ ಎಂದರು.

ಇದಕ್ಕೆ ಉತ್ತರಿಸಿದ ನ್ಯಾ.ಗವಾಯ್‌, ‘ನೀವು ಅರಿವಿನ ಒಂದು ಬದಿಯನ್ನಷ್ಟೇ ನೋಡಿದ್ದೀರಿ. ನಾನು ಕೂಡ ಮಹಾರಾಷ್ಟ್ರದ ಕೃಷಿ ಕುಟುಂಬದಿಂದ ಬಂದಿದ್ದೇನೆ. ಚುನಾವಣಾ ಪೂರ್ವದಲ್ಲಿ ಘೋಷಿಸಲಾದ ಉಚಿತಗಳಿಂದಾಗಿ ರಾಜ್ಯದಲ್ಲೀಗ ಕೃಷಿಕರಿಗೆ ಕಾರ್ಮಿಕರು ಸಿಗುತ್ತಿಲ್ಲ’ ಎಂದು ಹೇಳಿದರು.

ಈ ವೇಳೆ, ವಿಚಾರಣೆ ನಡೆಯುತ್ತಿದ್ದ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ‘ನಿರಾಶ್ರಿತರಿಗೆ ಆಶ್ರಯ ಒದಗಿಸುವ ನಗರಗಳ ಬಡತನ ನಿರ್ಮೂಲನಾ ಮಿಷನ್‌ ಅನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಯೋಜನೆಯನ್ನು ಎಂದಿನಿಂದ ಜಾರಿಯಾಗುವುದು ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆಯುವಂತೆ ಸೂಚಿಸಿದೆ. ಅಂತೆಯೇ, ಅಲ್ಲಿಯವರೆಗೆ ಈಗಿರುವ ಯೋಜನೆ ಮುಂದುವರೆಯುವುದೇ ಎಂದೂ ಪ್ರಶ್ನಿಸಿದೆ.

ಉಚಿತ ಹಣ, ಪಡಿತರದಿಂದಾಗಿ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು ಸಿಗದಂತಾಗಿದೆ

- ಜನರನ್ನು ಸಶಕ್ತ ಮಾಡುವ ಬದಲು ಪರಾವಂಬಿಗಳನ್ನಾಗಿಸುತ್ತಿಲ್ಲವೇ?: ಕೋರ್ಟ್‌

ಕೋರ್ಟ್‌ ಹೇಳಿದ್ದೇನು?

- ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಉಚಿತ ಪಡಿತರ, ಹಣ ವಿತರಣೆ ಯೋಜನೆ ಘೋಷಿಸುತ್ತಿವೆ

- ಇಂತಹ ಯೋಜನೆಗಳಿಂದಾಗಿ ಕೆಲಸ ಮಾಡದಿದ್ದರೂ ಜನರಿಗೆ ಉಚಿತವಾಗಿ ಪಡಿತರ, ಹಣ ಸಿಗುತ್ತಿದೆ

- ಹೀಗಾಗಿ ಜನರು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಅವರಿಗೆ ದುಡಿಮೆ ಮಾಡುವ ಮನಸ್ಸಿಲ್ಲ

- ಮಹಿಳೆಯರು ಹಾಗೂ ಬಡವರ ಕುರಿತಾದ ಸರ್ಕಾರಗಳ ಕಳಕಳಿಯನ್ನು ನಾವು ಪ್ರಶಂಸೆ ಮಾಡುತ್ತೇವೆ

- ಆದರೆ ಈ ರೀತಿ ಉಚಿತವಾಗಿ ನೀಡುವ ಬದಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದಲ್ಲವೇ?

- ತನ್ಮೂಲಕ ದೇಶದ ಅಭಿವೃದ್ಧಿಗೆ ಅವರನ್ನೂ ಪಾಲುದಾರರನ್ನಾಗಿ ಮಾಡಲು ಅನುಮತಿ ನೀಡಬಹುದಲ್ಲವೇ?

- ಇದೆಲ್ಲವನ್ನೂ ಮಾಡುವುದನ್ನು ಬಿಟ್ಟು ನಾವು ಜನರನ್ನು ಪರಾವಲಂಬಿ ಮಾಡುತ್ತಿಲ್ಲವೇ: ಸುಪ್ರೀಂಕೋರ್ಟ್‌

- ಕೆಲಸ ಸಿಗುವಂತಿದ್ದರೆ ಜನ ದುಡಿಯುವುದರಿಂದ ಹಿಂದೆ ಸರಿಯಲ್ಲ: ವಕೀಲ ಪ್ರಶಾಂತ್‌ ಭೂಷಣ್‌ ವಾದ

- ನಾನೂ ಮಹಾರಾಷ್ಟ್ರದ ಕೃಷಿ ಕುಟುಂಬದಿಂದ ಬಂದವನು. ಅಲ್ಲಿ ಕೃಷಿ ಕಾರ್ಮಿಕರು ಸಿಗ್ತಿಲ್ಲ: ನ್ಯಾ. ಗವಾಯಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ