ತೆಲಂಗಾಣದಲ್ಲಿ ಆರಂಭಿಸಲಾಗಿರುವ ಜಾತಿ ಗಣನೆ : ವೈಯಕ್ತಿಕ ಮಾಹಿತಿ ನೀಡಲು ಹಿಂದೇಟು - ಜನಾಕ್ರೋಶ?

KannadaprabhaNewsNetwork | Updated : Nov 11 2024, 05:00 AM IST

ಸಾರಾಂಶ

ತೆಲಂಗಾಣದಲ್ಲಿ ಆರಂಭಿಸಲಾಗಿರುವ ಜಾತಿ ಗಣನೆಯು ಗಣತಿದಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಅವರು ಜನಾಕ್ರೋಶ ಎದುರಿಸಬೇಕಾಗಿ ಬಂದಿದೆ ಎಂದು ತೆಲಂಗಾಣದ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಹೈದರಾಬಾದ್‌: ತೆಲಂಗಾಣದಲ್ಲಿ ಆರಂಭಿಸಲಾಗಿರುವ ಜಾತಿ ಗಣನೆಯು ಗಣತಿದಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಅವರು ಜನಾಕ್ರೋಶ ಎದುರಿಸಬೇಕಾಗಿ ಬಂದಿದೆ ಎಂದು ತೆಲಂಗಾಣದ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಗಣತಿದಾರಿಗೆ ಜನರು ವೈಯಕ್ತಿಕ ವಿವರಗಳು, ಜಾತಿಯ ಮಾಹಿತಿ ಹಾಗೂ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಮಾಹಿತಿಗಳನ್ನು ನಿಜವಾಗಿಯೂ ಸರ್ಕಾರ ಸದುದ್ದೇಶಕ್ಕೆ ಬಳಸಿಕೊಳ್ಳುತ್ತದೆಯೆ? ಈ ಮಾಹಿತಿಗಳನ್ನು ಇಟ್ಟುಕೊಂಡು ಮುಂದೆ ನಮ್ಮ ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಆಗಬಹುದೆ? ಎಂದು ಕೆಲವು ಜನರು ಸಂದೇಹ ಪಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.ಗಣತಿದಾರರಿಗೆ ಪೇಚು:

ಗಣತಿದಾರರು ಮನೆಗಳಿಗೆ ಗಣತಿಗೆಂದು ಹೋದಾಗ ಕೆಲವರು ಅವರನ್ನು ಈ ಮೇಲಿನ ವಿಚಾರಗಳನ್ನು ಮುಂದಿಟ್ಟುಕೊಂಡು ದಬಾಯಿಸುತ್ತಿರುವ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಈ ಸಂಬಂಧ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಗಣತಿದಾರರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸುವುದು ಕಾಣಿಸುತ್ತದೆ.‘ನೀವು ಏಕೆ ನಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಿದ್ದೀರಿ? ಅವುಗಳು ದುರ್ಬಳಕೆ ಆಗಲ್ಲ ಎಂಬ ಗ್ಯಾರಂಟಿ ಏನು? ಈ ಮಾಹಿತಿ ಬಳಸಿಕೊಂಡು ನೀವು ನಮಗೆ ಸರ್ಕಾರಿ ಯೋಜನೆಗಳನ್ನು ಕಡಿತಗೊಳಿಸಿದರೆ?..’ ಎಂಬ ಇತ್ಯಾದಿ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.

ಇದಲ್ಲದೆ ಕೆಲವರು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಸರ್ಕಾರದ ವಿರುದ್ಧವೂ ತಮ್ಮ ಸಿಟ್ಟನ್ನು ಗಣತಿದಾರರ ಮುಂದೆ ತೀರಿಸಿಕೊಳ್ಳುತ್ತಿದ್ದಾರೆ. ‘ಸರ್ಕಾರ ನೀಡಿದ ಗ್ಯಾರಂಟಿ ಭರವಸೆಗಳು ಈಡೇರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವು ಗಣತಿದಾರರನ್ನು ಹೈರಾಣಾಗಿಸಿವೆ ಎಂದು ವರದಿಗಳು ಹೇಳಿವೆ.

ಜಾತಿ ಗಣತಿ ಹೇಗೆ ನಡೆದಿದೆ?:ತೆಲಂಗಾಣದಾದ್ಯಂತ 1 ತಿಂಗಳ ಮಟ್ಟಿಗೆ ನಡೆಸಲಾಗುವ ಜಾತಿ ಸಮೀಕ್ಷೆಗಾಗಿ ಸರ್ಕಾರ 50,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರತಿಯೊಬ್ಬ ಮೇಲ್ವಿಚಾರಕರು 150 ಮನೆಗಳಿಂದ ಮಾಹಿತಿ ಸಂಗ್ರಹಣೆ ಮಾಡುತ್ತಾರೆ. ಸಮೀಕ್ಷೆಯನ್ನು 2 ಭಾಗಗಳಲ್ಲಿ ನಡೆಸಲಾಗುತ್ತದೆ, ಇದರಲ್ಲಿ 75 ಪ್ರಶ್ನೆಗಳು - 56 ಮುಖ್ಯ ಪ್ರಶ್ನೆಗಳು ಮತ್ತು 19 ಪೂರಕ ಪ್ರಶ್ನೆಗಳು. ಈ ಪ್ರಶ್ನೆಗಳು ವೈಯಕ್ತಿಕ ವಿವರಗಳು, ಕುಟುಂಬದ ಮಾಹಿತಿ, ಶಿಕ್ಷಣ, ಉದ್ಯೋಗ, ಸ್ವತ್ತುಗಳು, ಜಾತಿ ಸ್ಥಿತಿ ಮತ್ತು ಇತ್ಯಾದಿಗಳನ್ನು ಒಳಗೊಂಡಿವೆ.

ಮುಸ್ಲಿಮರಿಗೆ ಮೀಸಲು ಹೆಚ್ಚಿಸಲು ಕಾಂಗ್ರೆಸ್ ಸಂಚು: ಶಾ

ಜಲಗಾಂವ್‌

ಮಹಾರಾಷ್ಟ್ರದ ಸಾಮಾಜಿಕ ವ್ಯವಸ್ಥೆಯನ್ನು ಬಲಿಕೊಟ್ಟು ವಿಪಕ್ಷಗಳ ಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ), ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ. ಮುಸ್ಲಿಮರಿಗೆ ಧರ್ಮಾಧರಿತ ಮೀಸಲು ನೀಡಿ ಇತರರ ಮೀಸಲು ಕಿತ್ತುಕೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.

ಜಲಗಾಂವ್‌ನ ರೇವರ್ ವಿಧಾನಸಭಾ ಕ್ಷೇತ್ರದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ‘ಮುಸ್ಲಿಂ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕೋರಿ ಉಲೇಮಾ ಅಸೋಸಿಯೇಷನ್ ​​ಪ್ರತಿಪಕ್ಷ ಕಾಂಗ್ರೆಸ್‌ಗೆ ಮನವಿ ಸಲ್ಲಿಸಿದೆ. ಇದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಕೂಡ ಒಪ್ಪಿದ್ದಾರೆ. ಮುಸ್ಲಿಮರಿಗೆ ಶೇ.10ರಷ್ಟು ಮೀಸಲು ನೀಡಿದರೆ ಅದು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರಯೋಜನಗಳನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಏಕೆಂದರೆ ಮೀಸಲಿಗೆ ಶೇ.50ರ ಮಿತಿ ಇದ್ದು ಅಷ್ಟರೊಳಗೇ ಇತರರ ಮೀಸಲನ್ನು ತಿಂದು ಹಾಕಿ ಮುಸ್ಲಿಮರಿಗೆ ನೀಡಲಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಬಿಜೆಪಿ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ದೃಢವಾಗಿ ಬದ್ಧ. ಆದರೆ ಮುಸ್ಲಿಮರಿಗೆ ಯಾವುದೇ ರೀತಿಯ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತದೆ. ಇದು ನಮ್ಮ ಬದ್ಧತೆ’ ಎಂದು ಶಾ ನುಡಿದರು.‘ಎಂವಿಎ ಪಕ್ಷಗಳು ತಮ್ಮ ತುಷ್ಟೀಕರಣದ ರಾಜಕೀಯದಿಂದಾಗಿ ದೇಶದ ಸುರಕ್ಷತೆಯನ್ನು ರಾಜಿ ಮಾಡಿಕೊಂಡಿವೆ. ಅವರು ಮತಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

Share this article